ತುಮಕೂರು : ಮಹಿಳೆಯರಿಗೊಲಿದ ಪಾಲಿಕೆ ಮೇಯರ್, ಉಪಮೇಯರ್ ಸ್ಥಾನ

ತುಮಕೂರು:

      ಮಹಾ ನಗರಪಾಲಿಕೆಯ ನೂತನ ಮೇಯರ್ ಆಗಿ 13ನೇ ವಾರ್ಡ್(ಕುರಿಪಾಳ್ಯ)ನ ಫರೀದ ಬೇಗಂ ಹಾಗೂ ಉಪ ಮೇಯರ್ ಆಗಿ 33(ಕ್ಯಾತ್ಸಂದ್ರದ ಚೌಡೇಶ್ವರ ನಗರ)ನೇ ವಾರ್ಡ್‍ನ ಶಶಿಕಲಾ ಗಂಗಹನುಮಯ್ಯ ಅವರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕಳೆದ ವರ್ಷದಂತೆ ಮತ್ತೊಮ್ಮೆ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳು ಮಹಿಳೆಯರಿಗೊಲಿದಿವೆ.

      ಬೆಂಗಳೂರು ಪ್ರಾದೇಶಿಕ ಆಯುಕ್ತರು ಹಾಗೂ ಪಾಲಿಕೆ ಚುನಾವಣಾಧಿಕಾರಿ ಡಾ|| ಎನ್.ವಿ. ಪ್ರಸಾದ್ ಅವರು ಮೇಯರ್, ಉಪ ಮೇಯರ್ ಹಾಗೂ 4 ವಿವಿಧ ಸ್ಥಾಯಿ ಸಮಿತಿಗಳಿಗೆ ಗುರುವಾರ ಪಾಲಿಕೆ ಸಭಾಂಗಣದಲ್ಲಿ ನಡೆಸಿದ ಚುನಾವಣೆ ಪ್ರಕ್ರಿಯೆಯಲ್ಲಿ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಈ ಅವಿರೋಧ ಆಯ್ಕೆ ನಡೆಯಿತು. ಚುನಾವಾಣಾಧಿಕಾರಿಗಳು ಬೆಳಿಗ್ಗೆ 11.30 ಗಂಟೆಗೆ ಸರಿಯಾಗಿ ಹಾಜರಿದ್ದ ನಗರ ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು ಹಾಗೂ 35 ವಾರ್ಡ್‍ಗಳ ಪಾಲಿಕೆ ಸದಸ್ಯರು ಸೇರಿ ಒಟ್ಟು 38 ಜನರಿಂದ ಹಾಜರಾತಿ ಪಡೆದು ಚುನಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.

      ಮೊದಲಿಗೆ ಮೇಯರ್ ಸ್ಥಾನಕ್ಕೆ ನಡೆಸಿದ ಚುನಾವಣೆಯಲ್ಲಿ ಮೇಯರ್ ಸ್ಥಾನದ ಆಕಾಂಕ್ಷಿಗಳಾಗಿ 13ನೇ ವಾರ್ಡಿನ ಫರೀದ ಬೇಗಂ ಹಾಗೂ 6ನೇ ವಾರ್ಡಿನ ಬಿ.ಜಿ. ವೀಣಾ ಅವರು ನಾಮಪತ್ರ ಸಲ್ಲಿಸಿದರು. ಫರೀದ ಬೇಗಂ ಅವರಿಂದ 2 ನಾಮಪತ್ರ ಹಾಗೂ ವೀಣಾ ಅವರಿಂದ 1 ನಾಮಪತ್ರ ಸೇರಿ 3 ನಾಮಪತ್ರಗಳು ಮೇಯರ್ ಸ್ಥಾನಕ್ಕೆ ಸಲ್ಲಿಕೆಯಾಗಿದ್ದವು. ಸಲ್ಲಿಕೆಯಾಗಿದ್ದ ಅಭ್ಯರ್ಥಿಗಳ ನಾಮಪತ್ರಗಳನ್ನು ಚುನಾವಣಾಧಿಕಾರಿಗಳು ಪರಿಶೀಲಿಸಿ ಕ್ರಮಬದ್ಧಗೊಂಡ ನಂತರ ಉಮೇದುವಾರಿಕೆಯನ್ನು ಹಿಂಪಡೆಯಲು ಕಾಲಾವಕಾಶ ನೀಡಿದರು. ಬಿ.ಜಿ. ವೀಣಾ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದರಿಂದ ಫರೀದ ಬೇಗಂ ಅವರು ಮೇಯರ್ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದರು.

