ಕಲ್ಪತರು ನಾಡಲ್ಲಿ ನಗೆಬೀರಿದ ಕಮಲ!

ತುಮಕೂರು:

     ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ವಿರುದ್ಧ ಗೆಲುವು ಸಾಧಿಸಿದ್ದೇನೆಂಬ ಸಂತಸದಲ್ಲಿ ಇದು ಬಸವರಾಜುರವರ ಅಭೂತಪೂರ್ವ ಗೆಲುವು ಎಂದೆಲ್ಲಾ ಮಾತನಾಡಿಕೊಳ್ಳುತ್ತಿರುವ ಬಿಜೆಪಿಗರು ಒಮ್ಮೆ ಆಲೋಚಿಸಬೇಕಿದೆ. ಈ ಗೆಲುವಿನ ಹಿಂದೆ ದೇವೇಗೌಡರ ವಿರೋಧಿ ಅಲೆ ಬಹುಮುಖ್ಯವಾಗಿ ಕಂಡುಬರುತ್ತಿದ್ದು, ಅದರೊಟ್ಟಿಗೆ ಮೋದಿಯ ಅಲೆ, ಭಕ್ತರ ಮುಗ್ಧತೆ ಗೆಲುವಿಗೆ ಸೋಪಾನವಾಗಿದೆ ಎಂದರೂ ತಪ್ಪಾಗಲಾರದು. 4 ಬಾರಿ ಸಂಸದರಾಗಿದ್ದ ಜಿ.ಎಸ್.ಬಸವರಾಜು ಜಿಲ್ಲೆಯ ಶಾಶ್ವತ ಅಭಿವೃದ್ಧಿಗಳೆಡೆ ಗಮನಹರಿಸಿಲ್ಲವೆಂಬ ಆಪಾದನೆಯಿಂದ ಹೊರತಾಗಲಿಲ್ಲವಾದರೂ ದೇವೇಗೌಡರನ್ನ ಸೋಲಿಸಿಯೇ ತೀರಬೇಕೆಂಬ ಮನೋಭಾವವುಳ್ಳ ಗೌಡರ ವಿರೋಧಿ ಬಣಗಳು ಬಿಜೆಪಿಯ ಬಸವರಾಜುಗೆ ಆಸರೆಯಾಗಿ ಬೆಂಬಲಿಸಿದರು. ಗೌಡರ ವಿರೋಧದ ಅಲೆಯಲ್ಲಿ ತೇಲಿ ಬಂದಿರುವ ಬಸವರಾಜು, ಮಾಜಿ ಪ್ರಧಾನಿಯ ವಿರುದ್ಧ ಆಯ್ಕೆಯಾಗಿ ಬಂದ ಅಭ್ಯರ್ಥಿ ಎಂಬ ಬೃಹತ್ ಹಣೆಪಟ್ಟಿಯನ್ನ ಕಟ್ಟಿಕೊಂಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಮಾಜಿ ಪ್ರಧಾನಿಯನ್ನ ಸೋಲಿಸಿದ್ದ ಸಂಸದರೆಂಬ ಅಭಿಮಾನ ಎಲ್ಲರೂ ತೋರಿಸುತ್ತಾರೆ. ಅದು ಕೇಂದ್ರ ಸಚಿವ ಸ್ಥಾನದ ಗದ್ದುಗೆಯವರೆಗೆ ಕೊಂಡೊಯ್ಯಬಹುದು.

