ತುಮಕೂರು : ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರ ಕಛೇರಿಗೆ ಖನ್ನ

ತುಮಕೂರು:

      ತುಮಕೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರ ಕಛೇರಿಯಲ್ಲಿ ಗುರುವಾರ ಬೆಳಗಿನ ಜಾವ ಕಳ್ಳತನವಾಗಿದ್ದು ಕಛೇರಿಯ ಬೀಗ ಮುರಿದು ಟಿವಿ ಕದ್ದೊಯ್ಯಲಾಗಿದ್ದು, ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ.

      ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನ ಮಾಲು ಸಮೇತ ಬಂಧಿಸಲಾಗಿದ್ದು, ಆರೋಪಿ ಮಂಜುನಾಥ್ ಆಲಿಯಾಸ್ ಕಳ್ಳಮಂಜ, ಚೆನ್ನರಾಯಪಟ್ಟಣ ತಾಲೂಕಿನ ಕಾರೇಹಳ್ಳಿಯ ವಾಸಿ. ಈತ ವೃತ್ತಿನಿರತ ಕಳ್ಳತನದ ಆರೋಪಿಯಾಗಿದ್ದು, ತುಮಕೂರು ನಗರ ಠಾಣೆಯಲ್ಲಿ ದ್ವಿಚಕ್ರ ವಾಹನಗಳ ಕಳ್ಳತನದ ಆರೋಪದ ಮೇಲೆ ಆರೋಪಿಯ ಮೇಲೆ ಈ ಹಿಂದೆ ಪ್ರಕರಣಗಳು ದಾಖಲಾಗಿದೆ. ಹೊಸಬಡಾವಣೆ ಪೊಲೀಸ್ ಠಾಣೆ ಸೇರಿದಂತೆ ಬಹಳಷ್ಟು ಕಡೆಗಳಲ್ಲಿ ಕಳ್ಳಮಂಜನ ವಿರುದ್ಧ ಸುಮಾರು 15 ಕ್ಕೂ ಹೆಚ್ಚು ಕಳ್ಳತನದ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

      ಕಳ್ಳತನದ ಆರೋಪಕ್ಕೆ ಸಂಬಂಧಿಸಿದಂತೆ ಕಳ್ಳತನ ಪ್ರಕರಣದ ವಿಚಾರವಾಗಿ ತುಮಕೂರು ನ್ಯಾಯಾಲಯಕ್ಕೆ ಬಂದಿದ್ದು, ನ್ಯಾಯಾಲಯದಲ್ಲಿ ಬುಧವಾರ ಎಂದಿನಂತೆ ತನ್ನ ಎಲ್ಲಾ ಕಾರ್ಯಕಲಾಪಗಳನ್ನ ಮುಗಿಸಿದ ನಂತರ ನ್ಯಾಯಾಲಯದ ಆವರಣಕ್ಕೆ ಹೊಂದಿಕೊಂಡಂತಿರುವ ಗ್ರಾಮಾಂತರ ಸರ್ಕಲ್ ಇನ್ಸ್‍ಪೆಕ್ಟರ್ ಕಛೇರಿಯ ಎದುರು ಇರುವ ವೀರಭದ್ರಸ್ವಾಮಿ ದೇವಸ್ಥಾನದ ಬಳಿ ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಜಪ್ತಿ ಮಾಡಲಾಗಿದ್ದ ಆಭರಣಗಳನ್ನು ಕಳೆದುಕೊಂಡ ಸಾರ್ವಜನಿಕರಿಗೆ ಹಿಂತಿರುಗಿಸಿದ್ದನ್ನು ಗಮನಿಸಿದ ಆರೋಪಿ ಕಳ್ಳಮಂಜ ಇನ್ನೂ ಹೆಚ್ಚು ಚಿನ್ನಾಭರಣಗಳು ಕಛೇರಿಯ ಬೀರುವಿನಲ್ಲಿ ಇರಬಹುದೆಂದು ಅನುಮಾನಿಸಿ, ಬುಧವಾರ ರಾತ್ರಿಯ ವೇಳೆಯಲ್ಲಿ ಕಛೇರಿಯ ಬೀಗ ಮುರಿದು ಕಛೇರಿಯೊಳಗಿದ್ದ ಕೆಲವು ಪೇಪರ್‍ಗಳಿಗೆ ಬೆಂಕಿಯಿಟ್ಟು ಕಛೇರಿಯೊಳಗಿದ್ದ ಬೀರುವನ್ನು ಮುರಿಯಲು ಪ್ರಯತ್ನಿಸಿರುತ್ತಾನೆ. ಆದರೆ, ಅದು ಸಾಧ್ಯವಾಗದಿದ್ದಾಗ ಕಛೇರಿಯಲ್ಲಿದ್ದ ಟಿವಿಯನ್ನೇ ಕದ್ದೊಯ್ದಿದ್ದಾನೆ.