      ನಂತರ ನಡೆಸಿದ ಉಪಮೇಯರ್ ಸ್ಥಾನದ ಚುನಾವಣೆಗೆ ಶಶಿಕಲಾ ಗಂಗಹನುಮಯ್ಯ ಅವರು ನಾಮಪತ್ರ ಸಲ್ಲಿದರು. ಸಲ್ಲಿಕೆಯಾದ ನಾಮಪತ್ರ ಕ್ರಮಬದ್ಧವಿರುವ ಬಗ್ಗೆ ಪರಿಶೀಲಿಸಲಾಯಿತು. ಉಪಮೇಯರ್ ಸ್ಥಾನಕ್ಕೆ ಒಂದೇ ನಾಮಪತ್ರ ಮಾತ್ರ ಸಲ್ಲಿಕೆಯಾಗಿದ್ದರಿಂದ ಶಶಿಕಲಾ ಅವರು ಅವಿರೋಧವಾಗಿ ಉಪಮೇಯರ್ ಸ್ಥಾನಕ್ಕೆ ಆಯ್ಕೆಯಾದರು.

      ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ಚುನಾವಣಾಧಿಕಾರಿ ಪ್ರಸಾದ್ ಅವರು ಅಧಿಕೃತವಾಗಿ ಘೋಷಿಸಿದರು.

ಹೇಳಿಕೆ ಮಾತು ಕೇಳಬೇಡಿ- ಸಂಸದರ ಸಲಹೆ:

      ಅಧಿಕಾರ ಸಿಕ್ಕಿತೆಂದು ದರ್ಬಾರ್ ಮಾಡದೆ, ಹೇಳಿಕೆ ಮಾತು ಕೇಳದೆ ಜನರ ಸಮಸ್ಯೆಗಳನ್ನು ಅರಿತು ಕೆಲಸ ಮಾಡಬೇಕೆಂದು ನೂತನವಾಗಿ ಆಯ್ಕೆಯಾದ ಮೇಯರ್ ಫರೀದ ಬೇಗಂ ಹಾಗೂ ಉಪಮೇಯರ್ ಶಶಿಕಲಾ ಗಂಗಹನುಮಯ್ಯ ಅವರಿಗೆ ಶುಭ ಕೋರಿ ಸಂಸದ ಜಿ.ಎಸ್. ಬಸವರಾಜು ಅವರು ಸಲಹೆ ನೀಡಿದರು. 

       ಪಾಲಿಕೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚಿನ ಸವಲತ್ತುಗಳನ್ನು ಪಡೆದುಕೊಂಡು ಜನ ಮೆಚ್ಚುವಂತೆ ಅತ್ಯುತ್ತಮವಾಗಿ ಕೆಲಸ ಮಾಡಬೇಕು. ಪಕ್ಷಬೇಧ ಮರೆತು ಮೇಯರ್, ಉಪಮೇಯರ್ ಹಾಗೂ ಸದಸ್ಯರೆಲ್ಲ ಒಂದಾಗಿ ನಗರದ ಅಭಿವೃದ್ಧಿಗೆ ಶ್ರಮಿಸಬೇಕೆಂದರು.

       ಮುಂದಿನ 1 ವರ್ಷಗಳ ಕಾಲ ಹರಿಯುವ ನೀರಿನಂತೆ ಕೆಲಸ ಮಾಡಬೇಕು. ಸದಸ್ಯರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲ ವಾರ್ಡುಗಳ ಅಭಿವೃದ್ಧಿ ಕೆಲಸಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಬೇಕು. ನಗರದಲ್ಲಿರುವ ಮರಗಳನ್ನು ಕತ್ತರಿಸದೆ ಹೊಸದಾಗಿ ಗಿಡಗಳನ್ನು ನೆಡುವ ಮೂಲಕ ಹಸಿರು ತುಮಕೂರನ್ನಾಗಿ ನಿರ್ಮಾಣ ಮಾಡಬೇಕು ಎಂದು ನೂತನ ಮೇಯರ್, ಉಪಮೇಯರ್‍ಗಳಿಗೆ ಮಾರ್ಗದರ್ಶನ ನೀಡಿದರು.