      ತುಮಕೂರು ನಗರ, ತುಮಕೂರು ಗ್ರಾಮಾಂತರ, ಮಧುಗಿರಿ, ತಿಪಟೂರು, ಗುಬ್ಬಿ ಈ 5 ಕ್ಷೇತ್ರಗಳೂ ಬಿಜೆಪಿಯ ಬಸವರಾಜುರವರಿಗೆ ಅತಿಹೆಚ್ಚು ಲೀಡ್ ಕೊಟ್ಟು ಗೆಲುವು ತಂದುಕೊಟ್ಟವು. ಈ ಕ್ಷೇತ್ರಗಳು ದೇವೇಗೌಡರ ವಿರುದ್ಧವಾಗಿ ಅತಿಹೆಚ್ಚು ಮತ ಚಲಾಯಿಸಿವೆ. ದೇವೇಗೌಡರಿಗೆ ತುರುವೇಕೆರೆ ಅತಿಹೆಚ್ಚು ಮತಗಳನ್ನ ನೀಡಿದರೆ, ಚಿಕ್ಕನಾಯಕನಹಳ್ಳಿ ಮತ್ತು ಕೊರಟಗೆರೆ ಕ್ಷೇತ್ರಗಳು ಬಿಜೆಪಿಗಿಂತ ಜೆಡಿಎಸ್‍ನ ಹೆಚ್.ಡಿ.ದೇವೇಗೌಡರಿಗೆ ಹೆಚ್ಚು ಮತ ಚಲಾಯಿಸುವ ಮೂಲಕ ದೇವೇಗೌಡರನ್ನ ಬೆಂಬಲಿಸಿದ್ದ ಕ್ಷೇತ್ರಗಳು. ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದ ಹೆಚ್.ಡಿ.ದೇವೇಗೌಡರು 5,83,344 ಮತಗಳನ್ನು ಪಡೆದರೆ, ಬಿಜೆಪಿಯ ಅಭ್ಯರ್ಥಿ ಜಿ.ಎಸ್.ಬಸವರಾಜು ರವರು 5,96,231 ಮತಗಳನ್ನು ಪಡೆದಿದ್ದಾರೆ. ಚುನಾವಣೆಯಲ್ಲಿ ಒಟ್ಟು 12,41,578 ಮತಗಳು ಚಲಾವಣೆಯಾಗಿವೆ. ಜೆಡಿಎಸ್‍ನ ಅಭ್ಯರ್ಥಿ ಹೆಚ್.ಡಿ.ದೇವೇಗೌಡರಿಗಿಂತ 12,887 ಮತಗಳ ಅಂತರದಿಂದ ಕಲ್ಪತರು ನಾಡು ಬಿಜೆಪಿ ಪಾಲಾಯಿತು. ದೊಡ್ಡಗೌಡರನ್ನ ಹಿಂದಿಕ್ಕಿ ಸೋಲಿಸಿ ನಗೆಬೀರಿದ್ದ ಬಿಜೆಪಿ ಬಸವರಾಜು ಗೆಲುವಿನ ಸಂಭ್ರಮದ ನಗೆ ಬೀರಿದರು.

      ತುಮಕೂರು ಲೋಕಸಭಾ ವ್ಯಾಪ್ತಿಯಲ್ಲಿರುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಮಧುಗಿರಿ, ತುಮಕೂರು ಗ್ರಾಮಾಂತರ ಹಾಗೂ ಗುಬ್ಬಿ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರು ಅಧಿಕಾರದಲ್ಲಿದ್ದಾರೆ. ಹಾಲಿ ಕೈಗಾರಿಕಾ ಸಚಿವ ಎಸ್.ಆರ್. ಶ್ರೀನಿವಾಸ್ ರವರ ಸ್ವಕ್ಷೇತ್ರ ಗುಬ್ಬಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಅತಿಹೆಚ್ಚು ಮತ ಪಡೆದಿದೆ. ಹಾಲಿ ಸಚಿವರ ಕ್ಷೇತ್ರದಲ್ಲೇ ಕಮಲ ನಳನಳಿಸಿರುವುದು ಜೆಡಿಎಸ್‍ಗೆ ನುಂಗಲಾರದ ತುತ್ತು. ಮೈಸೂರು ಸೇಲ್ಸ್ ಇಂಟರ್‍ನ್ಯಾಷನಲ್ ಲಿಮಿಟೆಡ್‍ನ(ಎಂಎಸ್‍ಐಎಲ್) ಅಧ್ಯಕ್ಷ ಡಿ.ಸಿ.ಗೌರಿಶಂಕರ್ ರವರ ಸ್ವಕ್ಷೇತ್ರ ತುಮಕೂರು ಗ್ರಾಮಾಂತರದಲ್ಲಿ ಕಮಲದ ಕಳೆ ರಾರಾಜಿಸುತ್ತಿದೆ. ಅತಿಹೆಚ್ಚು ಒಕ್ಕಲಿಗರ ಪ್ರಾಭಲ್ಯವಿರುವ ಈ ಕ್ಷೇತ್ರದಲ್ಲಿ ಹಾಲಿ ಜೆಡಿಎಸ್‍ನ ಶಾಸಕ ಹಾಗೂ ನಿಗಮ ಮಂಡಳಿಯ ಅಧ್ಯಕ್ಷ ಗೌರಿಶಂಕರ್, ದೇವೇಗೌಡರನ್ನ ತುಮಕೂರಿಗೆ ಕರೆತರುವಲ್ಲಿ ಆಹ್ವಾನವಿತ್ತವರಲ್ಲಿ ಇವರೂ ಒಬ್ಬರು. ಗೌಡರ ಗೆಲುವಿಗಾಗಿ ಹಗಲಿರುಳು ಟೊಂಕ ಕಟ್ಟಿ ನಿಂತರಾದರೂ, ಕಮಲವನ್ನು ಕಮರಿಸುವಲ್ಲಿ ವಿಫಲರಾಗಿದ್ದಾರೆ. ಕಾರಣ, ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜುರವರಿಗೆ ಹಿಡಿತವಿಲ್ಲವಾದರೂ ಈ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ ಹಾಗೂ ಹಾಲಿ ಶಾಸಕ ಗೌರಿಶಂಕರ್ ಇಬ್ಬರೂ ರಾಜಕೀಯವಾಗಿ ಕಡುವೈರಿಗಳು.

