ತುಮಕೂರು:
ಶ್ರೀ ಸಿದ್ದಗಂಗಾ ಮಠ ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವವು ಫೆಬ್ರುವರಿ 26 ರಿಂದ ಮಾರ್ಚ್ 7 ರವರೆಗೆ ಜರುಗಲಿದ್ದು, ಜಾತ್ರೆ ಪ್ರಯುಕ್ತ ಮಾರ್ಚ್ 5ರಂದು ರಥೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಏರ್ಪಡಿಸಲಾಗುವುದು ಎಂದು ಮಠದ ಅಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮಿಗಳು ತಿಳಿಸಿದ್ದಾರೆ.
ಜಾತ್ರೆಯಲ್ಲಿ ಫೆಬ್ರುವರಿ 26ರ ರಾತ್ರಿ ಶ್ರೀ ಗೋಸಲ ಸಿದ್ಧೇಶ್ವರಸ್ವಾಮಿ ಉತ್ಸವ, ಶೂನ್ಯ ಸಿಂಹಾಸನರೋಹಣೋತ್ಸವ, ವೃಷಭ ವಾಹನ ಉತ್ಸವಗಳು ನಡೆಯಲಿದ್ದು, ಫೆಬ್ರುವರಿ 27ರಂದು ನಂದಿವಾಹನ ಹಾಗೂ ಗಜವಾಹನ; ಫೆಬ್ರುವರಿ 28ರಂದು ಹುಲಿವಾಹನ ಹಾಗೂ ಸಿಂಹವಾಹನ; ಮಾರ್ಚ್ 1ರಂದು ಹುತ್ತದ ವಾಹನ ಹಾಗೂ ಶೇಷವಾಹನ; ಮಾರ್ಚ್ 2ರಂದು ಅಶ್ವವಾಹನ ಹಾಗೂ ನವಿಲುವಾಹನ; ಮಾರ್ಚ್ 3ರಂದು ರಾವಣವಾಹನ, ಬಿಲ್ವವೃಕ್ಷವಾಹನ ಹಾಗೂ ನವರಂಗಪಾಲಕಿ ಉತ್ಸವ; ಮಾರ್ಚ್ 4ರಂದು ಮಹಾಶಿವರಾತ್ರಿ ಪ್ರಯುಕ್ತ ಬೆಳ್ಳಿರಥೋತ್ಸವ ಹಾಗೂ ಮುತ್ತಿನ ಪಾಲಕಿ ಉತ್ಸವ ನಡೆಯಲಿವೆ. ಅಲ್ಲದೆ ಮಾರ್ಚ್ 5ರಂದು ರಥೋತ್ಸವ ಹಾಗೂ ರುದ್ರಾಕ್ಷಿ ಮಂಟಪೋತ್ಸವ, ಮಾರ್ಚ್ 6ರಂದು ಬೆಳ್ಳಿಪಾಲಕಿ ಉತ್ಸವ; ಮಾರ್ಚ್7ರಂದು ತೆಪ್ಪೋತ್ಸವ ಹಾಗೂ ಪಂಚಬ್ರಹ್ಮೋತ್ಸವ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.