ತುಮಕೂರು : ಸರ್ಕಾರದ ಪಡಿತರ ಅಕ್ಕಿ ಶಾಸಕರ ಹೆಸರಲ್ಲಿ ಹಂಚಿಕೆ!

ತುಮಕೂರು:

      ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಬಡವರಿಗೆ ಸರ್ಕಾರ ನೀಡುತ್ತಿರುವ ಪಡಿತರ ಅಕ್ಕಿಯನ್ನ ಅಕ್ರಮವಾಗಿ ಕದ್ದೊಯ್ದು ಶಾಸಕ ಗೌರಿಶಂಕರ್ ಹೆಸರಿನಲ್ಲಿ ವಿತರಿಸಲಾಗುತ್ತಿದೆ ಎನ್ನುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

      ಗ್ರಾಮಾಂತರ ಕ್ಷೇತ್ರದ ಹೆಬ್ಬೂರು ಹೋಬಳಿ ನಿಡುವಳಲು ಗ್ರಾಮದ ವ್ಯವಸಾಯ ಸಹಕಾರ ಸಂಘದಲ್ಲಿ ಸರ್ಕಾರ ಬಡವರಿಗಾಗಿ ಉಚಿತವಾಗಿ ನೀಡುತ್ತಿರುವ ಪಡಿತರ ಅಕ್ಕಿಯನ್ನ ಶಾಸಕರ ಅಣತಿಯಂತೆ ಸಹಕಾರ ಸಂಘದ ಅಧ್ಯಕ್ಷ ಲಕ್ಷ್ಮೀಕಾಂತಯ್ಯ ಅಕ್ರಮವಾಗಿ ಕದ್ದು ತೆಗೆದುಕೊಂಡು ಹೋಗಿ ಅದನ್ನು ಶಾಸಕ ಡಿ.ಸಿ.ಗೌರಿಶಂಕರ್ ರವರ ಬೆಂಬಲಿಗ ಗುತ್ತಿಗೆದಾರರಾದ ಕೃಷ್ಣಪ್ಪರವರ ಮನೆಯಲ್ಲಿ ಇಟ್ಟಿದ್ದು, ಅದನ್ನು 5 ಕೆ.ಜಿ.ಯಂತೆ ಪ್ಯಾಕ್ ಮಾಡಿ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ರವರ ಹೆಸರಿನಲ್ಲಿ ಶಾಸಕರೇ ಖುದ್ದು ಹಂಚುತ್ತಿದ್ದಾರೆ ಎಂದು ನಿಡವಳಲು ಗ್ರಾಮದ ಸ್ಥಳೀಯರು ಶಾಸಕರು ಮತ್ತು ಅವರ ಅನುಯಾಯಿ ಅಧ್ಯಕ್ಷ ಲಕ್ಷ್ಮೀಕಾಂತಯ್ಯ ಮತ್ತು ಗುತ್ತಿಗೆದಾರರಾದ ಕೃಷ್ಣಪ್ಪ ಮತ್ತು ಬೆಂಬಲಿಗರ ವಿರುದ್ಧ ಆಪಾದಿಸುತ್ತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಧ್ಯಕ್ಷ ಲಕ್ಷ್ಮೀಕಾಂತಯ್ಯ

      ಕೋವಿಡ್-19 ಸಂದರ್ಭದಲ್ಲಿ ಲಾಕ್ ಡೌನ್ ಇರುವುದರಿಂದ ಗ್ರಾಮೀಣ ಪ್ರದೇಶದ ಬಡ ಕೂಲಿ ಕಾರ್ಮಿಕರು ಮನೆಯಲ್ಲೇ ಉಳಿಯುವಂತಾಗಿದ್ದು, ಅವರುಗಳು ಹಸಿವಿನಿಂದ ಬಳಲಬಾರದು ಎನ್ನುವ ಸದುದ್ದೇಶದಿಂದ ಕರ್ನಾಟಕ ಸರ್ಕಾರ ಉಚಿತ ಪಡಿತರ ಅಕ್ಕಿ-ಗೋಧಿಯನ್ನು ಉಚಿತವಾಗಿ ಅಧಿಕೃತವಾಗಿ ವಿತರಿಸುತ್ತಿದ್ದು, ಆ ಪಡಿತರ ದವಸಗಳು ಆಹಾರ ಇಲಾಖೆಯ ಗೋಧಾಮುಗಳಿಂದ ಸಹಕಾರ ಸಂಘಗಳು, ನ್ಯಾಯಬೆಲೆ ಅಂಗಡಿಗಳು ಮತ್ತು ಆಹಾರ ಭಂಡಾರಗಳಿಂದ ವಿತರಿಸುತ್ತಿದ್ದು, ಗ್ರಾಮಾಂತರ ಕ್ಷೇತ್ರದಲ್ಲಿ ಇಂತಹ ಅಕ್ಕಿಯನ್ನ ಅಕ್ರಮವಾಗಿ ಕದ್ದೊಯ್ದು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎನ್ನುವ ಆಪಾದನೆ ಇದೆ. ನಿಡುವಳಲು ಗ್ರಾಮ ಸಹಕಾರ ಸಂಘದ ಅಧ್ಯಕ್ಷ ಲಕ್ಷ್ಮೀಕಾಂತಯ್ಯ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಹಕಾರ ಸಂಘದ ಕಾರ್ಯದರ್ಶಿಯನ್ನ ವಿಶ್ವಾಸಕ್ಕೆ ತೆಗೆದುಕೊಂಡು ಸಹಕಾರ ಸಂಘದಿಂದ ಅನಧಿಕೃತವಾಗಿ ಕದ್ದೊಯ್ದಿರುವ ಘಟನೆಯ ಬಗ್ಗೆ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹೊಸ ತಿರುವು ಪಡೆದಿರುತ್ತದೆ. ನಿಡುವಳಲು ಗ್ರಾಮದ ತಮ್ಮಯ್ಯಣ್ಣ ಎನ್ನುವ ವ್ಯಕ್ತಿಯು ಸಹಕಾರ ಸಂಘದ ಸಹಾಯಕನಾದ ಅಕ್ಕಿ ತೂಕ ಮಾಡುವ ವ್ಯಕ್ತಿಗೆ ತಮ್ಮ ಮೊಬೈಲ್‍ನಿಂದ ಮಾತನಾಡಿದ್ದು, ಮಾತನಾಡಿದ ಸಂದರ್ಭದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದರೆ ಇಡೀ ಕ್ಷೇತ್ರ ವ್ಯಾಪ್ತಿಯಲ್ಲಿ ಅದೆಷ್ಟು ಪಡಿತರ ಅಕ್ಕಿ ಬಡವರಿಗೆ ಸಿಲುಕದೆ ಶಾಸಕರ ಹೆಸರಿನಲ್ಲಿ ಪಟ್ಟಣಗಳಾಗಿ ಹಂಚಿಕೆಯಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂಬುದು ಸ್ಥಳೀಯರ ಆತಂಕವಾಗಿದೆ.

(Visited 6,013 times, 1 visits today)

Related posts