       ಪಾಲಿಕೆ ವ್ಯಾಪ್ತಿಯ ಜನರು ಅನುಭವಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಹಾಗೂ ಅಜ್ಜಗೊಂಡನಹಳ್ಳಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಕಸ ವಿಲೇವಾರಿ ಘಟಕ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸುವ ಕೆಲಸ ಮಾಡಬೇಕು. ಬುಗುಡನಹಳ್ಳಿ ಕೆರೆಯಲ್ಲದೆ ಅಮಾನಿಕೆರೆ, ಮರಳೂರು ಕೆರೆ, ದೇವರಾಯಪಟ್ಟಣ ಕೆರೆ, ಶೆಟ್ಟಿಹಳ್ಳಿ ಕೆರೆ ಸೇರಿದಂತೆ ನಗರದಲ್ಲಿರುವ ಕೆರೆಗಳನ್ನು ಭರ್ತಿ ಮಾಡಬೇಕು. ಇದರಿಂದ ಅಂತರ್ಜಲ ವೃದ್ಧಿಯಾಗಿ ಸುತ್ತಲಿನ ಕೊಳವೆ ಬಾವಿಗಳಲ್ಲಿ ಜಲಮರುಪೂರಣವಾಗಲು ಸಾಧ್ಯವಾಗುತ್ತದೆ ಎಂದರಲ್ಲದೆ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳಿಗೆ ಸಹಕಾರ ನೀಡುವುದರೊಂದಿಗೆ ಉತ್ತಮ ರಸ್ತೆನಿರ್ಮಾಣಕ್ಕೂ ಆದ್ಯತೆ ನೀಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆಗಳು ಸಾಮಾನ್ಯ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ನಗರದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಸಲಹೆ ನೀಡಿದರಲ್ಲದೆ ನಗರಾಭಿವೃದ್ಧಿಗಾಗಿ ಕೇಂದ್ರದಿಂದ ಹೆಚ್ಚಿನ ಅನುದಾನ ತರುವ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.

      ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆದ ನಂತರ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ; ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ; ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿ ಸದಸ್ಯರ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಪಾಲಿಕೆಯ 4 ವಿವಿಧ ಸಮಿತಿಗಳಿಗೆ ತಲಾ 7 ಸದಸ್ಯರು ಅವಿರೋಧವಾಗಿ ಆಯ್ಕೆಯಾದರು. ವಿವಿಧ ಸ್ಥಾಯಿ ಸಮಿತಿಗಳಿಗೆ ಆಯ್ಕೆಯಾದ ಸದಸ್ಯರ ವಿವರ ಇಂತಿದೆ.

ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ:

      ಈ ಸಮಿತಿಯ ಸದಸ್ಯರ ಸ್ಥಾನಕ್ಕೆ ಒಟ್ಟು 11 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈ ಪೈಕಿ 18ನೇ ಮುಜಿದಾ ಖಾನಂ, 10ನೇ ವಾರ್ಡಿನ ನೂರು ಉನ್ನೀಸಾ ಬಾನು ಅವರ 2 ನಾಮಪತ್ರಗಳು ತಿರಸ್ಕøತಗೊಂಡವು. ಉಳಿದ 9 ನಾಮಪತ್ರಗಳಲ್ಲಿ 11ನೇ ವಾರ್ಡಿನ ಎಂ.ಕೆ. ಮನು ಹಾಗೂ 24ನೇ ವಾರ್ಡಿನ ಶಿವರಾಮ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದರು. ಉಳಿದ ಸದಸ್ಯರಾದ 28ನೇ ವಾರ್ಡ್‍ನ ಧರಣೇಂದ್ರ ಕುಮಾರ್, 5ನೇ ವಾರ್ಡ್‍ನ ಟಿ.ಎಂ. ಮಹೇಶ್, 12ನೇ ವಾರ್ಡ್‍ನ ಷಕೀಲ್ ಅಹಮದ್ ಷರೀಫ್, 1ನೇ ವಾರ್ಡ್‍ನ ನಳಿನ ಇಂದ್ರಕುಮಾರ್, 18ನೇ ಮುಜಿದಾ ಖಾನಂ, 10ನೇ ವಾರ್ಡಿನ ನೂರು ಉನ್ನೀಸಾ ಬಾನು, 17ನೇ ವಾರ್ಡಿನ ಬಿ.ಎಸ್. ಮಂಜುನಾಥ ಅವರು ಅವಿರೋಧವಾಗಿ ಆಯ್ಕೆಯಾದರು.

  ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ:

      ಈ ಸಮಿತಿಗೆ 8 ಸದಸ್ಯರು ನಾಮಪತ್ರ ಸಲ್ಲಿಸಿದ್ದು, 3ನೇ ವಾರ್ಡಿನ ಲಕ್ಷ್ಮಿ ನರಸಿಂಹರಾಜು ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದರಿಂದ 4ನೇ ವಾರ್ಡಿನ ಹೆಚ್.ಎಂ. ದೀಪಶ್ರೀ, 23ನೇ ವಾರ್ಡಿನ ಟಿ.ಕೆ. ನರಸಿಂಹಮೂರ್ತಿ, 8ನೇ ವಾರ್ಡಿನ ಸೈಯದ್ ನಯಾಜ್, 32ನೇ ವಾರ್ಡಿನ ಬಿ.ಜಿ. ಕೃಷ್ಣಪ್ಪ, 20ನೇ ವಾರ್ಡಿನ ಎ. ಶ್ರೀನಿವಾಸ, 9ನೇ ವಾರ್ಡಿನ ಎಂ. ಪ್ರಭಾವತಿ, 21ನೇ ವಾರ್ಡಿನ ಲಲಿತಾ ರವೀಶ್ ಅವರು ಅವಿರೋಧವಾಗಿ ಆಯ್ಕೆಯಾದರು.

ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ:

      ಈ ಸಮಿತಿಗೆ ಸಲ್ಲಿಕೆಯಾಗಿದ್ದ 9 ನಾಮಪತ್ರಗಳ ಪೈಕಿ ಇಬ್ಬರು ಅಭ್ಯರ್ಥಿಗಳಾದ 30ನೇ ವಾರ್ಡಿನ ವಿಷ್ಣುವರ್ಧನ ಹಾಗೂ 3ನೇ ವಾರ್ಡಿನ ಲಕ್ಷ್ಮಿ ನರಸಿಂಹರಾಜು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದರು. ಉಳಿದಂತೆ 26ನೇ ವಾರ್ಡಿನ ಹೆಚ್. ಮಲ್ಲಿಕಾರ್ಜುನಯ್ಯ, 15ನೇ ವಾರ್ಡಿನ ವಿ.ಎಸ್. ಗಿರಿಜ, 35ನೇ ವಾರ್ಡಿನ ಹೆಚ್.ಎಸ್. ನಿರ್ಮಲ ಶಿವಕುಮಾರ್, 34ನೇ ವಾರ್ಡಿನ ಎಂ.ಸಿ. ನವೀನ ಅರುಣ, 14ನೇ ವಾರ್ಡಿನ ನಾಸಿರಾ ಬಾನು, 19ನೇ ವಾರ್ಡಿನ ಬಿ.ಎಸ್. ರೂಪಶ್ರೀ, 6ನೇ ವಾರ್ಡಿನ ಬಿ.ಜಿ. ವೀಣಾ ಅವರು ಈ ಸಮಿತಿಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದರು.

ಲೆಕ್ಕಪತ್ರ ಸ್ಥಾಯಿ ಸಮಿತಿ:

      ಈ ಸಮಿತಿಗೆ 8 ಸದಸ್ಯರು ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಈ ಪೈಕಿ 6ನೇ ವಾರ್ಡಿನ ವೀಣಾ ಬಿ.ಜಿ ಅವರು ಈಗಾಗಲೇ ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿಯ ಸದಸ್ಯ ಸ್ಥಾನಕ್ಕೆ ಆಯ್ಕೆಯಾಗಿದ್ದರಿಂದ ಇವರ ನಾಮಪತ್ರವನ್ನು ತಿರಸ್ಕರಿಸಲಾಯಿತು. ಉಳಿದಂತೆ 25ನೇ ವಾರ್ಡಿನ ಕೆ.ಎಸ್. ಮಂಜುಳ, 2ನೇ ವಾರ್ಡಿನ ಎಸ್. ಮಂಜುನಾಥ್, 31ನೇ ವಾರ್ಡಿನ ಸಿ.ಎನ್. ರಮೇಶ್, 27ನೇ ವಾರ್ಡಿನ ಚಂದ್ರಕಲಾ, 16ನೇ ವಾರ್ಡಿನ ಇನಾಯತುಲ್ಲಾ ಖಾನ್, 7ನೇ ವಾರ್ಡಿನ ಜೆ. ಕುಮಾರ್, 30ನೇ ವಾರ್ಡಿನ ವಿಷ್ಣುವರ್ಧನ ಅವರು ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದರು.

       ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್, ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಪಾಲಿಕೆ ಆಯುಕ್ತ ಭೂಬಾಲನ್, ಉಪವಿಭಾಗಾಧಿಕಾರಿ ಸಿ.ಎಲ್. ಶಿವಕುಮಾರ್, ತಹಶೀಲ್ದಾರ್ ಮೋಹನ್, ಮತ್ತಿತರರು ಹಾಜರಿದ್ದರು.

ನಗರಾಭಿವೃದ್ಧಿಯೇ ನನ್ನ ಗುರಿ:

      ತುಮಕೂರು ನಗರವನ್ನು ಅಭಿವೃದ್ಧಿಪಡಿಸುವುದೇ ನನ್ನ ಗುರಿ ಎಂದು ನೂತನ ಮೇಯರ್ ಫರೀದಾ ಬೇಗಂ ತಿಳಿಸಿದರು. ಮೇಯರ್ ಆಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಥಮ ಬಾರಿ ಮೇಯರ್ ಸ್ಥಾನಕ್ಕೆ ಆಯ್ಕೆಯಾಗಿರುವುದು ತಮಗೆ ಸಂತಸ ತಂದಿದೆ. ಪಾಲಿಕೆಯ ಎಲ್ಲ ವಾರ್ಡ್‍ಗಳಿಗೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆಯನ್ನು ಅರಿತು ಜನರ ಬೇಡಿಕೆಗನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಅವಿರೋಧವಾಗಿ ಆಯ್ಕೆ ಮಾಡಿ ನನ್ನ ಮೇಲಿಟ್ಟಿರುವವರ ಭರವಸೆಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆಂದು ಪ್ರಮಾಣ ಮಾಡಿದರು.

      ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಿಂದ ನಗರವು ಧೂಳ್‍ಸಿಟಿಯಾಗಿ ರೂಪಾಂತರಗೊಳ್ಳುತ್ತಿದೆ. ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗುತ್ತಿದೆ ಎಂಬ ಪತ್ರಕರ್ತರ ಮಾತಿಗೆ ಪ್ರತಿಕ್ರಿಯಿಸಿದ ಅವರು ಸ್ಮಾರ್ಟ್ ಸಿಟಿ ಯೋಜನೆಯಡಿ ಕಳಪೆ ಕಾಮಗಾರಿ ಕಂಡುಬಂದರೆ ಕ್ರಮ ಕೈಗೊಳ್ಳುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇನೆಂದರು.

       ನೂತನ ಉಪ ಮೇಯರ್ ಶಶಿಕಲಾ ಗಂಗಹನುಮಯ್ಯ ಮಾತನಾಡಿ, ಮೇಯರ್ ಹಾಗೂ ಉಳಿದ ಸದಸ್ಯರ ವಿಶ್ವಾಸವನ್ನು ತೆಗೆದುಕೊಂಡು ಒಗ್ಗಟ್ಟಾಗಿ ನಗರದ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು. ಜನರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದು. ನಾಗರಿಕರ ಕುಡಿಯುವ ನೀರಿನ ಸಮಸ್ಯೆ, ರಸ್ತೆ ಅಭಿವೃದ್ಧಿ, ಒಳ ಚರಂಡಿ ವ್ಯವಸ್ಥೆ, ವಿದ್ಯುತ್ ದೀಪ, ಉದ್ಯಾನವನಗಳ ಅಭಿವೃದ್ಧಿಗೆ ಪ್ರಥಮಾದ್ಯತೆ ನೀಡಲಾಗುವುದು ಎಂದು ತಿಳಿಸಿದರು.

(Visited 10 times, 1 visits today)

Related posts

Leave a Comment