ಪತ್ರಿಕಾಗೋಷ್ಠಿಗೆ ಅಡ್ಡಿಯಾದ ಜೆಡಿಎಸ್ : ಸೆಡ್ಡು ಹೊಡೆದ ಬಿಜೆಪಿ

ತುಮಕೂರು:

      ಮಾಜಿ ಶಾಸಕ ಬಿ.ಸುರೇಶ್ ಗೌಡರು ಕುರುಬ ಸಮುದಾಯವನ್ನು ಕ್ಷಮೆ ಕೇಳಲು ಕರೆದಿದ್ದ ಪತ್ರಿಕಾ ಗೋಷ್ಠಿಯನ್ನು ನಡೆಸಲು ಜೆಡಿಎಸ್ ಮುಖಂಡರು ಅಡ್ಡಿಪಡಿಸಿದ ಘಟನೆ ಇಂದು ನಡೆದಿದೆ.

      ಪಕ್ಷದ ಶಾಸಕ ಗೌರಿಶಂಕರ್ ಬೆಂಬಲಿಗರು ಪತ್ರಿಕಾಗೋಷ್ಠಿ ನಡೆಯದಂತೆ ಉಡುಪಿ ಹೋಟೆಲ್ ಬಾಗಿಲು ಮುಚ್ಚಿಸಿದ್ದರು. ಮೊದಲೆ ನಿಗಧಿಯಾದಂತೆ ಅದೇ ಹೋಟೆಲ್‍ನಲ್ಲಿ ಗೋಷ್ಠಿ ನಡೆಯಿತಾದರೂ ಗಲಾಟೆ ಮಾಡಿ ಹಲ್ಲೆ ನಡೆಸಲು ಸಂಚು ರೂಪಿಸಲಾಗಿತ್ತು. ಇದನ್ನರಿತ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.

      ಪತ್ರಿಕಾ ಗೋಷ್ಠಿ ನಡೆಯುತ್ತಿದ್ದ ಖಾಸಗಿ ಹೋಟೆಲ್ ಮುಂಭಾಗದಲ್ಲಿ ಡಿವೈಎಸ್ಪಿ ತಿಪ್ಪೇಸ್ವಾಮಿ, ತಿಲಕ್ ಪಾರ್ಕ್ ಇನ್ಸ್ಪೆಕ್ಟರ್ ರಾಧಾಕೃಷ್ಣ, ನಗರ ಇನ್ಸ್ಪೆಕ್ಟರ್ ಚಂದ್ರಶೇಖರ್ ಐವರು ಸಬ್ ಇನ್ಸ್ಪೆಕ್ಟರ್ ಗಳು, ಎಎಸೈಗಳು, ಸಿಬ್ಬಂದಿ, ಡಿಆರ್ ವ್ಯಾನ್ ಎಲ್ಲರೂ ಜಮಾವಣೆಗೋಂಡಿದ್ದರು, ಕಾರಣ ಮಾಜಿ ಶಾಸಕರ ಮೇಲೆ ಹಲ್ಲೆಯಾಗುವ ಎಲ್ಲಾ ಲಕ್ಷಣಗಳು ಪೊಲೀಸ್ ಇಲಾಖೆಗೆ ತಿಳಿದಿತ್ತು ಎನ್ನಲಾಗುತ್ತಿದೆ, ಜೆಡಿಎಸ್ ಕಾರ್ಪೋರೇಟರ್ ಸೇರಿದಂತೆ ಕುರುಬ ಸಮುದಾಯದ ಇಪ್ಪತ್ತು ಮಂದಿ ಸುರೇಶ್ ಗೌಡರನ್ನು ಪ್ರಶ್ನಿಸುತ್ತಿರುವಾಗ ಕೆಲವು ಜೆಡಿಎಸ್ ಮುಖಂಡರು ಮಾಜಿ ಶಾಸಕರ ಮೇಲೆ ಹಲ್ಲೆ ನಡೆಸುವ ಪ್ಲಾನ್ ಮಾಡಲಾಗಿತ್ತು. ಆದರೆ, ಅದು ವಿಫಲವಾಯಿತು ಎನ್ನಲಾಗುತ್ತಿದೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಗ್ರಾಮಾಂತರ ಕ್ಷೇತ್ರದ ರಾಜಕೀಯ ಕಡು ವೈರಿಗಳಾದ ಹಾಲಿ ಶಾಸಕ ಗೌರಿಶಂಕರ್ ಮತ್ತು ಮಾಜಿ ಶಾಸಕ ಸುರೇಶ್ ಗೌಡರ ನಡುವೆ ಬದ್ಧ ವೈರತ್ವದ ಕಾರಣದಿಂದಾಗಿ ಕೇವಲ ರಾಜಕೀಯ ಲಾಭಕ್ಕಾಗಿ ಕುರುಬರ ನಿಂದನೆಯ ವಿಚಾರ ಮುಂದಿಟ್ಟುಕೊಂಡು ಅದರ ಲಾಭ ಪಡೆಯುವ ತವಕದಲ್ಲಿದೆ ಎಂದು ತಿಳಿದುಬರುತ್ತಿದೆ. ಜೆಡಿಎಸ್ ಮುಖಂಡರು ಹಚ್ಚಿದ ಜಾತಿಯ ದಳ್ಳುರಿಯಲ್ಲಿ ಕೆಲವರು ಕಾವು ಕಾಯಿಸಿಕೊಳ್ಳಿವ ಇರಾದೆಯಲ್ಲಿದ್ದರು ಆದರೆ ಅದು ನಿರೀಕ್ಷಿಸಿದ ಮಟ್ಟಿಗೆ ಸಫಲತೆ ಕಾಣಲಿಲ್ಲ ಎನ್ನಲಾಗುತ್ತಿದೆ.

