ತುಮಕೂರು:

      ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 525 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳಿಗೆ ಇಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ.ಪರಮೇಶ್ವರ್ ಚಾಲನೆ ನೀಡಿದರು.

      ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿಂದು ಅವರು 49.97 ಕೋಟಿ ರೂ. ವೆಚ್ಚದಲ್ಲಿ ಸ್ಪೋಟ್ರ್ಸ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ; 31 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವ ಹೇಮಾವತಿ ನೀರನ್ನು ಅಮಾನಿಕೆರೆಗೆ ಹರಿಸುವ ಹಾಗೂ 25.50ಕೋಟಿ ರೂ. ವೆಚ್ಚದಲ್ಲಿ ಅಮಾನಿಕೆರೆ ನೀರನ್ನು ಪಿ.ಎನ್.ಪಾಳ್ಯ ವಾಟರ್ ಪ್ಲಾಂಟ್‍ಗೆ ಹರಿಸುವ ಕಾಮಗಾರಿಗೆ ಶಂಕುಸ್ಥಾಪನೆ; ಜಿಲ್ಲಾಸ್ಪತ್ರೆ ಆವರಣದಲ್ಲಿ 56 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಮೆಡಿಕಲ್ ಫೆಸಿಲಿಟಿ ಸೆಂಟರ್ ಮತ್ತು ಟ್ರಾಮಾಕೇರ್ ಸೆಂಟರ್ ಶಂಕುಸ್ಥಾಪನೆ, ಪಾಲಿಕೆ ಆವರಣದಲ್ಲಿ 42ಲಕ್ಷ ರೂ. ವೆಚ್ಚದ ಐಸಿಎಂಸಿಸಿ ಕಟ್ಟಡದ ಉದ್ಘಾಟನೆ; ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣದಲ್ಲಿ 93.78 ಕೋಟಿ ರೂ. ವೆಚ್ಚದಲ್ಲಿ ಇಂಟಿಗ್ರೇಟೆಡ್ ಬಸ್ ಟರ್ಮಿನಲ್ ರಿಡೆವಲಪ್‍ಮೆಂಟ್ ಕಾಮಗಾರಿ ಹಾಗೂ 16.08 ಕೋಟಿ ರೂ. ವೆಚ್ಚದ ಸ್ಮಾರ್ಟ್ ರಸ್ತೆ ಅಭಿವೃದ್ಧಿ; ಸರ್ಕಾರಿ ಎಂಪ್ರೆಸ್ ಕಾಲೇಜು ಆವರಣದಲ್ಲಿ 13 ಕೋಟಿ ರೂ. ವೆಚ್ಚದ ಮಲ್ಟಿಡೈಮನ್ಷನಲ್ ಆಡಿಟೋರಿಯಂ, ಲೈಬ್ರರಿ ಮತ್ತು ಕ್ಲಾಸ್‍ರೂಮ್ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಹಾಗೂ 163 ಲಕ್ಷ ರೂ. ವೆಚ್ಚದ ಡಿಜಿಟಲ್ ಲೈಬ್ರರಿ ಸಲ್ಯೂಷನ್ಸ್ ಕೇಂದ್ರದ ಉದ್ಘಾಟನೆ ಹಾಗೂ 33.51 ಕೋಟಿ ರೂ. ವೆಚ್ಚದ ಸಿಟಿ ಲೈಬ್ರರಿ ಮತ್ತು ಬಿಸಿನೆಸ್ ಇನುಕ್ಯೂಬೇಷನ್ ಅಂಡ್ ಇನ್ನೋವೇಷನ್ ಸೆಂಟರ್‍ಗೆ ಶಂಕುಸ್ಥಾಪನೆ ನೆರವೇರಿಸಿದರು.

      ನಂತರ ಕೇಂದ್ರೀಯ ಗ್ರಂಥಾಲಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಸ್ಮಾರ್ಟ್ ಸಿಟಿ ಯೋಜನೆಯಡಿ ಈ ದಿನ ಒಟ್ಟಾರೆ 525 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಾಗಿದ್ದು, ಅಧಿಕಾರಿಗಳು ನಿಗಧಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕೆಲಸ ಮಾಡಬೇಕೆಂದು ಸೂಚನೆ ನೀಡಿದರು.

