ಸವಿತಾ ಸಮಾಜದ ಜನಾಂಗದವರಿಗೆ ವಿಶೇಷ ಅಭಿವೃದ್ಧಿ ನಿಗಮ ಸ್ಥಾಪನೆ

 ತುಮಕೂರು:

      ಸಮಾಜದಲ್ಲಿ ಹಿಂದುಳಿದ ಸವಿತಾ ಸಮಾಜದ ಜನಾಂಗಕ್ಕೆಂದು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿದ್ದು ವಿಶೇಷ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ತಿಳಿಸಿದರು.

      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಮತ್ತು ತಾಲೂಕು ನಗರ ಸವಿತಾ ಸಮಾಜ ಸಂಘಗಳ ಸಹಯೋಗದಲ್ಲಿಂದು ನಗರದ ಬಾಲಭವನದಲ್ಲಿ ಏರ್ಪಡಿಸಿದ್ದ ಸವಿತಾ ಮಹರ್ಷಿ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಅವರ ವೃತ್ತಿಯೇ ಮುಖ್ಯವಾಗಿರುತ್ತದೆ. ಸರ್ಕಾರವು ಇಂತಹ ಜನಾಂಗಗಳಿಗೆ ವಿಶೇಷ ಸೌಲಭ್ಯಗಳನ್ನು ಜಾರಿಗೊಳಿಸಿದ್ದು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಮಾತನಾಡಿ, ಪುರಾತನ ಕಾಲದಿಂದಲೂ ತಮ್ಮದೇ ಕಸುಬನ್ನಾಧರಿಸಿ ಜೀವನವನ್ನು ಈಗಲೂ ಮುಂದುವರೆಸಿಕೊಂಡು ಬಂದಿದ್ದಾರೆ. ಮನುಷ್ಯ ಸುಂದರವಾಗಿ ಕಾಣಬೇಕೆಂದರೆ ಈ ಜನಾಂಗದಿಂದ ಮಾತ್ರ ಸಾಧ್ಯ. ಮನುಷ್ಯನಿಗೆ ನಿತ್ಯ ಕರ್ಮಗಳು ಎಷ್ಟು ಮುಖ್ಯವೂ, ಅದೇ ರೀತಿ ದೇಹದ ಅಂದ-ಚೆಂದವು ಅಷ್ಟೆ ಮುಖ್ಯ. ಈ ಜನಾಂಗದ ಮತ್ತೊಂದು ವೃತ್ತಿ ಎಂದರೆ ಶುಭ ಸಮಾರಂಭಗಳಿಗೆ ವಾದ್ಯಗಳನ್ನು ನುಡಿಸುತ್ತಾರೆ. ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯ ಗೌರವಾನ್ವಿತರ ಅನುದಾನದಡಿ ಉಚಿತ ಕ್ಷೌರಿಕ ಸಲಕರಣೆಗಳನ್ನು ನೀಡಲಾಗುತ್ತಿದ್ದು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

      ಕಾರ್ಯಕ್ರಮದಲ್ಲಿ ಸ್ವದೇಶಿ ಚಿಂತಕ ಎಸ್. ವಿಶ್ವನಾಥ್ ಉಪನ್ಯಾಸ ನೀಡುತ್ತಾ ಹಿಂದಿನ ಕಾಲದಲ್ಲಿ ಕೃಷಿಯೇ ಜನರ ಜೀವಾಳವಾಗಿತ್ತು. ದವಸ-ಧಾನ್ಯಗಳನ್ನು ಬೆಳೆದು ಜೀವನ ನಡೆಸುತ್ತಿದ್ದರು. ಯಾವುದೇ ಹಣದ ವ್ಯವಹಾರ ನಡೆಯುತ್ತಿರಲಿಲ್ಲ. ಸಮಾಜದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುವುದಕ್ಕೆ ವೃತ್ತಿಗಳನ್ನು ಮಾಡುತ್ತಿದ್ದರು. ಆ ವೃತ್ತಿಗಳೇ ಇಂದು ಜಾತಿಗಳಾಗಿ ಮಾರ್ಪಟ್ಟಿವೆ. ಜಾತಿ-ಮತ ಬೇಧವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಬದುಕಬೇಕೆಂದು ತಿಳಿಸಿದರು.

      ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಹಿರೇಮಠದ ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ಅವರು ಮೃಗದಂತಿರುವ ಮನುಷ್ಯನನ್ನು ಸುಂದರ ರೂಪ ಕೊಡುವನೇ ಕ್ಷೌರಿಕ. ಕ್ಷೌರಿಕ ಕತ್ತಿ ಹಿಡಿಯುವುದು ಸುಂದರಗೊಳಿಸುವುದಕ್ಕೆ ಮಾತ್ರ ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ನೀರಾವರಿ ಇಲಾಖೆಯ ನಿವೃತ್ತ ಸರ್ಕಾರಿ ನೌಕರ ಟಿ.ವಿ ಸೀತಾರಾಮಯ್ಯ, ಕುಲಕಸುಬದಾರರಾದ ಟಿ.ಸಿ ಪುಂಡರೀಕ ಹಾಗೂ ಓ.ಕೆ ವರದರಾಜು, ಹಿರಿಯ ಸಮಾಜ ಸೇವಕರಾದ ನಾರಾಯಣಪ್ಪ, ಹಾಗೂ ಸ್ಯಾಕ್ಸೋಫೋನ್ ಕಲಾವಿದೆ ಯಶಸ್ವಿನಿ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕು|| ಸುಮನ ದಾಸರಾಜು ಮತ್ತು ಸಂಗಡಿಗರಿಂದ “ಅಂಬಿಗ ನಾ ನಿನ್ನ ನಂಬಿದೆ” ಎಂಬ ಭಕ್ತಿಗೀತೆಗಳ ಗಾಯನವನ್ನು ಏರ್ಪಡಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ, ಜಿಲ್ಲಾ ಸವಿತಾ ಸಮಾಜ ಗೌರವಾಧ್ಯಕ್ಷ ಟಿ.ವಿ ರಂಗನಾಥ, ಎಂ.ರಾಜಣ್ಣ, ಅಧ್ಯಕ್ಷ ಮಂಜೇಶ್, ಕೆ.ವಿ ನಾರಾಯಣಪ್ಪ, ಟಿ.ಸಿ ಮಂಜುನಾಥ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

 

(Visited 37 times, 1 visits today)

Related posts

Leave a Comment