       ಹಾವು-ಮುಂಗಸಿಯ ಹಾಗೆ ಸದಾ ವಾಕ್ಸಮರ ಮಾಡುತ್ತಿರುವ ಇವರುಗಳು ತಮ್ಮ ಪಕ್ಷದ ಗೆಲುವಿಗಾಗಿ ಶ್ರಮಿಸಿದರು. ಮಾಜಿ ಶಾಸಕ ಸುರೇಶ ಗೌಡರು ಕೊನೆಯ 3 ದಿನಗಳಲ್ಲಿ ಗ್ರಾಮಾಂತರ ಕ್ಷೇತ್ರದ ಮತದಾರರ ಹಿಡಿತ ಸಾಧಿಸಿ, ಬಿಜೆಪಿಗೆ ಅತಿಹೆಚ್ಚು ಮತ ಬರುವಂತೆ ಶ್ರಮಿಸಿದರು ಎನ್ನುವ ಮಾತಿದೆ. ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಐಎಎಸ್ ಅಧಿಕಾರಿ ಎಂ.ವಿ.ವೀರಭದ್ರಯ್ಯ ಜೆಡಿಎಸ್ ಪಕ್ಷದ ಶಾಸಕರಾಗಿ ಅಧಿಕಾರದಲ್ಲಿದ್ದಾರಾದರೂ ಶಾಸಕರ ವಿರೋಧಿ ಅಲೆ ದೇವೇಗೌಡರ ಹಿನ್ನಡೆಗೆ ಮೂಲ ಕಾರಣವಾಗಿದೆ.

      ಜಿಲ್ಲೆಯ ಅಹಿಂದಾ ನಾಯಕನೆಂದೇ ಬಿಂಬಿತವಾಗಿರುವ ಕೆ.ಎನ್.ರಾಜಣ್ಣನವರು ವೀರಭದ್ರಯ್ಯನವರ ರಾಜಕೀಯ ಬದ್ಧ ವೈರಿಯೆಂದರೂ ತಪ್ಪಾಗಲಾರದು. ಒಕ್ಕಲಿಗರು ಮತ್ತು ಒಕ್ಕಲಿಗರೇತರ ನಾಯಕತ್ವ ಒಂದೆಡೆಯಾದರೆ, ವೀರಭದ್ರಯ್ಯನವರ ವಿರೋಧಿಗಳ ಮತ್ತೊಂದು ಪಡೆ ಮಧುಗಿರಿಯಲ್ಲಿದೆ. ಕೆ.ಎನ್.ರಾಜಣ್ಣನವರು ಸ್ವತಃ ವೀರಭದ್ರಯ್ಯನವರ ವಿರುದ್ಧವಾಗಿ ಗೌಡರ ಸೋಲಿಗೆ ಟೊಂಕಕಟ್ಟಿ ನಿಂತವರಲ್ಲಿ ಮೊದಲಿಗರು. ಮಧುಗಿರಿ ಕ್ಷೇತ್ರವೂ ಸಹಾ ದೇವೇಗೌಡರ ವಿರುದ್ಧವಾಗಿ ಬಿಜೆಪಿ ಪಕ್ಷಕ್ಕೆ ಅತಿಹೆಚ್ಚು ಮತ ನೀಡಿ ಬಿಜೆಪಿಯ ಗೆಲುವಿಗೆ ಕಾರಣವಾದ ಕ್ಷೇತ್ರವೆಂದರೂ ತಪ್ಪಾಗಲಾರದು. ಜೆಡಿಎಸ್ ನ ಶಾಸಕರಿರುವ ಕ್ಷೇತ್ರಗಳಲ್ಲೇ ಬಿಜೆಪಿ ಅತಿಹೆಚ್ಚು ಮತಗಳನ್ನು ಪಡೆದು ಜೆಡಿಎಸ್ ನ ತುಳಿಯುತ್ತಿದೆಯೆಂದರೆ, ಹಾಲಿ ಶಾಸಕರ ವಿರೋಧಿ ಅಲೆ ಎನ್ನಬಹುದಾ..? ಅಥವಾ ದೇವೇಗೌಡರ ವಿರೋಧಿ ಅಲೆ ಎನ್ನಬಹುದಾ..?

(Visited 18 times, 1 visits today)

Related posts

Leave a Comment