ದೇವೆಗೌಡರ ನಾಮಪತ್ರ ಸಲ್ಲಿಕೆಗೂ ಮುನ್ನ ಅಪಸ್ವರ..?

  ತುಮಕೂರು:

 

      ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯ ನಾಮಪತ್ರ ಸಲ್ಲಿಕೆ ಕಾರ್ಯ ಭರದಿಂದ ಸಾಗಿ ಇಡೀ ದೇಶದ ಜನತೆ ತಿರುಗಿ ನೊಡುವ ರೀತಿಯಲ್ಲಿ ಗಮನ ಸೆಳೆದಿರುವುದು ಹೆಚ್.ಡಿ.ದೇವೆಗೌಡರು ಕಣಕ್ಕಿಳಿದಿರುವುದು ವಿಶೇಷ. ಆದರೆ, ವಿಶೇಷವೆಂದರೆ ದೊಡ್ಡ ಗೌಡರ ನಾಮಪತ್ರ ಸಲ್ಲಿಕೆಗೂ ಮುನ್ನ ಖಾಲಿ ಕೊಡಗಳ ಸ್ವಾಗತ ‘ಗೋ ಬ್ಯಾಕ್ ದೇವೇಗೌಡ’ ಎಂಬ ಪದಗಳು ಗೌಡರನ್ನ ಪೇಚಿಗೆ ಸಿಲುಕಿಸಿತ್ತು.

      ಹೆಚ್.ದೇವೇಗೌಡ ಅವರು ಇಂದು ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜ್ಯೋತಿಷಿಗಳ ಸಲಹೆಯಂತೆ 2.11ಕ್ಕೆ ಸರಿಯಾಗಿ ದೇವೇಗೌಡರು, ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡಿದರು.

      ಹೆಚ್.ಡಿ.ದೇವೇಗೌಡರಿಗೆ ಡಿಸಿಎಂ ಡಾ.ಜಿ ಪರಮೇಶ್ವರ್ ಹಾಗೂ ಮಾಜಿ ಶಾಸಕ ಕೆಕೆ ಷಡಕ್ಷರಿ, ಡಾ||ರಫೀಕ್ ಅಹಮದ್, ರಮೇಶ್ ಬಾಬು ಸಾಥ್ ನೀಡಿದರು.

      ನಾಮಪತ್ರ ಸಲ್ಲಿಕೆಗೂ ಮುನ್ನ ತುಮಕೂರಿನ ಸರ್ಕಾರಿ ಕಾಲೇಜು ಮೈದಾನದಿಂದ ಡಿಸಿ ಕಚೇರಿವರೆಗೂ ಹೆಚ್ಡಿಡಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಸ್ಪಲ್ಪ ಹೊತ್ತು ಮೆರವಣಿಗೆ ನಡೆಸಿದ ನಂತರ ನಾಮಪತ್ರ ಸಲ್ಲಿಕೆಗೆ ಸಮಯದ ಅಭಾವವಿರುವುದನ್ನ ಅರಿತು, ತೆರೆದ ವಾಹನದಿಂದ ಇಳಿದು ಡಿಸಿ ಕಚೇರಿಗೆ ಕಾರಿನಲ್ಲಿ ಆಗಮಿಸಿದರು. ಈ ವೇಳೆ ದೇವೇಗೌಡರಿಗೆ ಡಿಸಿಎಂ ಪರಮೇಶ್ವರ್ ಸಾಥ್ ನೀಡಿದರು. ದೇವೇಗೌಡರ ವರ್ಚಸ್ಸಿಗೆ ಹಾಗೂ ಪ್ರಾದೇಶಿಕ ಪಕ್ಷದ ರಾಷ್ಟ್ರೀಯ ನಾಯಕರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಿರೀಕ್ಷೆಗೂ ಮೀರಿದ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಬೇಕಿತ್ತು. ಆದರೆ ಹಾಗಾಗಲಿಲ್ಲ. ಕೇವಲ ಮೂರರಿಂದ ನಾಲ್ಕು ಸಾವಿರ ಜನರು ಆಗಮಿಸಿದ್ದನ್ನು ಗಮನಿಸಿದರೆ, ಗೌಡರ ಆಗಮನ ಈ ಕ್ಷೇತ್ರದ ಕಾರ್ಯಕರ್ತರ ನೀರಸ ಪ್ರತಿಕ್ರಿಯೆಗೆ ಕಾರಣೀಬೂತವಾಗಿತ್ತು. ಜೆಡಿಎಸ್ ಭದ್ರಕೋಟೆಯೆಂದೇ ಬಿಂಬಿತವಾಗಿರುವ ತುಮಕೂರು ಕ್ಷೇತ್ರದಲ್ಲೇ ದೇವೇಗೌಡರ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಕ್ಷೀಣಿಸಿದ ಜನಸಂಖ್ಯೆಯನ್ನು ಗಮನಿಸಿದರೆ, ಇಲ್ಲಿಯ ಸ್ಥಳೀಯ ನಾಯಕರಿಗೆ ಹಾಗೂ ಮುಖಂಡರಿಗೆ ವಿಶ್ವಾಸವಿರುವಂತೆ ಕಂಡುಬರುತ್ತಿಲ್ಲ. ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಹೆಚ್ಚು ಆಗಮಿಸಿದ ಕಾರ್ಯಕರ್ತರನ್ನು ಹೊರತುಪಡಿಸಿದರೆ, ಹೆಚ್.ಡಿ.ದೇವೇಗೌಡರು ‘ಮೊಟ್ಟಮೊದಲೇ ಕಂಡರು ಕೆಟ್ಟಕನಸ’ ಎಂಬುವಂತೆ ಸದಾ ಜ್ಯೋತಿಷ್ಯ ಹಾಗೂ ಶಕುನಗಳ ಮೇಲೆ ಅವಲಂಭಿತವಾಗಿದ್ದ ದೊಡ್ಡಗೌಡರಿಗೆ ಖಾಲಿಕೊಡಗಳು ಎದುರಾಗಿದ್ದು, ‘ಗೋ ಬ್ಯಾಕ್ ದೇವೇಗೌಡ’ ಎಂಬ ಪದಗಳು ಅಶುಭ ಸಂಕೇತವಾಗಿ ಕಂಡುಬರುತ್ತಿದೆ ಎಂದು ಜೆಡಿಎಸ್ ಕಾರ್ಯಕರ್ತರೇ ಮಾತನಾಡಿಕೊಳ್ಳುತ್ತಿದ್ದರು.

