ಸವಾರರ ವರ್ತನೆ ಮೇಲೆ ನಿಗಾ ವಹಿಸಲು ಪೊಲೀಸರಿಗೆ 10 ಬಾಡಿ ಕ್ಯಾಮೆರಾ!

ತುಮಕೂರು:

      ಸಂಚಾರ ಪೊಲೀಸರು ಮತ್ತು ವಾಹನ ಸವಾರರ ವರ್ತನೆ ಮೇಲೆ ನಿಗಾ, ಪಾರದರ್ಶಕತೆ ಕಾಯ್ದುಕೊಳ್ಳಲು, ಸಂಚಾರ ನಿಯಮಗಳ ಉಲ್ಲಂಘನೆಗೆ ಕಡಿವಾಣ ಹಾಕಲು ಸಮವಸ್ತ್ರದಲ್ಲಿ(ಅಂಗಿ) ಅಳವಡಿಸಬಹುದಾದ 10 ಬಾಡಿ ಕ್ಯಾಮೆರಾಗಳನ್ನು ಸಂಚಾರ ಪೊಲೀಸರಿಗೆ ನೀಡಲಾಗಿದೆ.

      ನಗರದ ಸಂಚಾರ ಠಾಣೆ ಇಬ್ಬರು ಪಿಎಸ್‍ಐ ಮತ್ತು 8 ಎಎಸ್‍ಐಗಳು ಈ ಕ್ಯಾಮೆರಾಗಳನ್ನು ಧರಿಸಿ ಕಾರ್ಯನಿರ್ವಹಿಸಲಿದ್ದಾರೆ. ಇವುಗಳನ್ನು ಧರಿಸುವ ಪೊಲೀಸ್ ಮುಂದೆ ನಡೆಯುವ ಚಟುವಟಿಕೆಗಳು ಕ್ಯಾಮೆರಾದಲ್ಲಿ ಸೆರೆಯಾಗುತ್ತವೆ.

      ವಾಹನ ಸವಾರರು ಮತ್ತು ಚಾಲಕರು ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರಿಗೆ ಯಾಮಾರಿಸಿ ಪರಾರಿಯಾಗುವುದು, ಪೊಲೀಸ್ ಸಿಬ್ಬಂದಿ ಲಂಚ ಪೀಕುವುದು, ಕಿರುಕುಳ ನೀಡುವುದಕ್ಕೆ ಈ ವಿಶಿಷ್ಟ ಕ್ಯಾಮೆರಾ ಕಣ್ಗಾವಲಿನಿಂದ ಕಡಿವಾಣ ಬೀಳಲಿದೆ. ಗಲಾಟೆ, ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ವಾಗ್ವಾದ ಸಂದರ್ಭಗಳ ಅಸಲಿಯತ್ತು ಪತ್ತೆ ಮಾಡಲು ಈ ಕ್ಯಾಮೆರಾಗಳು ನೆರವಾಗಲಿವೆ.

      ಈ ಕ್ಯಾಮೆರಾ ಸರಾಸರಿ 300 ಗ್ರಾಂ ತೂಕವಿದೆ. ಅದರಲ್ಲಿ 100 ಮೀಟರ್ ಅಂತರದ ವರೆಗಿನ ದೃಶ್ಯಾವಳಿ ಸೆರೆಯಾಗುತ್ತದೆ. ಇದನ್ನು ಬಳಸಿ ನಿಯಮ ಉಲ್ಲಂಘಿಸಿದ ವಾಹನಗಳ ಚಿತ್ರಗಳನ್ನು ಮ್ಯಾನುವಲ್ ಮೂಲಕವೂ ಕ್ಲಿಕ್ಕಿಸಿ ದೂರು ದಾಖಲಿಸಿಕೊಳ್ಳಬಹುದು ಎಂದು ಸರ್ಕಲ್ ಇನ್‍ಸ್ಪೆಕ್ಟರ್ ಆಫ್ ಪೊಲೀಸ್(ಸಂಚಾರ) ಕೆ.ಆರ್.ಚಂದ್ರಶೇಖರ್ ಅವರು ತಿಳಿಸಿದರು.

      ಪೊಲೀಸರೊಂದಿಗೆ ಕೆಲವು ಸವಾರರು ಅನುಚಿತವಾಗಿ ವರ್ತಿಸುತ್ತಾರೆ. ಕೆಲವೊಮ್ಮೆ ನಮ್ಮ ಸಿಬ್ಬಂದಿಯ ವರ್ತನೆಯ ಕುರಿತು ಸಹ ಆರೋಪಗಳು ಬರುತ್ತವೆ. ಈ ಸಾಧನದಿಂದ ತಪ್ಪು ಯಾರದು ಎಂದು ತಿಳಿಯುತ್ತದೆ. ಕ್ರಮ ವಹಿಸಲು ಅನುಕೂಲ ಆಗುತ್ತದೆ ಎಂದು ಅವರು ಹೇಳಿದರು.

      ಸಂಚಾರ ನಿಯಮ ಉಲ್ಲಂಘನೆಯ ಸ್ಥಳ ದಂಡವನ್ನು ಇತ್ತೀಚೆಗೆ ಹೆಚ್ಚಿಸಲಾಗಿದೆ. ಇದರಿಂದ ಸವಾರರು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ. ಇದನ್ನು ತಡೆಯಲು ಈ ಕ್ಯಾಮೆರಾ ನೆರವಾಗಲಿವೆ ಎಂದು  ಜಿಲ್ಲಾ ಎಸ್ಪಿ ಕೋನ ವಂಶಿಕೃಷ್ಣ ರವರು ತಿಳಿಸಿದ್ದಾರೆ.
 

(Visited 14 times, 1 visits today)

Related posts

Leave a Comment