ಯೌವನಕ್ಕೆ “ವಿವೇಕಾನಂದದೀಕ್ಷೆ’’ ಕೊಡಿ

   ಪಿತೃವಾಕ್ಯ ಪರಿಪಾಲನೆಗಾಗಿ ರಾಮ ಕಾಡಿಗೆ ಹೋದ. ಪ್ರಪಂಚದಾದ್ಯಂತ ರಾಮನಿಗೆ ಬಹುದೊಡ್ಡ ಹೆಸರು ಬಂತು. ಮಾತೃವಾಕ್ಯ ಪರಿಪಾಲನೆಗಾಗಿ ಗಣಪತಿ ತಲೆದಂಡವಾಗಿಸಿಕೊಂಡ. ವಿಶ್ವದಾದ್ಯಂತ ಗಣಪತಿಗೆ ದೊಡ್ಡ ಹೆಸರು ಬಂತು. ಆತ ಪ್ರಥಮಪೂಜಿತನಾದ, ಪ್ರಥಮವಂದಿತನಾದ.

     ಮಾದಕ ಪದ-ಪದಾರ್ಥಗಳ ಗುಲಾಮರಾಗಿ, ಮತ್ತವುಗಳ ದಾಸಾನುದಾಸರಾಗಿ ಹೋಗಿರುವ ಮತ್ತು ಮಾದಕದ್ರವ್ಯಗಳ ಸೇವನೆಯನ್ನು ದಿನನಿತ್ಯದ ಜೀವನದಲ್ಲಿ ಕಡ್ಡಾಯವಾಗಿಸಿಕೊಂಡಿರುವ ಯುವಕರನ್ನು ಕುರಿತು ನಾವು ಒಂದು ಪ್ರಶ್ನೆಯನ್ನು ಕೇಳಲಿಚ್ಛಿಸುತ್ತೇವೆ.

     “ಅದಾರ ವಾಕ್ಯಪರಿಪಾಲನೆಗಾಗಿ ನೀವು ನಮ್ಮ ಬದುಕನ್ನು ಕಾಡಾಗಿಸಿಕೊಳ್ಳುತ್ತಿದ್ದೀರಿ? ಅದಾವ ಪುರುಷಾರ್ಥಕ್ಕಾಗಿ ನೀವು ನಿಮ್ಮ ತಲೆಯನ್ನು ತಲೆದಂಡವಾಗಿಸಿಕೊಳ್ಳುತ್ತಿದ್ದೀರಿ? ಅದಾವ ಕಾರಣಕ್ಕಾಗಿ ನೀವು ನಿಮ್ಮ ಬದುಕಿಗೆ ನಶಾದೀಕ್ಷೆಯನ್ನು ಕೊಟ್ಟುಕೊಂಡಿದ್ದೀರಿ?
ನೀವು ಡ್ರಗ್ಸ್ ದಾಸರಾಗಿ, ನಶಾದಾಸರಾಗಿ ದೈನಂದಿನ ಬದುಕಿನೊಂದಿಗೆ ಸಹಜವಾಗಿರದೆ ಬೇರೊಂದು ಲೋಕದಲ್ಲಿ ಕಳೆದುಹೋಗಿರುವುದನ್ನು ಕಂಡು ನಿಮ್ಮ ತಂದೆ, ತಾಯಿಗಳ ಜೀವನ ಅದೆಷ್ಟೊಂದು “ವಿಲವಿಲ’’ ಎನ್ನುತ್ತದೆ ಎಂಬ ಅರಿವು ನಿಮಗಿದೆಯಾ?’’
ನೀವು ವ್ಯಸನಾಧೀನರಾದಾಗ, ನೀವು ಮಾದಕದ್ರವ್ಯಗಳ ದಾಸಾನುದಾಸರಾದಾಗ ನಿಮ್ಮ ತಂದೆ, ತಾಯಿಗಳು ಆ ದಶರಥ ಮಹಾರಾಜ ಶ್ರೀರಾಮಚಂದ್ರ ಕಾಡಿಗೆ ಹೋಗುವಾಗ ಅದೆಷ್ಟು ಸಂಕಟಪಟ್ಟನೋ ಅದಕ್ಕಿಂತಲೂ ಹೆಚ್ಚು ಸಂಕಟವನ್ನು ಅನುಭವಿಸುತ್ತಾರೆ. ಅವರು ನಿಮ್ಮನ್ನು ನೋಡಿ ಅದೆಷ್ಟು ತ್ರಸ್ತ, ಸಂತ್ರಸ್ತರಾಗುತ್ತಾರೆಂಬುದು ನಿಮಗೆ ಗೊತ್ತಾ?

