ತುರುವೇಕೆರೆ:

     ಕಾಮಗಾರಿ ನಿರ್ವಹಣೆ ವೇಳೆ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ಸುಸಜ್ಜಿತವಾದ ಚೆಕ್ ಡ್ಯಾಂ ಹಾಗೂ ಸೇತುವೆಯನ್ನು ನಿಗದಿತ ಅವಧಿಯೊಳಗೆ ಸಾರ್ವಜನಿಕ ಸೇವೆಗೆ ನೀಡುವಂತೆ ಗುತ್ತಿಗೆದಾರರಿಗೆ ಶಾಸಕ ಮಸಾಲ ಜಯರಾಮ್ ಸೂಚನೆ ನೀಡಿದರು.

      ತಾಲ್ಲೂಕಿನ ವಿಠಲದೇವರಹಳ್ಳಿ ಗ್ರಾಮದ ಬಳಿಯ ಲಕ್ಷ್ಮೀನರಸಿಂಹ ಸ್ವಾಮಿ ದೇಗುಲದ ಸಮೀಪದಲ್ಲಿ 100 ಲಕ್ಷ ರೂಗಳ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಿಠಲದೇವರಹಳ್ಳಿ ಗ್ರಾಮದ ಜನತೆ ತಮ್ಮ ಜಮೀನುಗಳಿಗೆ ಹಾಗೂ ಅರೆಮಲ್ಲೇನಹಳ್ಳಿ ಗ್ರಾಮಗಳಿಗೆ ಮಳೆಗಾಲದಲ್ಲಿ ತೆರಳುವುದು ದುಸ್ತರವಾಗಿವೆನಿಸಿತ್ತು. ಸುಮಾರು ವರ್ಷಗಳಿಂದ ಸರ್ವಋತು ಸೇತುವೆ ನಿರ್ಮಾಣಕ್ಕಾಗಿ ಜನತೆ ಚಾತಕ ಪಕ್ಷಿಗಳಂತೆ ಕಾದಿದ್ದರು. ಇದೀಗ ಜನತೆ ಆಶಯದಂತೆ ಕೋಟಿ ರೂ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖಾ ವತಿಯಿಂದ ಸೇತುವೆ ಹಾಗೂ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತುಕೊಂಡಿದ್ದು ಅತಿ ಶೀಘ್ರದಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದರು.

      ಸಂಸದರಾದ ಮುದ್ದಹನುಮೇಗೌಡ ಮಾತನಾಡಿ ಅಂತರ್ಜಲವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಚೆಕ್ ಡ್ಯಾಂಗಳನ್ನು ನಿಮಾಣ ಮಾಡಬೇಕಾದ ಅಗತ್ಯವಿದೆ. ವಿಠಲದೇವರಹಳ್ಳಿ ಗ್ರಾಮದ ಬಳಿ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ಹಾಗೂ ಚೆಕ್ ಡ್ಯಾಂ ಎರಡನ್ನೂ ನಿರ್ಮಾಣ ಮಾಡಲು ಮುಂದಾಗಿರುವ ಸಣ್ಣನೀರಾವರಿ ಇಲಾಖಾ ಕಾರ್ಯ ಶ್ಲಾಘನೀಯ. ಅಗತ್ಯ ಪ್ರದೇಶಗಳನ್ನು ಗುರುತಿಸಿ ಮತ್ತಷ್ಟು ಕಾಮಗಾರಿಗಳನ್ನು ಸಣ್ಣನೀರಾವರಿ ಇಲಾಖೆ ಕೈಗೆತ್ತುಕೊಳ್ಳಲಿ ಎಂದು ಸ್ಥಳದಲ್ಲಿ ಹಾಜರಿದ್ದ ಎಂಜಿನಿಯರ್‍ಗಳಿಗೆ ಸೂಚಿಸಿದರು.

       ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ. ಸದಸ್ಯ ವಿ.ಟಿ.ವೆಂಕಟರಾಮ್, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷರುಗಳಾದ ಕೊಂಡಜ್ಜಿವಿಶ್ವನಾಥ್, ಕೊಳಾಲನಾಗರಾಜ್, ಅರೆಮಲ್ಲೇನಹಳ್ಳಿ ಪಿ.ಎ.ಸಿ.ಬಿ. ಅಧ್ಯಕ್ಷ ಲಕ್ಷ್ಮಣಗೌಡ, ಆಯರಹಳ್ಳಿಪಾಂಡರಂಗಯ್ಯ, ಕೊಳಾಲರಘು, ಮಂಜಣ್ಣ, ಸಣ್ಣನೀರಾವರಿ ಇಲಾಖೆಯ ಎ.ಇ.ಇ. ಲಕ್ಷ್ಮೀಪ್ರಸನ್ನ, ಎ.ಇ. ಮಧುಸೂದನ್, ಮತ್ತಿತರರು ಹಾಜರಿದ್ದರು.

 

(Visited 24 times, 1 visits today)