      ಈ ಕಛೇರಿಗೆ ಭದ್ರತೆಯಿಲ್ಲ ಎಂಬುದನ್ನು ಮನಗಂಡು ಶಿಥಿಲಾವಸ್ಥೆಯ ಹಂತದಲ್ಲಿರುವ ವೃತ್ತ ನಿರೀಕ್ಷಕರ ಕಛೇರಿಯ ಕಟ್ಟಡದ ಬಗ್ಗೆ ಹಾಗೂ ಸದರಿ ಕಛೇರಿಯಲ್ಲಿ ವೃತ್ತ ನಿರೀಕ್ಷಕರು ರಜೆಯ ಮೇಲೆ ತೆರಳಿದ್ದು, ಇವರು ನಿರಂತರವಾಗಿ ತಿಂಗಳುಗಟ್ಟಲೆ ಅನಾರೋಗ್ಯದ ನಿಮಿತ್ತ ರಜೆ ಹಾಕಿರುವ ವಿಚಾರವನ್ನು ತಿಳಿದುಕೊಂಡು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್‍ರವರು ಪ್ರಭಾರ ವೃತ್ತ ನಿರೀಕ್ಷಕರಾಗಿದ್ದು, ಹೆಚ್ಚಿನದಾಗಿ ಈ ಕಛೇರಿಯನ್ನು ಗಮನಹರಿಸುವುದಿಲ್ಲವೆಂದು ಮನಗಂಡು ಕಳ್ಳತನಕ್ಕೆ ಮುಂದಾಗಿರುವಂತಿದೆ.