      ಕೇಂದ್ರದ ಶೇ.50 ಹಾಗೂ ರಾಜ್ಯ ಸರ್ಕಾರದ ಶೇ.50ರಷ್ಟು ಸೇರಿದಂತೆ ಒಟ್ಟು 1000 ಕೋಟಿ ರೂ.ಗಳ ಅನುದಾನ ವಿನಿಯೋಗಿಸಿಕೊಂಡು ತುಮಕೂರು ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿಸಲು ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನಗರದ ಅಗತ್ಯತೆಗಳ ಆಧಾರದ ಮೇಲೆ ಸ್ಮಾರ್ಟ್ ಸಿಟಿ ಅಧ್ಯಕ್ಷೆ ಡಾ: ಶಾಲಿನಿ ರಜನೀಶ್, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ, ಮತ್ತಿತರ ಅಧಿಕಾರಿಗಳು ಕೂಲಂಕುಷವಾಗಿ ಚರ್ಚಿಸಿ ಕ್ರೀಡೆ, ರಸ್ತೆ, ಶಿಕ್ಷಣ, ಆರೋಗ್ಯ, ನೈರ್ಮಲ್ಯತೆ, ಕುಡಿಯುವ ನೀರಿನ ವ್ಯವಸ್ಥೆ ಕಾಮಗಾರಿಗಳಿಗೆ ಸಮನಾದ ಆದ್ಯತೆ ನೀಡಿ ಈ ಕಾಮಗಾರಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

      ಅಪಘಾತ ಸಂಭವಿಸಿದಾಗ ತುರ್ತು ಸಂದರ್ಭಗಳಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನಂತಹ ಮಹಾನಗರಗಳಿಗೆ ಹೋಗುವುದನ್ನು ತಪ್ಪಿಸಲು ಜಿಲ್ಲಾಸ್ಪತ್ರೆ ಆವರಣದಲ್ಲಿ ಟ್ರಾಮಾಸೆಂಟರ್ (ಅಪಘಾತ ಚಿಕಿತ್ಸಾ ವಿಭಾಗ)ಅನ್ನು ನಿರ್ಮಿಸುವುದು, ನಮ್ಮಲ್ಲಿರುವಂತಹ ನೀರಿನ ಮೂಲವನ್ನು ಬಳಸಿಕೊಂಡು 24 ಗಂಟೆಗಳ ಕಾಲವೂ ಜನರಿಗೆ ಕುಡಿಯುವ ನೀರೊದಗಿಸಲು 500 ಎಕರೆ ವಿಸ್ತೀರ್ಣದ ಅಮಾನಿಕೆರೆಗೆ ಹೇಮಾವತಿ ನೀರನ್ನು ಹರಿಸುವುದು ಸ್ಮಾರ್ಟ್ ಸಿಟಿ ಕಾಮಗಾರಿಗಳ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದ ಅವರು ಶೀಘ್ರದಲ್ಲೇ ಬುಗುಡನಹಳ್ಳಿ ಕೆರೆಯಿಂದ ಅಮಾನಿಕೆರೆಗೆ ನೀರನ್ನು ತುಂಬಿಸಿ ಶುದ್ಧೀಕರಿಸಿ ಕುಡಿಯುವ ನೀರು ಸರಬರಾಜು ಮಾಡುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದರು.

