ಬಂಡವಾಳ, ಕೈಗಾರಿಕೆ ಆಕರ್ಷಿಸುವಲ್ಲಿ ರಾಜ್ಯ ಪ್ರಥಮ!: ಸಚಿವ ನಿರಾಣಿ


ತುಮಕೂರು:


ರಾಜ್ಯದಲ್ಲಿ ಮತ್ತಷ್ಟು ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಠಿಸುವ ಸಲುವಾಗಿ ಮುಂಬರುವ ನವೆಂಬರ್ ತಿಂಗಳಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ನವೆಂಬರ್ 2, 3 ಮತ್ತು 4 ರಂದು ಮೂರು ದಿನಗಳ ಅರಮನೆ ಮೈದಾನದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದು ಅವರು ಹೇಳಿದರು.
ನಗರದಲ್ಲಿ ಹೊರವಲಯದ ಗಂಗಾಧರಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಏರ್ಪಡಿಸಲಾಗಿರುವ ಉದ್ಯಮಿಯಾಗು ಉದ್ಯೋಗ ನೀಡು ಹಾಗೂ ಕೈಗಾರಿಕಾ ಅದಾಲತ್ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 2010 ಮತ್ತು 2012 ರಲ್ಲಿ ಆಯೋಜಿಸಿದ್ದ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ ಬಹಳ ಯಶಸ್ವಿಯಾಗಿತ್ತು. ಇದರಿಂದ 15 ಲಕ್ಷ ಜನರಿಗೆ ಉದ್ಯೋಗಾವಕಾಶ ದೊರೆತ್ತಿತ್ತು. ಹಾಗಾಗಿಯೇ ಮತ್ತೆ ನವೆಂಬರ್‍ನಲ್ಲೂ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲಾಗುತ್ತಿದೆ ಎಂದರು.
ಕರ್ನಾಟಕ ರಾಜ್ಯ ಕೈಗಾರಿಕೆಯಲ್ಲಿ ಹಾಗೂ ಬಂಡವಾಳ ಆಕರ್ಷಿಸುವಲ್ಲಿ ದೇಶದಲ್ಲೇ ಮೊದಲನೇ ಸ್ಥಾನದಲ್ಲಿದೆ. ಮುಖ್ಯಮಂತ್ರಿಗಳು ಮತ್ತು ನಾನು ದಾವೂಸ್‍ಗೆ ಹೋದಾಗ ಅತಿ ಹೆಚ್ಚು ಅಂದರೆ 65 ಸಾವಿರ ಕೋಟಿ ಬಂಡವಾಳ ಹೂಡಿಕೆ ಬಂದಿರುವುದು ನಮ್ಮ ಕರ್ನಾಟಕಕ್ಕೆ ಮಾತ್ರ ಎಂದರು.
ನಾವು ಮಕ್ಕಳನ್ನು ಬರೀ ಪದವೀಧರರನ್ನಾಗಿ ಮಾಡಿದರೆ ಸಾಲದು, ಅವರನ್ನು ಉದ್ಯಮಿಗಳನ್ನಾಗಿ ಮಾಡಬೇಕು. ಜತೆಗೆ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಕೆಲಸ ಸಹ ಆಗಬೇಕು ಎಂದು ಅವರು ತಿಳಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೈಗಾರಿಕಾ ಅದಾಲತ್ ಮಾಡಿದ ನಂತರ ಬೆಳಗಾವಿ, ಕಲ್ಬುರ್ಗಿಯಲ್ಲಿ ಮಾಡಿದ್ದೆವು. ಈಗ ತುಮಕೂರಿನಲ್ಲೂ ಮಾಡುತ್ತಿದ್ದೇವೆ ಎಂದ ಅವರು, ನಮ್ಮ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ, ಪದವೀಧರ, ತಾಂತ್ರಿಕ ಶಿಕ್ಷಣ ವ್ಯಾಸಂಗ ಮಾಡಿರುವ ಯುವಕರಿಗೆ ಉದ್ಯೋಗಾವಕಾಶ ಸಿಗಬೇಕು ಎಂಬ ಉದ್ದೇಶದಿಂದ ಕೈಗಾರಿಕಾ ಅದಲಾತ್ ಮತ್ತು ಉದ್ಯೋಗಿಯಾಗು, ಉದ್ಯೋಗ ನೀಡುವ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದರು.
