ತುಮಕೂರು : ಪಾಲಿಕೆ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ!

ತುಮಕೂರು :

      ಮಹಾನಗರಪಾಲಿಕೆಯ ವಿವಿಧ 4 ಸ್ಥಾಯಿ ಸಮಿತಿಗಳಿಗೆ ಇಂದು ನಡೆದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸಭೆಯಲ್ಲಿ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರ ಸ್ಥಾನಕ್ಕೆ 5ನೇ ವಾರ್ಡ್‍ನ ಸದಸ್ಯ ಟಿ.ಎಂ.ಮಹೇಶ್; ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಹಣಕಾಸು ನ್ಯಾಯಕ್ಕಾಗಿ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ 23ನೇ ವಾರ್ಡ್‍ನ ಸದಸ್ಯ ಟಿ.ಕೆ.ನರಸಿಂಹಮೂರ್ತಿ; ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 26ನೇ ವಾರ್ಡ್‍ನ ಸದಸ್ಯ ಹೆಚ್. ಮಲ್ಲಿಕಾರ್ಜುನಯ್ಯ ಹಾಗೂ ಲೆಕ್ಕಪತ್ರಗಳ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ 27ನೇ ವಾರ್ಡ್‍ನ ಸದಸ್ಯೆ ಚಂದ್ರಕಲಾ ಅವರು ಅವಿರೋಧವಾಗಿ ಆಯ್ಕೆಯಾದರು.

      ಇದಕ್ಕೂ ಮುನ್ನ ಪಾಲಿಕೆ ಆಯುಕ್ತ ಭೂಬಾಲನ್ ಸಭೆಗೆ ಸ್ವಾಗತ ಕೋರಿದ ನಂತರ ಸಭೆಯ ಅಧ್ಯಕ್ಷತೆವಹಿಸಿದ್ದ ಮೇಯರ್ ಫರೀದಾ ಬೇಗಂ ಅವರು ಪಾಲಿಕೆ ಸದಸ್ಯರೆಲ್ಲರ ಹಾಜರಾತಿ ಪಡೆದರು. ವಿವಿಧ 4 ಸ್ಥಾಯಿ ಸಮಿತಿಗಳ ಸದಸ್ಯರೆಲ್ಲಾ ಪ್ರತ್ಯೇಕವಾಗಿ ತಮ್ಮ ಸಮಿತಿಯಿಂದ ಅವಿರೋಧವಾಗಿ ಒಬ್ಬ ಸದಸ್ಯನನ್ನು ಆಯ್ಕೆ ಮಾಡಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.

      ನಾಮಪತ್ರ ಸಲ್ಲಿಸಿದ ನಂತರ ಆಯಾ ಸಮಿತಿಗಳ ಮತ್ತೊಬ್ಬ ಅಭ್ಯರ್ಥಿಗೆ ನಾಮಪತ್ರ ಸಲ್ಲಿಸಲು ಪ್ರತಿ ಸಮಿತಿಗೂ ಎರಡು ನಿಮಿಷಗಳ ಕಾಲ ಕಾಲಾವಕಾಶ ನೀಡಲಾಗಿತ್ತು. ನಂತರ ಮೇಯರ್ ಫರೀದಾ ಬೇಗಂ ಅವರು ನಾಮಪತ್ರಗಳನ್ನು ಪರಿಶೀಲಿಸಿ ಕ್ರಮಬದ್ಧವಾಗಿದ್ದರಿಂದ ಅಂಗೀಕರಿಸಿದರು. ಯಾವುದೇ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮತ್ತೊಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸದೇ ಇರುವುದರಿಂದ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷರ ಹೆಸರನ್ನು ಅವರು ಘೋಷಿಸಿದರು.

      ಈಗಾಗಲೇ ಜನವರಿ 30ರಂದು ನಡೆದ ಮೇಯರ್ ಚುನಾವಣೆ ಸಂದರ್ಭದಲ್ಲಿ ಪ್ರತಿ ಸ್ಥಾಯಿ ಸಮಿತಿಗೆ ತಲಾ 7 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಪೈಕಿ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಟಿ.ಎಂ.ಮಹೇಶ್ ಅವರಿಗೆ 28ನೇ ವಾರ್ಡ್‍ನ ಸದಸ್ಯ ಧರಣೇಂದ್ರ ಕುಮಾರ್ ಸೂಚಕರಾಗಿ ಹಾಗೂ 12ನೇ ವಾರ್ಡ್‍ನ ಷಕೀಲ್ ಅಹಮ್ಮದ್ ಷರೀಪ್ ಅನುಮೋದಕರಾಗಿದ್ದರು.

