ಮಲೇರಿಯಾ ಜಾಗೃತಿ ಜಾಥಾಕ್ಕೆ ಶಾಸಕ ಜ್ಯೋತಿಗಣೇಶ್ ಚಾಲನೆ

ತುಮಕೂರು:
ವಿಶ್ವ ಮಲೇರಿಯಾ ದಿನದ ಅಂಗವಾಗಿ ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರ ಯದಲ್ಲಿ ಜನಸಾಮಾನ್ಯರಲ್ಲಿ ಮಲೇರಿಯಾ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಮಲೇರಿಯಾ ದಿನದ ಜಾಗೃತಿ ಜಾಥಾವನ್ನು ನಡೆಸಲಾಯಿತು.
ನಗರದ ಟೌನ್‍ಹಾಲ್ ವೃತ್ತದಲ್ಲಿ ಜಮಾಯಿಸಿದ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ನಡೆದ ಮಲೇರಿಯಾ ಜಾಗೃತಿ ಜಾಥಾಕ್ಕೆ ಶಾಸಕ ಜಿ.ಬಿ. ಜ್ಯೋತಿಗಣೇಶ್ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಜಿ.ಪಂ. ಸಿಇಓ ಡಾ. ಕೆ. ವಿದ್ಯಾಕುಮಾರಿ ಅವರು, ಮಲೇರಿಯಾ ಜ್ವರದ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ಒಂದು ಸೊಳ್ಳೆಯಿಂದ ಬರುವಂತಹ ಕಾಯಿಲೆ ಇದಾಗಿದೆ. ಈ ಹಿಂದೆ ಈ ಕಾಯಿಲೆಯಿಂದ ಅನೇಕ ಜನ ಸಾವನ್ನಪ್ಪಿದ್ದಾರೆ. ಆದರೆ ಇಂದು ಚಿಕಿತ್ಸೆಯಿಂದಾಗಿ ಸಾವು ಸಂಭವಿಸುತ್ತಿಲ್ಲ. ಇದನ್ನು ನಿರ್ಲಕ್ಷ್ಯ ಮಾಡದೆ ಜ್ವರ ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ನಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದ ಹಾಗೆ, ಸೊಳ್ಳೆಗಳು ಉತ್ಪಾದನೆಯಾಗದಂತೆ ನೋಡಿಕೊಳ್ಳಬೇಕು.
ಜತೆಗೆ ಸ್ವಚ್ಚತೆ ಕಾಪಾಡಬೇಕು. ಈ ಮೂಲಕ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ನಮ್ಮ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಮಲೇರಿಯಾ ರೋಗ ಬರದಂತೆ ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಮನವಿ ಮಾಡಿದರು.
ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಟಿ.ಎನ್. ಪುರುಷೋತ್ತಮ್ ಮಾತನಾಡಿ, ಸೊಳ್ಳೆಯಿಂದ ಹರಡುವ ಕಾಯಿಲೆ ಇದಾಗಿದೆ. ವಿಶ್ವದಾದ್ಯಂತ ಸಹಸ್ರಾರು ವರ್ಷಗಳಿಂದ ಮಲೇರಿಯಾ ಕಾಯಿಲೆ ಇದ್ದು, ಅನೇಕ ಜನ ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದರು.
ಮಲೇರಿಯಾ ದೊಡ್ಡ ಪಿಡುಗಾಗಿ ಕಾಡುತ್ತಿರುವ ಕಾಯಿಲೆ. ಇದನ್ನು ಹತೋಟಿಗೆ ತರಲು ವಿಶ್ವ ಸಂಸ್ಥೆ ಮಟ್ಟದಲ್ಲಿ 2008 ರಿಂದ ವಿಶ್ವ ಮಲೇರಿಯಾ ದಿನ ಆಚರಣೆ ಮಾಡಲಾಗುತ್ತಿದೆ. ಇದರ ನಿಯಂತ್ರಣಕ್ಕಾಗಿ ಆಗಿರುವ ಕೆಲಸಗಳ ಬಗ್ಗೆ ಚರ್ಚೆಗಳನ್ನು ಮಾಡಲಾಗುವುದು. ನಿಯಂತ್ರಣಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಚರ್ಚಿಸುವ ಸಲುವಾಗಿ ವಿಶ್ವ ಮಲೇರಿಯಾ ದಿನವನ್ನು ಆಚರಿಸಲಾಗುತ್ತಿದೆ. ಜತೆಗೆ ಈ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜಾಥಾ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮೇಯರ್ ಬಿ.ಜಿ. ಕೃಷ್ಣಪ್ಪ, ಡಿಹೆಚ್‍ಓ ಡಾ. ನಾಗೇಂದ್ರಪ್ಪ, ಡಾ. ಚೇತನ್‍ಕುಮಾರ್, ಡಾ. ಲಕ್ಷ್ಮೀಕಾಂತ್, ಆರೋಗ್ಯ ಇಲಾಖೆಯ ಪುಟ್ಟಯ್ಯ, ಚಿಕ್ಕತಿಮ್ಮಯ್ಯ, ಸತೀಶ್‍ಬಾಬು, ನಾಗರಾಜು, ತಿಮ್ಮಪ್ಪ, ಕಾಂತರಾಜು, ಶ್ರೀನಿವಾಸ್, ಮಂಜಣ್ಣ, ಜಯಣ್ಣ, ನಾಗೇಶ್, ಕಲ್ಲೇಶ್ ಮತ್ತಿತರರು ಭಾಗವಹಿಸಿದ್ದರು.

(Visited 1 times, 1 visits today)

Related posts