ಜಿಲ್ಲಾ ವಾರು ದೊರೆಯುವ ಕಚ್ಚಾವಸ್ತುಗಳ ಬಳಸಿಕೊಂಡು ಜಿಲ್ಲಾ ಮಟ್ಟದಲ್ಲಿ ಯಾವ ಕೈಗಾರಿಕೆ ಸ್ಥಾಪನೆ ಸೂಕ್ತ ಎಂಬ ಬಗ್ಗೆ ಹಾಗೂ ಸರ್ಕಾರದಿಂದ ಕೈಗಾರಿಕೆಗಳ ಸ್ಥಾಪನೆಗೆ ದೊರೆಯುವ ಸವಲತ್ತುಗಳ ಬಗ್ಗೆ ತಿಳಿಸುವ ಕೆಲಸವನ್ನು ಈ ಕೈಗಾರಿಕಾ ಅದಲಾತ್ ಮೂಲಕ ಮಾಡಲಾಗುತ್ತಿದೆ ಎಂದರು.
ಕೈಗಾರಿಕೆ ಸ್ಥಾಪಿಸಿ ಉದ್ಯಮಿಗಳಾಗಲು ಬಯಸುವವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಿಗುವ ಸವಲತ್ತುಗಳ ಬಗ್ಗೆ ವಿಭಾಗವಾರು ತಿಳಿಸುವ ಕೆಲಸ ಮಾಡಲಾಗುತ್ತಿದೆ. ಉಚಿತವಾಗಿ ತರಬೇತಿ ಸಹ ನೀಡುತ್ತೇವೆ. ಆ ಸಂದರ್ಭದಲ್ಲಿ ಬ್ಯಾಂಕ್ ಸಾಲ ಸೌಲಭ್ಯ ಮಾಡಿಸಿಕೊಡುವಂತಹ ಕೆಲಸ ಸಹ ಆಗುತ್ತದೆ ಎಂದರು.
ಛಲ ಇರುವವರು ಏನೆಲ್ಲಾ ಸಾಧಿಸುತ್ತಾರೆ ಎನ್ನುವುದನ್ನು ಹೇಳಿಕೊಡುವುದು ಸಹ ಈ ಕಾರ್ಯಕ್ರಮದ ಸದುದ್ದೇಶವಾಗಿದೆ ಎಂದ ಅವರು, ಸರ್ಕಾರವೇ ಕೈಗಾರಿಕೋದ್ಯಮಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಕಳೆದ 2 ವರ್ಷಗಳಲ್ಲಿ ಕೊರೊನಾದಿಂದಾಗಿ ಸಣ್ಣ ಕೈಗಾರಿಕೆಗಳಿಗೆ ತುಂಬಾ ತೊಂದರೆ ಸಿಲುಕಿವೆ. ಹೀಗಾಗಿ ಸಣ್ಣ ಕೈಗಾರಿಕೆಗಳ ಸಾಲ ಸೌಲಭ್ಯದ ವ್ಯವಸ್ಥೆ ಮತ್ತಷ್ಟು ಸರಳೀಕರಣ ಮಾಡಲಾಗಿದೆ. ಕೈಗಾರಿಕೆಗಳು ಎಂದೂ ಸಹ ಚಲಾವಣೆಯಲ್ಲಿರಬೇಕು. ಅದನ್ನು ಅವಲಂಬಿಸಿರುವ ಉದ್ಯೋಗಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶ ಹೊಂದಲಾಗಿದೆ ಎಂದರು.
ತುಮಕೂರು ಮತ್ತು ಸಿರಾ ನಡುವೆ 1 ಸಾವಿರ ಎಕರೆಯಲ್ಲಿ ಕೈಗಾರಿಕಾ ಕಾರಿಡಾರ್‍ನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರ 1 ಸಾವಿರ ಕೋಟಿ ರೂ. ಅನುದಾನ ನೀಡುತ್ತಿದೆ. ಹಾಗೆಯೇ ಬಿಜಾಪುರ ಮತ್ತು ಕಲ್ಬುರ್ಗಿ ಮಧ್ಯೆ ಟೆಕ್ಸ್‍ಟೈಲ್ ಪಾರ್ಕ್ ಮಾಡಲಾಗುತ್ತಿದೆ. ಯಾದಗಿರಿ-ರಾಯಚೂರು ಮಧ್ಯೆದಮೆಘಾ ಡ್ರಗ್ ಪಾರ್ಕ್ ಸ್ಥಾಪಿಸಲಾಗುವುದು. ಇದಕ್ಕೂ ಸಹ ಕೇಂದ್ರ ಸರ್ಕಾರ 1 ಸಾವಿರ ಕೋಟಿ ರೂ. ಅನುದಾನ ನೀಡುತ್ತಿದೆ ಎಂದು ಸಚಿವ ನಿರಾಣಿ ತಿಳಿಸಿದರು.
ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಮುಂಬರುವ ದಿನಗಳಲ್ಲಿ ಕೈಗಾರಿಕೆಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ತುಮಕೂರು ಮತ್ತು ಸಿರಾ ಮಧ್ಯೆದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುವ ಚಿಂತನೆಯಿದೆ ಎಂದರು.
ಮುಂದಿನ 10 ವರ್ಷದಲ್ಲಿ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಚಿಂತನೆ ಇದ್ದು, ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಇನ್ನೂ ಚರ್ಚೆ ಹಂತದಲ್ಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಅಪರ ಮುಖ್ಯಕಾರ್ಯದರ್ಶಿ ರಮಣರೆಡ್ಡಿ, ಕೈಗಾರಿಕೆ ಅಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿಬಿಯ ಎನ್. ಶಿವಶಂಕರ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿ.ಪಂ. ಸಿಇಓ ಡಾ. ಕೆ. ವಿದ್ಯಾಕುಮಾರಿ ಮತ್ತಿತರರು ಉಪಸ್ಥಿತರಿದ್ದರು.
ರಾಷ್ಟ್ರಪತಿ ಚುನಾವಣೆಗೆ ಎನ್‍ಡಿಎ ಅಭ್ಯರ್ಥಿ ನಾಮಪತ್ರ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ದೆಹಲಿಗೆ ಹೋಗಿದ್ದಾರೆ. ಹಾಗಾಗಿ ನಮ್ಮ ಮುಖ್ಯಮಂತ್ರಿಗಳು ಸಹ ಹೋಗಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಹಾರಾಷ್ಟ್ರ ರಾಜ್ಯದ ರಾಜಕಾರಣದ ಬಗ್ಗೆ ನನಗೇನು ಹೆಚ್ಚು ಗೊತ್ತಿಲ್ಲ. ನಾನು ಸಹ ಮಾಧ್ಯಮಗಳಲ್ಲಿ ನೋಡಿದ್ದೇನೆ ಅಷ್ಟೆ. ಕಾಂಗ್ರೆಸ್‍ನವರ ಜತೆ ಹೊಂದಾಣಿಕೆಯಾಗದೆ ಬೇಸತ್ತು ಶಿವಸೇನೆ ಹಾಗೂ ಎನ್‍ಸಿಪಿ ಅವರು ಬಿಟ್ಟು ಬಂದಿದ್ದಾರೆ. ಸ್ಟೇರಿಂಗ್, ಬ್ರೇಕ್, ಎಕ್ಸಲೇಟರ್ ಬೇರೆ ಬೇರೆ ವ್ಯಕ್ತಿಗಳ ಜತೆ ಇದೆ. ಹೀಗಾಗಿ ಮಹಾರಾಷ್ಟ್ರ ಸರ್ಕಾರದಲ್ಲಿ ಅಪಘಾತ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಅಸಮಾಧಾನಿತರು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ ಎಂದರು.
ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬರುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಶಾಸಕರುಗಳು ಹಾಲಿ ಸರ್ಕಾರದ ಬಗ್ಗೆ ಬೇಸತ್ತು, ಅಸಮಾಧಾನಗೊಂಡು ಅವರಾಗಿಯೇ ಬಿಜೆಪಿ ಕಡೆ ಬರುತ್ತಿದ್ದಾರೆ. ಹಾಗಾಗಿ ಅಲ್ಲೂ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಸೂಚನೆಗಳು ಕಂಡು ಬರುತ್ತಿದೆ ಎಂದರು.
ನನಗೆ ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿಗಳು ಕೈಗಾರಿಕಾ ಇಲಾಖೆಯಂತಹ ಬಹಳ ದೊಡ್ಡ ಖಾತೆ ನೀಡಿದ್ದಾರೆ. ಅವರು ಕೊಟ್ಟಿರುವ ಜವಾಬ್ದಾರಿಯನ್ನು ಬಹಳ ಯಶಸ್ವಿಯಾಗಿ ನಿಭಾಯಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇದು ಬಿಟ್ಟು ಯಾವುದೇ ರೀತಿಯ ಬೇರೆ ಅಧಿಕಾರದ ಕಡೆ ಗಮನ ನನಗಿಲ್ಲ ಎಂದರು.

(Visited 31 times, 1 visits today)

Related posts