      ಅದೇ ರೀತಿ ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಹಣಕಾಸು ನ್ಯಾಯಕ್ಕಾಗಿ ಸ್ಥಾಯಿ ಸಮಿತಿಯ ಅಧ್ಯಕ್ಷ ಟಿ.ಕೆ.ನರಸಿಂಹಮೂರ್ತಿ ಅವರಿಗೆ 32ನೇ ವಾರ್ಡ್‍ನ ಸದಸ್ಯ ಬಿ.ಜಿ.ಕೃಷ್ಣಪ್ಪ ಸೂಚಕರಾಗಿ ಹಾಗೂ 9ನೇ ವಾರ್ಡ್‍ನ ಎಂ.ಪ್ರಭಾವತಿ ಅನುಮೋದಕರಾಗಿ; ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್. ಮಲ್ಲಿಕಾರ್ಜುನಯ್ಯ ಅವರಿಗೆ 15ನೇ ವಾರ್ಡ್‍ನ ಸದಸ್ಯ ವಿ.ಎಸ್.ಗಿರಿಜ ಸೂಚಕರಾಗಿ ಹಾಗೂ 19ನೇ ವಾರ್ಡ್‍ನ ಬಿ.ಎಸ್.ರೂಪಶ್ರೀ ಅನುಮೋದಕರಾಗಿ; ಲೆಕ್ಕಪತ್ರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಕಲಾ ಅವರಿಗೆ 31ನೇ ವಾರ್ಡ್‍ನ ಸದಸ್ಯ ಸಿ.ಎನ್.ರಮೇಶ್ ಸೂಚಕರಾಗಿ ಹಾಗೂ 30ನೇ ವಾರ್ಡ್‍ನ ವಿಷ್ಣುವರ್ಧನ ಅನುಮೋದಕರಾಗಿದ್ದರು.

      ನೂತನವಾಗಿ ಆಯ್ಕೆಯಾದ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರನ್ನು ಮಹಾಪೌರರು ಅಭಿನಂದಿಸಿದ ನಂತರ ಮಾತನಾಡುತ್ತಾ, ನಗರದ ಶಿವಕುಮಾರ ಸ್ವಾಮೀಜಿ ವೃತ್ತದ ಬಳಿಯಿರುವ ಪಾಲಿಕೆ ವ್ಯಾಪ್ತಿಯ ಪ್ರದೇಶದಲ್ಲಿ ನಡೆದಾಡುವ ದೇವರೆಂದೇ ಪ್ರಸಿದ್ಧಿಯಾಗಿರುವ ಡಾ: ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರಿನಲ್ಲಿ ಉದ್ಯಾನವನವನ್ನು ನಿರ್ಮಿಸಿ ಅವರ ಪ್ರತಿಮೆಯನ್ನು ಸ್ಥಾಪಿಸಲು ಚಿಂತಿಸಲಾಗಿದೆ ಎಂದರಲ್ಲದೆ ಈ ಉದ್ಯಾನವನದಲ್ಲಿ 30ಲಕ್ಷ ರೂ.ಗಳ ವೆಚ್ಚದ ಡಾ: ಶಿವಕುಮಾರ ಸ್ವಾಮೀಜಿಯವರ ಪ್ರತಿಮೆಯನ್ನು ಸ್ಥಾಪಿಸಲು ರೋಟರಿ ಕ್ಲಬ್ ಮುಂದೆ ಬಂದಿದ್ದು, ಪಾಲಿಕೆ ಸದಸ್ಯರು ಅನುಮತಿ ನೀಡಿದಲ್ಲಿ ಈ ಉತ್ತಮ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಸದಸ್ಯರಲ್ಲಿ ಮನವಿ ಮಾಡಿದಾಗ ಸದಸ್ಯರೆಲ್ಲಾ ಒಮ್ಮತದಿಂದ ಒಪ್ಪಿಗೆ ಸೂಚಿಸಿದರು.

      ಉದ್ಯಾನವನ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಸ್ಮಾರ್ಟ್ ಸಿಟಿ ವತಿಯಿಂದ ಕಲ್ಪಿಸಲಾಗುವುದು ಎಂದು ಪಾಲಿಕೆ ಆಯುಕ್ತ ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಭೂಬಾಲನ್ ಭರವಸೆ ನೀಡಿದರು. ಅಲ್ಲದೆ ಈ ಉದ್ಯಾನವನದಲ್ಲಿ ನಿರ್ಮಿಸಲಾಗುವ ಪ್ರತಿಮೆಯ ಸುತ್ತ ಶ್ರೀಗಳ ದಾರಿದೀಪೋಕ್ತಿಗಳನ್ನು ಗ್ರಾನೈಟ್‍ನಲ್ಲಿ ಕೆತ್ತನೆ ಮಾಡಿಸಿ ಅಳವಡಿಸುವ ಉದ್ದೇಶ ಹೊಂದಲಾಗಿದೆ.

      ಮುಂದಿನ 4 ತಿಂಗಳಲ್ಲಿ ಉದ್ಯಾನವನ ನಿರ್ಮಾಣ ಹಾಗೂ ಪ್ರತಿಮೆ ಸ್ಥಾಪನೆ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

      ಸಭೆಯಲ್ಲಿ ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ರೋಟರಿ ಕ್ಲಬ್‍ನ ರಂಗನಾಥ್, ಪಾಲಿಕೆ ಸದಸ್ಯರು, ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

(Visited 9 times, 1 visits today)

Related posts