ನಾನು ಪವರ್‍ಫುಲ್ ಅಥವಾ ಪವರ್ ಲೆಸ್ ಸಚಿವನಲ್ಲ-ಸಚಿವ ಯು.ಟಿ. ಖಾದರ್

ತುಮಕೂರು :

      ನಾನು ಪವರ್‍ಫುಲ್ ಅಥವಾ ಪವರ್ ಲೆಸ್ ಸಚಿವನಲ್ಲ. ನಾನೊಬ್ಬ ಸರ್ಕಾರ ವಹಿಸಿರುವ ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿ ನಿರ್ವಹಿಸುವ ಸಚಿವ. ಸಚಿವನಾಗಿ ಸರ್ಕಾರದ ಮಟ್ಟದಲ್ಲಿ ಏನು ಕೆಲಸ ಮಾಡಬೇಕೋ ಅದನ್ನು ಕಾನೂನು ವ್ಯಾಪ್ತಿಯಲ್ಲಿ ಮಾಡುತ್ತಿದ್ದೇನೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಇಂದಿಲ್ಲಿ ಸ್ಪಷ್ಟಪಡಿಸಿದರು.

      ನಗರದಲ್ಲಿ ಸ್ಮಾರ್ಟ್‍ಸಿಟಿ, ಮಹಾನಗರ ಪಾಲಿಕೆ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ ವತಿಯಿಂದ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಪರಿವೀಕ್ಷಣೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

      ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಈವರೆವಿಗೂ ಆಯುಕ್ತರನ್ನು ನೇಮಕ ಮಾಡಿಲ್ಲ. ಸರ್ಕಾರದಲ್ಲಿ ನೀವು ಪವರ್ ಲೆಸ್ ಅಥವಾ ಪವರ್ ಫುಲ್ ಸಚಿವರ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಈ ಮೇಲಿನಂತೆ ಉತ್ತರಿಸಿದರು.

      ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಶೀಘ್ರದಲ್ಲೆ ಆಯುಕ್ತರನ್ನು ನೇಮಕ ಮಾಡಲಾಗುವುದು ಎಂದು ಅವರು ಹೇಳಿದರು. ಸರ್ಕಾರದ ಯೋಜನೆಗಳನ್ನು ಕಾರ್ಯಗತಗೊಳಿಸುವ ಸಂದರ್ಭದಲ್ಲಿ ಕೆಲವರಿಗೆ ಸಂಶಯ ಇದ್ದೇ ಇರುತ್ತದೆ. ಹಾಗಾಗಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಮೂರನೇ ವ್ಯಕ್ತಿಯಿಂದ ಪರಿವೀಕ್ಷಣೆ ಮಾಡಿಸುತ್ತೇವೆ ಎಂದರು.

       ಕುಡಿಯುವ ನೀರಿಗೆ ಸಂಬಂಧಿಸಿದಂತೆ 330 ಕೋಟಿ ರೂ. ಯೋಜನೆಯಡಿಯಲ್ಲಿ ಕೆಲಸ ಪ್ರಾರಂಭವಾಗಿ ಆಗಸ್ಟ್ ಒಳಗೆ ಮುಕ್ತಾಯಗೊಳ್ಳಲಿದೆ ಎಂದರು.
ತುಮಕೂರು ದಿನೇ ದಿನೇ ಬೆಳೆಯುತ್ತಿದೆ. ತುಮಕೂರಿನಲ್ಲಿ ವಾಸ್ತವ್ಯ ಹೂಡಿ ಬೆಂಗಳೂರಿಗೆ ಕೆಲಸಕ್ಕೆ ಹೋಗಿ ಬರುವವರ ಸಂಖ್ಯೆ ಜಾಸ್ತಿಯಾಗಿದೆ. ಬೆಂಗಳೂರಿಗಿಂತ ಹೆಚ್ಚು ತುಮಕೂರಿನಲ್ಲೆ ನೆಲೆಸುತ್ತಿದ್ದಾರೆ. ಹಾಗಾಗಿ ಸ್ಥಳೀಯ ಜನಪ್ರತಿನಿಧಿಗಳು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಸಂಬಂಧ ನೀರಾವರಿ ಸಚಿವರು, ಮುಖ್ಯಮಂತ್ರಿ ಜತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ ಎಂದರು.