      ಆಧುನಿಕ ಸ್ಪರ್ಧಾ ಜಗತ್ತಿನಲ್ಲಿ ತಕ್ಷಣವೇ ಮಾಹಿತಿ ಪಡೆಯಲು ಅನುಕೂಲವಾಗುವ ರೀತಿಯಲ್ಲಿ ಸಾರ್ವಜನಿಕ ಬಳಕೆಗಾಗಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಡಿಜಿಟಲ್ ಲೈಬ್ರರಿಯನ್ನು ನಿರ್ಮಿಸಲು ಯೋಜಿಸಲಾಗಿದೆ. ಅಲ್ಲದೆ ಬಸ್‍ನಿಲ್ದಾಣ, ಶಾಪಿಂಗ್ ಮಾಲ್, ರೈಲು ನಿಲ್ದಾಣ, ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಕಾನೂನು ಉಲ್ಲಂಘನೆ ಪ್ರಕರಣಗಳ ಮೇಲೆ ಸಿಸಿಟಿವಿ ಮೂಲಕ ಕಣ್ಣಿಡಲು ಪೊಲೀಸರಿಗಾಗಿ ಇಂಟಿಗ್ರೇಟೆಡ್ ಕಮ್ಯಾಂಡರ್ ಸೆಂಟರ್ ಅನ್ನು ತೆರೆಯಲಾಗುವುದು. ಕಬಡ್ಡಿ, ಕೋಕೋ, ಫುಟ್‍ಬಾಲ್, ಮತ್ತಿತರ ಕ್ರೀಡೆಗಳಿಗೆ ಹೆಸರುವಾಸಿಯಾದ ತುಮಕೂರಿನ ಕ್ರೀಡಾಪಟುಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತರುವಂತೆ ಮಾಡಲು 50 ಕೋಟಿ ರೂ.ವೆಚ್ಚದಲ್ಲಿ ಸಿಂತೆಟಿಕ್ ಟ್ರ್ಯಾಕ್ ಒಳಗೊಂಡ ಸುಸಜ್ಜಿತ ಕ್ರೀಡಾಂಗಣ ಅಭಿವೃದ್ಧಿಪಡಿಸಲಾಗುತ್ತಿದೆಯಲ್ಲದೆ ಉತ್ತಮ ಕ್ರೀಡಾ ಸಾಮಗ್ರಿಗಳನ್ನು ಪೂರೈಕೆ ಮಾಡುವುದು ಈ ಸ್ಮಾರ್ಟ್ ಸಿಟಿ ಯೋಜನೆಯ ಆಕಾಂಕ್ಷೆಯಾಗಿದೆ ಎಂದು ತಿಳಿಸಿದರು.

      ತುಮಕೂರು ನಗರಾಭಿವೃದ್ಧಿಗಾಗಿ ಕಳೆದ ಆಯವ್ಯಯದಲ್ಲಿ ವಿಶೇಷ ಅನುದಾನವಾಗಿ 125 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆಯಲ್ಲದೆ 67 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಸದ್ಯದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು. ವಸಂತನರಸಾಪುರದ ಸುಮಾರು 18000 ಎಕರೆ ಪ್ರದೇಶದಲ್ಲಿ ಇಡೀ ಏಷ್ಯಾದಲ್ಲಿ ಅತಿ ದೊಡ್ಡದೆನಿಕೊಂಡ ಕೈಗಾರಿಕಾ ಹಬ್ ನಿರ್ಮಾಣವಾಗುತ್ತಿದೆ. ಗುಬ್ಬಿ ತಾಲೂಕು ಬಿದರೆಹಳ್ಳಕಾವಲ್‍ನಲ್ಲಿರುವ ಹೆಚ್‍ಎಎಲ್ ಹೆಲಿಕಾಪ್ಟರ್ ಘಟಕದಲ್ಲಿ ಬರುವ 1 ವರ್ಷದೊಳಗೆ ಹೆಲಿಕಾಪ್ಟರ್ ಹಾರಾಟ ಪ್ರಾರಂಭವಾಗುತ್ತದೆ. ಇದನ್ನೆಲ್ಲಾ ಗಮನಿಸಿದಾಗ ಬೆಂಗಳೂರಿನಷ್ಟೇ ಶರವೇಗದಲ್ಲಿ ತುಮಕೂರು ಬೆಳೆಯುತ್ತಿದೆ. ಮುಂದಿನ ಹತ್ತು ವರ್ಷಗಳಲ್ಲಿ ತುಮಕೂರು ನಗರದ ಬೆಳವಣಿಗೆಯನ್ನು ಊಹೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

      ಬೆಂಗಳೂರಿನಿಂದ ತುಮಕೂರಿಗೆ ಪ್ರತಿ 10 ನಿಮಿಷಕ್ಕೊಂದರಂತೆ ರೈಲು ಸಂಪರ್ಕ ಸೌಲಭ್ಯ ಒದಗಿಸಲು ಪ್ರತ್ಯೇಕ ಸಬ್ ಅರ್ಬನ್ ರೈಲು ಮಾರ್ಗಕ್ಕೆ ಸರ್ಕಾರದಿಂದ ಒಪ್ಪಿಗೆ ದೊರೆತಿದೆ. ಅಲ್ಲದೆ ಕುಣಿಗಲ್ ರಸ್ತೆಯ ಬಿದರಕಟ್ಟೆಯ 400 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ತುಮಕೂರು ವಿಶ್ವವಿದ್ಯಾನಿಲಯ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲ ದಿನಗಳಲ್ಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಸ್ಥಳಾಂತರಗೊಳ್ಳಲಿದೆ ಎಂದು ತಿಳಿಸಿದರು.