     ಈ ಮೊದಲು ಕೊನೆಗೂ ಸಂಸದ ಮುದ್ದಹನುಮೇಗೌಡ ಅವರು ತುಮಕೂರು ಕ್ಷೇತ್ರದಿಂದ ಕಾಂಗ್ರೆಸ್ ನ ಅಧಿಕೃತ ಹಾಗೂ ಬಂಡಾಯ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.

      ಮುದ್ದಹನುಮೇಗೌಡರಿಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಕೆ.ಆರ್.ರಾಜೇಂದ್ರ, ಸಾಸಲು ಸತೀಶ್, ರಾಯಸಂದ್ರ ರವಿಕುಮಾರ್, ಕಲ್ಲಹಳ್ಳಿ ದೇವರಾಜು ಸೇರಿದಂತೆ ಬಹುತೇಕ ಕಾಂಗ್ರೆಸ್ ಪದಾಧಿಕಾರಿಗಳು ಮುದ್ದಹನುಮೇಗೌಡರ ಮೆರವಣಿಗೆಯಲ್ಲಿ ಕಂಡುಬಂದರು. ಕಾಂಗ್ರೆಸ್ ಪಕ್ಷದ ಶಾಲುಗಳನ್ನು ತಮ್ಮ ಕೊರಳಿಗೆ ಹಾಕಿ ಕಾಂಗ್ರೆಸ್ ಬಾವುಟ ಹಿಡಿದು ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು. ಮುದ್ದಹನುಮೇಗೌಡರು ಒತ್ತಾಯಕ್ಕೆ ಮಣಿದು ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯುತ್ತಾರೆಂಬ ಅನುಮಾನದಿಂದ ಕೆ.ಎನ್.ರಾಜಣ್ಣನವರೂ ಸಹಾ ಕಾಂಗ್ರೆಸ್ ಶಾಲನ್ನು ಕೊರಳಿಗೆ ಹಾಕಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದು, ಮತ್ತಷ್ಟು ಕುತೂಹಲಕ್ಕೆಡೆಮಾಡಿಕೊಟ್ಟಿತ್ತು.

      ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸಮ್ಮಿಶ್ರ ಸರ್ಕಾರದ ದೋಸ್ತಿ ಪಣಕ್ಕಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದಂತೂ ಹೌದು.
ಇನ್ನು ಹಲವು ಬಾರಿ ಸಂಸದರಾಗಿರುವ ಹಾಗೂ ಹಾಲಿ ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡದೇ ಕೈ ಕಾರ್ಯಕರ್ತರಲ್ಲಿ ಅಸಮಧಾನದ ಹೊಗೆಯೆದ್ದಿರುವುದು ಸುಳ್ಳಲ್ಲ. ಈ ಹೊಗೆ ಜೆಡಿಎಸ್ ನ್ನು ಮುಳುಗಿಸಿದರೂ ಅಚ್ಚರಿಯಿಲ್ಲ.

      ಈ ಹಿನ್ನೆಲೆಯಲ್ಲಿ ದೇವೇಗೌಡರು ನಿಜಕ್ಕೂ ಗೆಲುವಿನ ಹಣ್ಣು ಮೆಲ್ಲುತ್ತಾರಾ ಇಲ್ಲ ಸೋಲಿನ ಹುಳಿಗೆ ಮುಖ ಕಿವುಚುತ್ತಾರಾ ಕಾದುನೋಡಬೇಕಿದೆ.
ಜೆಡಿಎಸ್ ಪಕ್ಷದ ಕುಣಿಗಲ್ ಕ್ಷೇತ್ರದ ಮಾಜಿ ಶಾಸಕ ಡಿ.ನಾಗರಾಜಯ್ಯ ನಾಮಪತ್ರ ಸಲ್ಲಿಸಿರುವುದು, ನಾಮಪತ್ರ ಸಲ್ಲಿಸಿದ ನಂತರ ಮೈತ್ರಿ ಪಕ್ಷಗಳ ಪತ್ರಿಕಾ ಗೋಷ್ಠಿಯಲ್ಲಿ ಕಾಣಿಸಿಕೊಂಡದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

      ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಮನವೊಲಿಕೆ ವಿಫಲವಾದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮುದ್ದಹನುಮೇಗೌಡರನ್ನು ಮನವೊಲಿಸಲು ಯತ್ನಿಸಿದರು. ಜೆಡಿಎಸ್ ಬಿಟ್ಟುಕೊಟ್ಟಿರುವ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಫರ್ ನೀಡಿದ್ರೂ. ಅದನ್ನು ತಿರಸ್ಕರಿಸಿರುವ ಮುದ್ದಹನುಮೇಗೌಡ ಅವರು ತುಮಕೂರಿನಿಂದಲೇ ನಾಮಪತ್ರ ಸಲ್ಲಿಸಿದ್ದಾರೆ

(Visited 16 times, 1 visits today)

Related posts