ಪ್ರಧಾನಿ ಮೋದಿ ಸಂವಾದ ಕಾರ್ಯಕ್ರಮ : ಮಧುಗಿರಿ ಶೈಕ್ಷಣಿಕ ಜಿಲ್ಲೆಯ 4 ವಿದ್ಯಾರ್ಥಿಗಳು ಭಾಗಿ!

ಮಧುಗಿರಿ :

      ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯುವ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವ ಅದೃಷ್ಟ ಮಧುಗಿರಿ ಶೈಕ್ಷಣಿಕ ಜಿಲ್ಲೆಯ 4 ವಿದ್ಯಾರ್ಥಿಗಳಿಗೆ ಕೂಡಿ ಬಂದಿದೆ.

      ಶೈಕ್ಷಣಿಕ ಜಿಲ್ಲೆಯ ಶಿರಾ ತಾಲೂಕಿನ ಗ್ರಾಮೀಣ ಪ್ರದೇಶದ ಬಡ ಕುಟುಂಬದ ಚಿಕ್ಕನಹಳ್ಳಿ ಸರ್ಕಾರಿ ಶಾಲೆಯ 10 ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿ ಎಸ್. ಸಾಗರ್ ಮತ್ತು ಬುಕ್ಕಾಪಟ್ಟಣದ ಸರ್ಕಾರಿ ಫ್ರೌಢಶಾಲೆಯ ವಿದ್ಯಾರ್ಥಿ ಪ್ರಜ್ವಲ್ ಶಿರಾ ತಾಲೂಕಿನ ಚಂಗಾವರ ಪ್ರೌಢಶಾಲೆಯ ವಿದ್ಯಾರ್ಥಿನಿ ಆರ್. ದೀಪಿಕ ಮತ್ತು ನಗರದ ಸಕಾರಿ ಪ್ರದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಚೈತ್ರ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು. ಜ.20 ರಂದು ನವದೆಹಲಿಯಲ್ಲಿ ನಡೆಯುವ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಭಾಗವಹಿಸುತ್ತಿದ್ದಾರೆ.

    ಬಡ ಕುಟುಂಬದ ಪ್ರತಿಭೆಗಳು :

      ನಾಲ್ಕು ಜನ ವಿದ್ಯಾರ್ಥಿಗಳು ಬಡ ಕುಟುಂಬದಿಂದ ಬಂದವರಾಗಿದ್ದು, ದೀಪಿಕ ತಂದೆ ರಾಜಣ್ಣ ಮತ್ತು ತಾಯಿ ಶಾರದ ಇಬ್ಬರೂ ಕೂಲಿ ಮಾಡಿ ಜೀವನ ನಿರ್ವಹಿಸುತ್ತಿದ್ದು, ವಿದ್ಯಾರ್ಥಿನಿ ಚೈತ್ರ ತಂದೆ ನಾಗರಾಜು ಮೃತಪಟ್ಟಿದ್ದು, ತಾಯಿ ಪುಷ್ಪ ಬೀಡಿ ಕಟ್ಟಿ ಮಗಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ.

      ಶಿರಾ ತಾಲೂಕಿನ ಎಸ್.ಕೆ.ವಿ.ಡಿ ಪದವಿ ಪೂರ್ವ ಕಾಲೇಜಿನ ಫ್ರೌಢಶಾಲಾ ವಿಭಾಗದಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಾಗರ್ ಬಡ ಕುಟುಂಬದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಯಾಗಿದ್ದು, ತಂದೆ ಸಿದ್ದಲಿಂಗಯ್ಯ ಆಟೋ ಚಾಲಕರಾಗಿ, ತಾಯಿ ಭಾಗ್ಯಮ್ಮ ಕೂಲಿ ಕೆಲಸ ನಿರ್ವಹಿಸಿ ಮಗನನ್ನು ಓದಿಸುತ್ತಿದ್ದಾರೆ. ಇಬ್ಬರು ಮಕ್ಕಳಲ್ಲಿ ದೊಡ್ಡ ಮಗನಾಗಿರುವ ಸಾಗರ್ ಶಾಲೆಯ ಎಲ್ಲಾ ಚಟುವಟಿಕೆಗಳಲ್ಲೂ ಟಾಪರ್ ಆಗಿದ್ದು, ಮಗನಿಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡುವ ಸದಾವಕಾಶ ಕೂಡಿ ಬಂದಿರುವುದು ನಮ್ಮ ಅದೃಷ್ಟವೆಂದೇ ತಂದೆ-ತಾಯಿಗಳು ಭಾವಿಸಿದ್ದೇವೆ.