      ಮೈಸೂರು, ಮಂಡ್ಯ, ಹಾಸನದಂತಹ ಜಿಲ್ಲೆಗಳನ್ನು ಹೋಲಿಸಿದಾಗ ನಮ್ಮ ಜಿಲ್ಲೆಗೆ ಇನ್ನಷ್ಟು ಸೌಲಭ್ಯಗಳ ಅಗತ್ಯತೆ ಇದೆ ಎಂಬುದನ್ನು ಮನಗಂಡು ಇಂತಹ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರಲ್ಲದೆ, ನಗರದ ಸ್ಮಾರ್ಟ್ ಸಿಟಿ ಯೋಜನೆಯಡಿ ಆಗಲಿ ನೀರಾವರಿ ಇಲಾಖೆಯಿಂದಾಗಲಿ ಅನುದಾನ ಬಳಸಿಕೊಂಡು ಮರಳೂರು ಕೆರೆ ಭರ್ತಿ ಮಾಡುವ ಪ್ರಯತ್ನವಾಗಬೇಕು. ಪೂರ್ವಜರು ನಿರ್ಮಿಸಿದ ಅಮಾನಿಕೆರೆ ಹಾಗೂ ಮರಳೂರು ಕೆರೆಗಳನ್ನು ಆದಷ್ಟು ಬೇಗ ನೀರು ಭರ್ತಿಯಾದರೆ ನಗರ ಸಂಮೃದ್ಧವಾಗುವುದರಲ್ಲಿ ಸಂಶಯವಿಲ್ಲ. ಜೊತೆಗೆ ಬೆಂಗಳೂರಿನ ಲಾಲ್‍ಬಾಗ್, ಕಬ್ಬನ್ ಪಾರ್ಕ್‍ನಂತೆ ತುಮಕೂರಿನಲ್ಲಿಯೂ ಕುಟುಂಬದವರೆಲ್ಲ ವಿಹರಿಸಲು ಅನುವಾಗುವಂತೆ ಸುಮಾರು 200 ಎಕರೆ ಪ್ರದೇಶವನ್ನು ಗುರುತಿಸಿ ಪಾರ್ಕ್ ನಿರ್ಮಾಣಕ್ಕೆ ಅಧಿಕಾರಿಗಳು ಗಮನಹರಿಸಬೇಕೆಂದು ತಿಳಿಸಿದರು.

      ಸ್ಮಾರ್ಟ್ ಸಿಟಿ ಪರಿಕಲ್ಪನೆಯ ಪುಸ್ತಕವನ್ನು ಬರೆದಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್ ಅವರನ್ನು ಪರಮೇಶ್ವರ್ ಅಭಿನಂದಿಸಿದರು.

      ಅಧ್ಯಕ್ಷತೆವಹಿಸಿದ್ದ ಶಾಸಕ ಜ್ಯೋತಿಗಣೇಶ್ ಮಾತನಾಡಿ, ನಗರ ಸ್ಮಾರ್ಟ್ ಆಗಬೇಕಾದರೆ ಅಲ್ಲಿರುವ ಎಲ್ಲಾ ಸೌಲಭ್ಯಗಳಲ್ಲೂ ಸ್ಮಾರ್ಟ್ ಆಗಬೇಕು. ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರಿನಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿರುವ ಎಲ್ಲಾ ಕಾಮಗಾರಿಗಳು ಜನೋಪಯೋಗಿಯಾಗಲಿವೆ. ಯೋಜನೆ ಕೈಗೊಳ್ಳಲು ಸಹಕರಿಸಿದವರೆಲ್ಲರಿಗೂ ಅಭಿನಂದನೆ ಸಲ್ಲಿಸಿದರಲ್ಲದೆ ಎಂಪ್ರೆಸ್ ಶಾಲೆ ಹಾಗೂ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸುಮಾರು 25000 ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ 35 ಕೋಟಿ ರೂ. ವೆಚ್ಚದ ಸ್ಮಾರ್ಟ್ ತರಗತಿ, ಕಂಪ್ಯೂಟರ್, ಸ್ಮಾರ್ಟ್ ಲ್ಯಾಬ್ ಮತ್ತಿತರ ಸೌಲಭ್ಯಗಳನ್ನು ಒದಗಿಸುತ್ತಿರುವುದು ಅಭಿನಂದನಾರ್ಹ ಎಂದು ತಿಳಿಸಿದರು.

      ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ಜಿಲ್ಲಾಸ್ಪತ್ರೆಗೆ ಅತ್ಯಾವಶ್ಯಕವಿರುವ ವೈದ್ಯಕೀಯ ಸಿಬ್ಬಂದಿ, ಮಾನವ ಸಂಪನ್ಮೂಲಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜಿಲ್ಲಾಸ್ಪತ್ರೆಯಲ್ಲಿ ಸುಸಜ್ಜಿತ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕೆಂದು ವ್ಯಾಸಂಗ ಮಾಡುತ್ತಿರುವ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ಬೇಡಿಕೆಯಂತೆ ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಶೀಘ್ರವೇ ಮಂಜೂರಾತಿಗೆ ನಿರ್ಣಯ ಕೈಗೊಳ್ಳಲಾಗುವುದು. ತುಮಕೂರಿನ ಜಿಲ್ಲಾಸ್ಪತ್ರೆಯು ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಿಗಿಂತಲೂ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ. ಅತ್ಯಂತ ವೈಜ್ಞಾನಿಕವಾಗಿ ಚಿಕಿತ್ಸೆ ನೀಡುತ್ತಿರುವ ಏಕೈಕ ಆಸ್ಪತ್ರೆ ಇದಾಗಿದೆ. ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಡಿ ಸುಮಾರು 4 ಕೋಟಿ ರೂ.ಗಳ ಅನುದಾನವನ್ನು ತಂದುಕೊಟ್ಟಿರುವ ಈ ಆಸ್ಪತ್ರೆಯ ಆದಾಯದಲ್ಲಿ ಶೇ. 30ರಷ್ಟು ಹಣವನ್ನು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ಸಿಬ್ಬಂದಿಗೆ ಪ್ರೋತ್ಸಾಹಧನವಾಗಿ ನೀಡುವ ಯೋಜನೆಯೊಂದನ್ನು ಸರ್ಕಾರ ರೂಪಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುತ್ತದೆ ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಿರೆನಾ(Sirena) ಟೆಕ್ನಾಲಜೀಸ್ ಅಭಿವೃದ್ಧಿಪಡಿಸಿರುವ ಮೊದಲನೇ ಹ್ಯುಮನಾಯ್ಡ್ ರೋಬೊ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ವಿವರಗಳ ಮಾಹಿತಿ ನೀಡಿದ್ದು, ವಿಶೇಷವಾಗಿತ್ತು. ಮುಂದಿನ ದಿನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಈ ರೋಬೊ ಅನ್ನು ಬಳಸಿಕೊಳ್ಳುವ ಸಲುವಾಗಿ ಪ್ರಪಂಚದಲ್ಲೇ ಪ್ರಥಮ ಬಾರಿಗೆ ನಿನೋ(Nino) ಎಂಬ ಈ ರೋಬೋ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಿರೆನಾ ಟೆಕ್ನಾಲಜೀಸ್ ಅಧಿಕಾರಿ ಧನ್ಯಾಮುಕುಂದ್ ತಿಳಿಸಿದರು.

      ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್ ಶಾಸಕ ಬಿ.ಸತ್ಯನಾರಾಯಣ, ಮೇಯರ್ ಲಲಿತಾ ರವೀಶ್, ಉಪ ಮೇಯರ್ ರೂಪಶ್ರೀ ಬಿ.ಎಸ್., ಪಾಲಿಕೆ ಸದಸ್ಯೆ ಗಿರಿಜಾ ಧನ್ಯಕುಮಾರ್, ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನವಂಶಿಕೃಷ್ಣ, ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಬಿ.ಟಿ.ರಂಗಸ್ವಾಮಿ, ಡಿಹೆಚ್‍ಓ ಡಾ: ಬಿ.ಆರ್.ಚಂದ್ರಿಕಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ: ವೀರಭದ್ರಯ್ಯ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಮತ್ತಿತರ ಅಧಿಕಾರಿಗಳು, ಶಾಲಾ ಮಕ್ಕಳು ಉಪಸ್ಥಿತರಿದ್ದರು.

(Visited 43 times, 1 visits today)