      ವೃತ್ತಿನಿರತ ಕಳ್ಳತನದ ಆರೋಪಿಯಾಗಿರುವ ಈತ ವೃತ್ತ ನಿರೀಕ್ಷಕರ ಕಛೇರಿಯನ್ನೇ ಖನ್ನ ಹಾಕುವ ಮಟಕ್ಕೆ ಆಲೋಚಿಸಿದ್ದಾನೆ ಎಂದರೆ ಸದರಿ ವೃತ್ತ ನಿರೀಕ್ಷಕರ ಕಛೇರಿಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಲ್ ಇನ್ಸ್‍ಪೆಕ್ಟರ್‍ರವರ ಕಾರ್ಯವೈಖರಿ ಮತ್ತು ಅವರ ಕಾರ್ಯಕ್ಷಮತೆಯ ಬಗ್ಗೆ ಹೆಚ್ಚು ತಿಳಿದುಕೊಂಡು ಅದೇ ಕಛೇರಿಗೆ ಖನ್ನ ಹಾಕಿ ಟಿವಿಯನ್ನು ಕದ್ದೊಯ್ದಿರುವುದು ಶೋಚನೀಯ ಸಂಗತಿ. ಯಾವ ಇಲಾಖೆಯನ್ನು ಕಂಡರೆ ಕಳ್ಳರು ಹೆದರಿ ತಮ್ಮ ಎಲ್ಲಾ ಅಕ್ರಮ ಮತ್ತು ಕಾನೂನುಬಾಹಿರ ಚಟುವಟಿಕೆಗಳು ಹಾಗೂ ಕಳ್ಳತನ ಸೇರಿದಂತೆ ವಿವಿಧ ಅಪರಾದ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕಿತ್ತೋ, ಅದೇ ಪೊಲೀಸ್ ಇಲಾಖೆಯಾದ ವೃತ್ತ ನಿರೀಕ್ಷಕರ ಕಛೇರಿಯಲ್ಲಿ ಕಳ್ಳತನ ಮಾಡಿದ್ದಾರೆಂದರೇ ಇಲಾಖೆ ಅಥವಾ ಕಳ್ಳತನವಾದ ಕಛೇರಿಯ ಭದ್ರತೆ ಹಾಗೂ ಆ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೃತ್ತ ನಿರೀಕ್ಷಕರ ಕಾರ್ಯಕ್ಷತೆಯ ವೈಪಲ್ಯತೆ ಎದ್ದು ಕಾಣುತ್ತಿದೆ. ಕಳ್ಳರಿಗೆ ಸದರಿ ವೃತ್ತ ನಿರೀಕ್ಷಕರ ಕಛೇರಿಯ ಅಧಿಕಾರಿಯ ಮೇಲೆ ಕಿಂಚಿತ್ತು ಭಯವಿಲ್ಲವೇನೋ ಎಂಬ ವಿಚಾರ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.

      ಗ್ರಾಮಾಂತರ ವೃತ್ತ ನಿರೀಕ್ಷಕರ ಕಛೇರಿಯ ವ್ಯಾಪ್ತಿಗೊಳಪಡುವ ಕೋರ ಪೊಲೀಸ್ ಠಾಣೆಯಲ್ಲಿ ಕಳೆದ ತಿಂಗಳ ಹಿಂದಷ್ಟೇ ಪೊಲೀಸರ ಕಸ್ಟಡಿಯಲ್ಲಿದ್ದ ವೃತ್ತಿನಿರತ ಕಳ್ಳತನದ ಆರೋಪಿ ತಪ್ಪಿಸಿಕೊಂಡು ಹೋಗಿದ್ದ ಪ್ರಕರಣ ವರದಿಯಾಗಿತ್ತು. ಆದರೆ, ಇದೀಗ ವೃತ್ತ ನಿರೀಕ್ಷಕರ ಕಛೇರಿಯಲ್ಲಿಯೇ ಕಳ್ಳತನವಾಗಿರುವುದು ಇಲಾಖೆಯ ಬಗ್ಗೆ ಸಾರ್ವಜನಿಕವಾಗಿ ನಗೆಪಾಟಲಿಗೀಡಾಗುವಂತಿದೆ.

       ಸದರಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣರವರು ಕೂಡಲೇ ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣವನ್ನ ದಾಖಲು ಮಾಡಿ ಸಂಬಂಧಿಸಿದ ಆರೋಪಿಗಳನ್ನ ಕೂಡಲೇ ಬಂಧಿಸುವಂತೆ ನೀಡಿದ ನಿರ್ದೇಶನದಂತೆ ಡಿವೈಎಸ್‍ಪಿ ತಿಪ್ಪೇಸ್ವಾಮಿರವರ ಮಾರ್ಗದರ್ಶನದಲ್ಲಿ ನಗರ ವೃತ್ತ ನಿರೀಕ್ಷಕ ನವೀನ್‍ಕುಮಾರ್, ಪಿಎಸ್‍ಐ ಮಂಜುನಾಥ್ ಮತ್ತು ಸಿಬ್ಬಂದಿ ಆರೋಪಿಯನ್ನು ಕೂಡಲೇ ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

(Visited 1,053 times, 1 visits today)

Related posts

Leave a Comment