      ಏನಿದು ಪರೀಕ್ಷಾ ಪೇ ಚರ್ಚಾ :

      ಮಾನವ ಸಂಪನ್ಮೂಲ ಇಲಾಖೆ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ 3 ನೇ ಬಾರಿಗೆ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮ ನಡೆಯುತ್ತಿದ್ದು, ಪರೀಕ್ಷೆಯನ್ನು ಎದುರಿಸುವಲ್ಲಿ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಗಳು, ಪರೀಕ್ಷೆಗಳ ಬಗ್ಗೆ ಭಯ, ಪರೀಕ್ಷೆಯಲ್ಲಿ ಅನುಸರಿಸಬೇಕಾದ ಸುಧಾರಣಾ ಕ್ರಮಗಳು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಪ್ರಧಾನ ಮಂತ್ರಿಗಳು ಮುಕ್ತವಾಗಿ ಸಂವಾದ ನಡೆಸಲಿದ್ದಾರೆ.

      ಆಯ್ಕೆ ಹೇಗೆ :

      ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ 9 ರಿಂದ 12 ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಆಯ್ಕೆ ಮಾಡಲಾಗಿದ್ದು, ಆನ್ ಲೈನ್ ನಲ್ಲಿ ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಹಾಗೂ ಗುಣಮಟ್ಟದ ಉತ್ತರ ನೀಡಿದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸಮರ್ಪಕ ಉತ್ತರ ನೀಡಿದ ದೇಶದ ಯಾವುದೇ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಳ್ಳುತ್ತಾರೆ. ವಿದ್ಯಾರ್ಥಿಗಳ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ.  ವಿದ್ಯಾಬ್ಯಾಸದಲ್ಲಿ ಮಗನ ಸಾಧನೆ ಖುಷಿ ನೀಡಿದ್ದು, ಬಡತನದ ಅರಿವಿರುವುದರಿಂದ ಮಗ ಎಂ.ಬಿ.ಬಿಎಸ್ ಮಾಡಿ ಬಡ ಜನತೆಯ ಸೇವೆ ಮಾಡುವ ಗುರಿ ಹೊಂದಿದ್ದು, ಎಷ್ಟೇ ಕಷ್ಟವಾದರೂ ಸರಿ ಅವನ ಅಸೆಯನ್ನು ನೆರವೇರಿಸುತ್ತೇವೆ

– ಸಿದ್ದಲಿಂಗಯ್ಯ, ವಿದ್ಯಾರ್ಥಿಯ ತಂದೆ.

      ಬುಕ್ಕಾಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮತ್ತೊಬ್ಬ ವಿದ್ಯಾರ್ಥಿ ಪ್ರಜ್ವಲ್ ಸಹ ಆಯ್ಕೆಯಾಗಿದ್ದು, ಇವರ ತಂದೆ ಪ್ರಕಾಶ್ ಗ್ರಾಮದ ಶ್ರೀ ಪಾತಾಳ ಲಿಂಗೇಶ್ವರ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಮಾಡುತ್ತಿದ್ದು, ತಾಯಿ ನಾಗರತ್ನ ಗೃಹಿಣಿಯಾಗಿದ್ದಾರೆ. ದೇವರಿಗೆ ಮಾಡಿದ ಸೇವೆ ಇಂದು ಫಲ ನೀಡಿದ್ದು, ದೇಶದ ಪ್ರಧಾನಿಯವರನ್ನು ಬೇಟಿಯಾಗುವ ಅವಕಾಶ ನಮ್ಮ ಮಗನಿಗೆ ಕೂಡಿ ಬಂದಿದೆ ಎನ್ನುತ್ತಾರೆ ಅರ್ಚಕ ಪ್ರಕಾಶ್.

      ಶಿರಾ ತಾಲೂಕಿನ ಇಬ್ಬರು ವಿದ್ಯಾರ್ಥಿಗಳಾದ ಸಾಗರ್ ಮತ್ತು ಪ್ರಜ್ವಲ್ ಶಾಲೆಯ ಎಲ್ಲಾ ಚಟುವಟಿಕೆಗಳಲ್ಲೂ ಮುಂದಿದ್ದು, ಟಾಪರ್ ಅಗಿದ್ದಾರೆ. ಅನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗಿ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನಮ್ಮ ತಾಲೂಕಿನ ಹೆಮ್ಮೆ

– ಸಿ.ವಿ ನಟರಾಜು, ಶಿರಾ ಬಿಇಓ

      ನಿಜಕ್ಕೂ ಇದೊಂದು ಸಂತೋಷದ ವಿಚಾರ. ಇಬ್ಬರು ವಿದ್ಯಾರ್ಥಿಗಳಾದ ಸಾಗರ್ ಮತ್ತು ಪ್ರಜ್ವಲ್ ಶೈಕ್ಷಣಿಕ ಜಿಲ್ಲೆಯ ಹೆಸರನ್ನು ದೆಹಲಿಯಲ್ಲಿ ಕೇಳಿಬರುವಂತೆ ಮಾಡಿದ್ದು, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಡೆಯುವ ಸಂವಾದದಲ್ಲಿ ಭಾಗವಹಿಸುತ್ತಿರುವುದು ನಮ್ಮ ಜಿಲ್ಲೆಯೇ ಹೆಮ್ಮೆ ಸಂಗತಿಯಾಗಿದೆ .

(Visited 25 times, 1 visits today)

Related posts

Leave a Comment