      ಪೊಲೀಸ್ ರಕ್ಷಣೆಯಲ್ಲಿ ಪತ್ರಿಕಾಗೋಷ್ಠಿ ನಡೆಸುವ ಅನಿವಾರ್ಯತೆ ತುಮಕೂರಿನಲ್ಲಿ ಸೃಷ್ಟಿಯಾಗುತ್ತಿದೆ ಎಂದರೆ ಎತ್ತ ಸಾಗಿದೆ ತುಮಕೂರು ಗ್ರಾಮಾಂತರ ರಾಜಕೀಯ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ಹೀಗೆ ಮುಂದುವರೆದರೆ ಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಭಯದ ವಾತಾವರಣದಲ್ಲಿ ಬದುಕುವ ಅನಿವಾರ್ಯತೆ ಸೃಷ್ಟಿಯಾಗುವುದರಲ್ಲಿ ಸಂಶಯವಿಲ್ಲ.

ಕುರುಬ ಸಮುದಾಯವನ್ನು ಕ್ಷಮೆ ಯಾಚಿಸಿದ ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್ ಗೌಡ:

      ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕನಾದ ಬಿ.ಸುರೇಶ್‍ಗೌಡ ನಾನು ಸೋಮವಾರದಂದು ನನ್ನ ಕ್ಷೇತ್ರದಲ್ಲಿ ಸಂಚರಿಸಿ ನನ್ನ ಕ್ಷೇತ್ರದಲ್ಲಿರುವ ನನ್ನ ಮತದಾರ ಬಂಧುಗಳ ಮನೆಗಳಲ್ಲಿ ಸರಣಿ ಕಳ್ಳತನವಾಗುತ್ತಿರುವ ಬಗ್ಗೆ ಕೇಳಿ ತಿಳಿದುಕೊಂಡು, ಹೆಬ್ಬೂರು ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಹಾಗೂ ಅಲ್ಲಿರುವಂತಹ ಎಸ್‍ಬಿ ಕಾನ್‍ಸ್ಟೆಬಲ್ ರವರು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಮಾತನಾಡುವ ಸಂದರ್ಭದಲ್ಲಿ ಆಡು ಭಾಷೆಯ ಪದ ಬಳಸುವಾಗ ಕುರುಬ ಎನ್ನುವಂತಹ ಪದವನ್ನು ಬಾಯ್ತಪ್ಪಿನಿಂದ ಬಳಸಿರುತ್ತೇನೆ. ನನಗೆ ಕುರುಬ ಸಮುದಾಯದ ಬಗ್ಗೆ ಯಾವುದೇ ರೀತಿಯ ಬೇಸರ, ಆತಂಕ, ದ್ವೇಷ ಇರುವುದಿಲ್ಲ. ಆದರೆ ಹೆಬ್ಬೂರು ಠಾಣೆಯ ಎಸ್‍ಬಿ ಕಾನ್‍ಸ್ಟೆಬಲ್ ಪುಟ್ಟರಾಜು ಅವರ ಹೆಸರು ನನಗೆ ತಿಳಿದಿರುವುದಿಲ್ಲ. ಅವರ ಹೆಸರನ್ನು ತಿಳಿಯುವ ಸಂದರ್ಭದಲ್ಲಿ ನನ್ನ ಎದುರಿಗೆ ಅಲ್ಲಿದ್ದಂತಹ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿಗಳಿಗೆ ಯಾರು ಕುರುಬ ಜನಾಂಗದವರು ಎಸ್‍ಬಿ ಕಾನ್ ಸ್ಟೆಬಲ್ ಎಂದು ಕೇಳಿದೆ ಅಷ್ಟೇ ವಿನಃ ನಾನು ಕುರುಬ ಸಮಾಜವನ್ನು ನಿಂದಿಸಿಲ್ಲ. ಆ ವ್ಯಕ್ತಿಗೆ 420 ಎಂಬ ಪದ ಬಳಕೆ ಮಾಡಿರುತ್ತೇನೆ. ಕೇವಲ ವ್ಯಕ್ತಿಯ ನಿಂದನೆಯನ್ನು ಸಮಾಜದ ನಿಂದನೆ ಎಂದು ತಪ್ಪಾಗಿ ಅರ್ಥೈಸಿ ರಾಜಕೀಯ ದ್ವೇಷಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಕುರುಬ ಸಮಾಜದ ಬಗೆಗೆ ನನಗೆ ಪ್ರೀತಿ ವಿಶ್ವಾಸ ಅಭಿಮಾನವಿದೆ. ಮಾತಿನ ಭರದಲ್ಲಿ ನಾನು ಬಳಸಿದ ಪದದಿಂದಾಗಿ ತಮ್ಮ ಸಮುದಾಯದ ಬಂಧುಗಳ ಮನಸ್ಸುಗಳಿಗೆ, ಮನಸ್ಸಿನ ಭಾವನೆಗಳಿಗೆ ಧಕ್ಕೆಯಾಗಿದ್ದಲ್ಲಿ ನಾನು ಈ ಸಮುದಾಯದ ಬಂಧುಗಳಿಗೆ ಬಹಿರಂಗವಾಗಿ ಕ್ಷಮೆಯಾಚಿಸುತ್ತೇನೆ, ನನ್ನ ರಾಜಕೀಯ ವಿರೋಧಿಗಳು ಇದನ್ನು ಬಳಕೆ ಮಾಡಿಕೊಂಡು ಸಮುದಾಯವನ್ನು ನನ್ನ ವಿರುದ್ಧ ಎತ್ತಿ ಕಟ್ಟಲು ಸಂಚು ರೂಪಿಸುತ್ತಿರುವುದರಿಂದ ದಯವಿಟ್ಟು ಸಹಕರಿಸಬೇಕೆಂದು ಮನವಿ ಮಾಡುತ್ತೇನೆ ಎಂದು ತಿಳಿಸಿದರು.

      ಮಾಜಿ ವಿಧಾನ ಪರಿಷತ್ ಸದಸ್ಯ ಹುಲಿನಾಯ್ಕಕ್ ಮಾತನಾಡಿ ಸುರೇಶ್ ಗೌಡರು ಈಗಾಗಲೇ ಕ್ಷಮೆಯಾಚಿಸಿರುವುದರಿಂದ ಈ ವಿಚಾರವನ್ನ ಕೈಬಿಡೋಣ. ವಿನಾಕಾರಣ ಮುಂದುವರಿಸುವುದು ಬೇಡ. ಆಡು ಭಾಷೆಯಲ್ಲಿ ಪದ ಬಳಕೆ ಮಾಡಿದ್ದಾರೆ ಅಷ್ಟೇ. ಅವರು ಸಮುದಾಯವನ್ನು ಬೈದಿಲ್ಲ. ಕೇವಲ ವ್ಯಕ್ತಿಯನ್ನು ಮಾತ್ರ ನಿಂದಿಸಿರುವುದು. ಕುರುಬ ಸಮುದಾಯದ ಬಗ್ಗೆ ಅವರಿಗೆ ಅಪಾರವಾದ ಗೌರವವಿದೆ. ಇದು ರಾಜಕೀಯ ಪ್ರೇರಿತವಾಗುವುದು ಸರಿಯಲ್ಲ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಓನಮೂ ನಾರಾಯಣ್, ಬಿ.ಕೆ.ಮಂಜುನಾಥ್ ಸೇರಿದಂತೆ ಮುಖಂಡರು ಭಾಗವಹಿಸಿದ್ದರು.

(Visited 518 times, 1 visits today)

Related posts

Leave a Comment