ತುಮಕೂರು:

      ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ಕೊಡುವಂತೆ ಜೆಡಿಎಸ್ ವರಿಷ್ಠರಿಗೆ ಅಲ್ಪಸಂಖ್ಯಾತರ ಘಟಕದ ನಗರ ಕಾರ್ಯದರ್ಶಿ ಮಖ್‍ದುಲ್ ಅಲಿ ಒತ್ತಾಯಿಸಿದರು.

      ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಮೇಯರ್ ಸ್ಥಾನವು ಬಿಸಿಎಂ(ಎ) ಮಹಿಳೆಗೆ ಮೀಸಲಾಗಿದ್ದು, 29ನೇ ವಾರ್ಡಿನಿಂದ ಗೆದ್ದಿರುವ ನಾಜಿಮಾ ಬಿ ಇಸ್ಮಾಯಿಲ್ ಹಾಗೂ 21ನೇ ವಾರ್ಡಿನಿಂದ ಗೆದ್ದಿರುವ ಲಲಿತಾ ರವೀಶ್ ನಡುವೆ ಪೈಪೋಟಿ ಇದ್ದು, ಈ ಹಿಂದೆ 2013ರಲ್ಲಿ ಈಗಾಗಲೇ ಲಲಿತಾ ರವೀಶ್ ಅವರು ಮೇಯರ್ ಆಗಿರುವ ಕಾರಣದಿಂದಾಗಿ ಈ ಭಾರೀ ಅಲ್ಪಸಂಖ್ಯಾತ ಮಹಿಳೆಗೆ ಅವಕಾಶ ನೀಡುವಂತೆ ವರಿಷ್ಠರಿಗೆ ಈಗಾಗಲೇ ಮೌಖಿಕವಾಗಿ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

      ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರದಂತೆ ತುಮಕೂರು ಮಹಾನಗರ ಪಾಲಿಕೆಯಲ್ಲಿಯೂ ಆಡಳಿತ ನಡೆಸಲು ಎರಡು ಪಕ್ಷಗಳು ಮುಂದಾಗಿದ್ದು, ಜೆಡಿಎಸ್ ಮೇಯರ್ ಸ್ಥಾನವನ್ನು, ಕಾಂಗ್ರೆಸ್ ಉಪಮೇಯರ್ ಸ್ಥಾನವನ್ನು ಹಂಚಿಕೆ ಮಾಡಿಕೊಳ್ಳಲು ಮಾತುಕತೆ ನಡೆದಿವೆ, 2013ರ ಮತಗಳಿಕೆಗೆ ಹೋಲಿಕೆ ಮಾಡಿದರೆ 2018ರ ಚುನಾವಣೆಯಲ್ಲಿ ಮುಸ್ಲಿಂ ಮತ ಪ್ರಮಾಣ ಜೆಡಿಎಸ್ ಪಕ್ಷಕ್ಕೆ ಹೆಚ್ಚಳವಾಗಿದ್ದು, ಪಕ್ಷ ಬಲವರ್ಧನೆಗೊಳ್ಳುವ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯಕ್ಕೆ ಮೇಯರ್ ಸ್ಥಾನವನ್ನು ನೀಡುವಂತೆ ಕೇಳಿಕೊಂಡರು.

      ಜೆಡಿಎಸ್‍ನಲ್ಲಿರುವ 10 ಸದಸ್ಯರಲ್ಲಿ ಕೆಲವರು ಬೆಂಬಲ ನೀಡುವುದಾಗಿ ಹೇಳಿದ್ದಾರಂತೆ, ಅದರಂತೆ ನಾಜಿಮಾ ಬಿ ಇಸ್ಮಾಯಿಲ್ ಅವರನ್ನು ಮೇಯರ್ ಮಾಡುವಂತೆ ಜಿಲ್ಲೆಯ ಜೆಡಿಎಸ್ ಶಾಸಕರು ಹಾಗೂ ಪಕ್ಷದ ಸಚಿವರಾದ ವಾಸಣ್ಣ ಅವರಲ್ಲಿ ವಿನಂತಿ ಮಾಡಿಕೊಳ್ಳುವುದಾಗಿ ತಿಳಿಸಿದರು. ಕಳೆದ 30 ವರ್ಷಗಳಲ್ಲಿ ಯಾವ ಮಹಿಳಾ ಅಭ್ಯರ್ಥಿಯೂ 3000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿಲ್ಲ, ಮುಸ್ಲಿಂ ಸಮುದಾಯದ ಮಹಿಳೆ ಮೇಯರ್ ಆಗಿ ಕಾರ್ಯನಿರ್ವಹಿಸಿಲ್ಲ ಎಂದು ಹೇಳಿದರು.

      ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಪಕ್ಷಕ್ಕೆ ಸೆಳೆಯುವ ನಿಟ್ಟಿನಲ್ಲಿ ನಾಜಿಮಾ ಬಿ ಇಸ್ಮಾಯಿಲ್ ಅವರನ್ನು ಮೇಯರ್ ಮಾಡುವುದು ಅವಶ್ಯಕವಾಗಿದ್ದು, ಇದರಿಂದ ಈಗಾಗಲೇ ಹೆಚ್ಚಿರುವ ಅಲ್ಪಸಂಖ್ಯಾತ ಮತಗಳಿಕೆ ಪ್ರಮಾಣ ಇನ್ನಷ್ಟು ಹೆಚ್ಚಳವಾಗಲಿದೆ. ತುಮಕೂರು ನಗರದಲ್ಲಿಯೇ 80 ಸಾವಿರ ಮುಸ್ಲಿಂ ಮತದಾರರಿದ್ದು, ಮುಸ್ಲಿಂ ಅಭ್ಯರ್ಥಿಯನ್ನು ಮೇಯರ್ ಆಗಿ ಆಯ್ಕೆ ಮಾಡುವುದು ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

      ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಬ್ದುಲ್ ರಖ್ದ್, ಏಕ್ಬಾಲ್ ಸೇರಿದಂತೆ ಇತರರಿದ್ದರು

(Visited 44 times, 1 visits today)