       ಈಗಾಗಲೇ ಉಪಮುಖ್ಯಮಂತ್ರಿಗಳು ನೀರಾವರಿ ಸಚಿವರೊಂದಿಗೆ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.  ಕಾಮಗಾರಿ ಗುಣಮಟ್ಟದ ಬಗ್ಗೆ ಹೇಳಲು ನಾನು ಟೆಕ್ನಿಕಲ್ ವ್ಯಕ್ತಿಯಲ್ಲ, ಕಾಮಗಾರಿಯನ್ನು ಮೂರನೇ ವ್ಯಕ್ತಿಯಿಂದ ಪರೀಕ್ಷೆಗೆ ಒಳಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

      ಈ ಸಂದರ್ಭದಲ್ಲಿ ಸಂಸದ ಜಿ.ಎಸ್. ಬಸವರಾಜು, ಶಾಸಕ ಜ್ಯೋತಿಗಣೇಶ್, ಮಾಜಿ ಶಾಸಕ ಡಾ. ರಫೀಕ್‍ಅಹಮದ್ ಮತ್ತಿತರರು ಉಪಸ್ಥಿತರಿದ್ದರು.
ರಾಜೀನಾಮೆ ನೀಡುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ ಪಕ್ಷದ ಹಿರಿಯ ಶಾಸಕರಾದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಎಂದೂ ಕೂಡ ಅಧಿಕಾರಕ್ಕಾಗಿ ಆಸೆಪಟ್ಟವರಲ್ಲ. ಅಂಥ ವ್ಯಕ್ತಿತ್ವವೂ ಅವರದಲ್ಲ. ಅವರೊಬ್ಬ ಮಾದರಿ ರಾಜಕಾರಣಿ. ಅವರು ರಾಜೀನಾಮೆ ನೀಡುತ್ತಾರೆ ಎಂಬುದು ಪ್ರತಿಪಕ್ಷಗಳು ಹಬ್ಬಿಸಿರುವ ವದಂತಿ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಇಂದಿಲ್ಲಿ ಹೇಳಿದರು.

      ಶಾಸಕರಾದ ರಾಮಲಿಂಗಾರೆಡ್ಡಿ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಪಕ್ಷದ ಬಲವರ್ಧನೆಗೆ, ಸಂಘಟನೆಗೆ ಶ್ರಮಿಸುತ್ತಿದ್ದಾರೆ. ಅವರು ಎಂದೂ ಸಹ ಪಕ್ಷಕ್ಕೆ ಹಾನಿಯುಂಟು ಮಾಡುವ ಆಲೋಚನೆ ಮಾಡುವುದಿಲ್ಲ. ಅವರು ರಾಜೀನಾಮೆ ನೀಡುವ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

      ನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು,  ಪಕ್ಷದ ಆಂತರಿಕ ವಿಚಾರದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಆ ಬಗ್ಗೆ ರಾಮಲಿಂಗಾರೆಡ್ಡಿ ಅವರು ಪಕ್ಷದ ರಾಷ್ಟ್ರ ಮತ್ತು ರಾಜ್ಯ ನಾಯಕರೊಂದಿಗೆ ಚರ್ಚೆ ಮಾಡುತ್ತಾರೆ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಬಗ್ಗೆ ಅವರು ಆಲೋಚನೆ ಮಾಡುವುದಿಲ್ಲ. ಆ ಬಗ್ಗೆ ನನಗೆ ಆತ್ಮವಿಶ್ವಾಸ ಇದೆ ಎಂದರು.

      ಪ್ರತಿಪಕ್ಷ ಬಿಜೆಪಿಯವರು ಸರ್ಕಾರವನ್ನು ಪತನಗೊಳಿಸಲು ಈಗಲೂ ಸಹ ತೆರೆಮರೆಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಅವರ ಪ್ರಯತ್ನ ಫಲಿಸದು. ಬದಲಾಗಿ ಸಮ್ಮಿಶ್ರ ಸರ್ಕಾರ 5 ವರ್ಷವನ್ನು ಸುಸೂತ್ರವಾಗಿ ಪೂರೈಸಲಿದೆ ಎಂದರು.

       ಶಾಸಕ ಆನಂದ್‍ಸಿಂಗ್ ಅವರು ಸಹ ನನ್ನ ಮಿತ್ರರು. ಅವರೊಂದಿಗೆ ನಮ್ಮ ನಾಯಕರು ಮಾತನಾಡಲಿದ್ದಾರೆ ಎಂದ ಅವರು, ನಿಮಯ ಬದ್ದವಾಗಿ ಯಾರೂ ಸಹ ರಾಜೀನಾಮೆ ಕೊಟ್ಟಿಲ್ಲ. ರಮೇಶ್ ಜಾರಕಿಹೊಳಿ ಕಾಂಗ್ರೆಸ್‍ನಲ್ಲೇ ಇದ್ದಾರೆ. ಯಾರೂ ಸಹ ಏಕಾಂಗಿಯಲ್ಲ. ನಾವು ಯಾವುದೇ ಊಹಾಪೋಹ, ವದಂತಿಗಳಿಗೆ ಕಿವಿಗೊಡುವುದಿಲ್ಲ ಎಂದರು.

      ನಮ್ಮ ಗುರಿ ಏನಿದ್ದರೂ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವುದಾಗಿದೆ. ಈಗ ಬಿಡುಗಡೆಯಾಗಿರುವ ಅನುದಾನವನ್ನು ಅನುಷ್ಠಾನಗೊಳಿಸುವ ಕೆಲಸ ನಮ್ಮದಾಗಿದೆ ಎಂದರು.

      8 ಲಕ್ಷ ಜನಸಂಖ್ಯೆ ಹೊಂದಿರುವ ಸ್ಥಳೀಯ ಸಂಸ್ಥೆಗಳಿಗೆ 125 ಕೋಟಿ ರೂ. ಹಾಗೂ 8 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹೊಂದಿರುವ ಸ್ಥಳೀಯ ಸಂಸ್ಥೆಗಳಿಗೆ 150 ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಚುರುಕಾಗಿ ನಡೆಯುತ್ತಿವೆ. ಇದನ್ನು ಸಹಿಸದೆ ಪ್ರತಿಪಕ್ಷ ರಾಜ್ಯದ ಜನತೆಯಲ್ಲಿ ಗೊಂದಲ ಸೃಷ್ಠಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.

       ರಾಹುಲ್‍ಗಾಂಧಿ ಅವರು ನನಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕಿಂತಲೂ ಒಬ್ಬ ಕಾರ್ಯಕರ್ತನಾಗಿ ಭಾರತ ದೇಶವನ್ನು ಭಾರತವನ್ನಾಗಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಡಾ. ಬಿ.ಆರ್.ಅಂಬೇಡ್ಕರ್ ಅವರು ರಚಿಸಿ ಸಂವಿಧಾನದ ಮೌಲ್ಯಗಳನ್ನು ಜೀವಂತವಾಗಿಡುವ ಮೂಲಕ ಅದನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷ ಸ್ಥಾನದ ಕುರಿತು ವರಿಷ್ಠ ನಾಯಕರೇ ತೀರ್ಮಾನ ಮಾಡಲಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

(Visited 10 times, 1 visits today)

Related posts

Leave a Comment