ತುಮಕೂರು:

      ಸ್ಮಾರ್ಟ್ ಸಿಟಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಹಾಲಿ ಶಾಸಕ ಜ್ಯೋತಿಗಣೇಶ್ ತನ್ನ ಬೆಂಬಲಿಗರೊಂದಿಗೆ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಕೇಂದ್ರ ಸರ್ಕಾರದ ಮಹತ್ತರ ಯೋಜನೆಗಳಲ್ಲೊಂದಾದ ಸ್ಮಾರ್ಟ್‍ಸಿಟಿ ಯೋಜನೆಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನ ಸಮಾರಂಭದ ಕಾರ್ಯಕ್ರಮವನ್ನು ತುಮಕೂರು ನಗರದಲ್ಲಿ ಸ್ಮಾರ್ಟ್‍ಸಿಟಿ ಅಧಿಕಾರಿಗಳು ಆಯೋಜಿಸಿದ್ದರಾದರೂ, ಆಯೋಜನೆಯ ಸಂದರ್ಭದಲ್ಲಿ ಸರ್ಕಾರದ ಶಿಷ್ಟಾಚಾರವನ್ನ ಗಣನೆಗೆ ತೆಗೆದುಕೊಳ್ಳಬೇಕೆಂಬ ಕನಿಷ್ಠ ಪ್ರಜ್ಞೆ ಅವರಲ್ಲಿರಲಿಲ್ಲ. ಕೇವಲ ರಾಜ್ಯ ಸರ್ಕಾರದ ಕೈಗೊಂಬೆಗಳಂತೆ ವರ್ತಿಸುತ್ತಿರುವ ಸ್ಮಾರ್ಟ್‍ಸಿಟಿ ಅಧಿಕಾರಿ ರಂಗಸ್ವಾಮಿ ಸಮಾರಂಭದ ಆಹ್ವಾನ ಪತ್ರಿಕೆ ಮತ್ತು ಪೋಸ್ಟರ್ ಹಾಗೂ ಬ್ಯಾನರ್ ಗಳಲ್ಲಿ ಹಾಲಿ ಪ್ರಧಾನಮಂತ್ರಿ ನರೇಂದ್ರಮೋದಿ, ತುಮಕೂರಿನ ಹಾಲಿ ಸಂಸದ ಜಿ.ಎಸ್.ಬಸವರಾಜು, ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ರವರ ಭಾವಚಿತ್ರಗಳನ್ನು ಹಾಕಿಸದೇ ನಿರ್ಲಕ್ಷಿಸಿದ್ದು, ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ರವರ ಭಾವಚಿತ್ರಗಳನ್ನ ಮಾತ್ರ ಮುದ್ರಿಸಿದ ಬ್ಯಾನರ್ ಗಳನ್ನ ವೇದಿಕೆ ಮತ್ತು ನಗರದ ಬಹುತೇಕ ಕಡೆಗಳಲ್ಲಿ ಹಾಕಿಸಲಾತ್ತು. ಹಾಲಿ ಸಂಸದ ಜಿ.ಎಸ್.ಬಸವರಾಜು, ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ರವರು ಈ ಅಭಿವೃದ್ಧಿ ಕಾಮಗಾರಿಯ ಕ್ಷೇತ್ರ ವ್ಯಾಪ್ತಿಯಲ್ಲಿರುವುದರಿಂದ ಅವರ ಭಾವಚಿತ್ರಗಳನ್ನ ಕಡೆಗಣಿಸಿರುವುದನ್ನು ಮತ್ತು ಇದರ ರೂವಾರಿ ಮೋದಿಯವರ ಭಾವಚಿತ್ರ ಕಾಣದಿರುವುದರಿಂದ ಬೇಸತ್ತ ಹಾಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಹಾತ್ಮ ಗಾಂಧಿ ಕ್ರೀಡಾಂಗಣದೆದುರು ನಡುರಸ್ತೆಯಲ್ಲೇ ಶಾಸಕನೆನ್ನುವುದನ್ನೂ ಮರೆತು ಪ್ರತಿಭಟನೆಗೆ ಕುಳಿತದ್ದು ಸಂಘಟಕರು ಮತ್ತು ಉಪಮುಖ್ಯಮಂತ್ರಿಗಳಿಗೆ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಮುಜುಗರಕ್ಕೀಡಾಗುವಂತಾಗಿತ್ತು. ಶಾಸಕರು ನಡುರಸ್ತೆಯಲ್ಲಿ ಪ್ರತಿಭಟನೆಗೆ ಕುಳಿತಾಗ ಬಿಜೆಪಿ ಕಾರ್ಯಕರ್ತರು ಮತ್ತು ಕಾರ್ಪೋರೇಟರ್‍ಗಳು ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ಸಂಭ್ರಮದ ಮೆರುಗಿನಲ್ಲಿದ್ದ ಅಧಿಕಾರಿಗಳಿಗೆ ಪ್ರತಿಭಟನೆಯ ಸೂತಕದ ಛಾಯೆಗೆ ಗುರಿಪಡಿಸಿದರು. ತದನಂತರ ಸ್ಮಾರ್ಟ್‍ಸಿಟಿ ಆಧಿಕಾರಿ ರಂಗಸ್ವಾಮಿ ಬಂದು ಕ್ಷಮೆಯಾಚಿಸಿದರಾದರೂ ಪ್ರತಿಭಟನೆ ಹಿಂಪಡೆಯದಿದ್ದಾಗ ಡಾಕ್ಟರ್ ಶಾಲಿನೀ ರಜನೀಶ್ ರವರು ಶಾಸಕರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಒಂದು ತಾಸಿಗೂ ಹೆಚ್ಚುಕಾಲ ನಡೆದ ಪ್ರತಿಭಟನೆಯ ಸಮಯದ ಮಧ್ಯದಲ್ಲಿ ಹಾಕಲಾಗಿದ್ದ ಬ್ಯಾನರ್‍ಗಳನ್ನು ತೆಗೆಸಿ ಮರು ಮುದ್ರಣ ಮಾಡಿ ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಂಸದರು ಹಾಗೂ ಶಾಸಕರ ಭಾವಚಿತ್ರಗಳನ್ನೊಳಗೊಂಡ ಬ್ಯಾನರ್ ಗಳು ಕಾರ್ಯಕ್ರಮದಲ್ಲಿ ಕಂಡುಬಂದವು. ಹಾಲಿ ಸಂಸದ ಮತ್ತು ಶಾಸಕರನ್ನು ಕಡೆಗಣಿಸಿ ಶಿಷ್ಟಾಚಾರ ಉಲ್ಲಂಘಿಸಿದ ಸ್ಮಾರ್ಟ್‍ಸಿಟಿ ಆಧಿಕಾರಿಗಳ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಾಗಿದೆ.

(Visited 40 times, 1 visits today)