UN report: Smoking and drinking linked to recreational drug use by the youth  — MercoPress
    ಸುಖಲೋಲುಪನಾದ ಯಯಾತಿ ಮಹಾರಾಜ ತನ್ನ ಮಗ ಪುರುವಿಗೆ ಯೌವನವನ್ನು ದಾನವಾಗಿ ಕೇಳುತ್ತಾನೆ. ಪುರು ಒಳ್ಳೆಯ ಮಗ. ಆತ ತನ್ನ ತಂದೆಗೆ ತನ್ನ ಯೌವನವನ್ನೇ ಧಾರೆ ಎರೆಯುತ್ತಾನೆ. ತಂದೆಗೆ ಯೌವನವನ್ನು ಧಾರೆ ಎರೆದ ಪುರು ಇತಿಹಾಸವಾಗುತ್ತಾನೆ.
ನೀವು ಅದಾರಿಗೆ ನಿಮ್ಮ ಯೌವನವನ್ನು ಧಾರೆ ಎರೆಯುತ್ತಿದ್ದೀರಿ? ಅದೇಕೆ ನಿಮ್ಮ ಯೌವನವನ್ನು ಮತ್ತು ಯೌವನದ ಸುಖವನ್ನು ಹಾಳುಮಾಡಿಕೊಳ್ಳುತ್ತಿದ್ದೀರಿ?
ಯೌವನವೆಂಬ “ಅಮೂಲ್ಯ ರತ್ನ’’ ನಿಮ್ಮ ಕೈಯಲ್ಲಿದೆ. ಅದನ್ನೇಕೆ ಸುಖಾಸುಮ್ಮನೇ ಕೊಚ್ಚೆ, ಕೊಳಚೆಗೆ ಎಸೆಯುತ್ತಿದ್ದೀರಿ?
ಯೌವನವೆಂಬ ಅತ್ಯಮೂಲ್ಯ ರತ್ನವನ್ನು ಕಿರೀಟದಲ್ಲಿರಿಸಬೇಕು. ಅದಕ್ಕೆ “ಶಿರೋಧಾರ್ಯ’’ ಗೌರವವನ್ನು ಕೊಟ್ಟುಕೊಂಡಿರಬೇಕು. ನಿಮ್ಮ ಯೌವನವನ್ನು ನೀವು ಸುಂದರವಾದ ತೋಟವನ್ನಾಗಿಸಬೇಕು. ಅದನ್ನು ನಿಮ್ಮಗಳ ಯೌವನದ ಸುಖವನ್ನು ಕತ್ತರಿಸಿಹಾಕುವ ಮತ್ತು ನಿಮ್ಮ ತಂದೆ, ತಾಯಿಗಳ ನೆಮ್ಮದಿಯನ್ನು ತಿಂದುಹಾಕುವ ಕೀಟವನ್ನಾಗಿಸಬಾರದು.

      ನಿಮ್ಮ ಯೌವನ ಸುಂದರವಾದ “ಪಾರ್ಕ್’’ ಆಗಬೇಕು. ಅದನ್ನು ದುಶ್ಚಟ, ದುವ್ರ್ಯಸನ, ದುರಾಚಾರ, ಮಾದಕದ್ರವ್ಯಗಳ “ಪಾರ್ಕಿಂಗ್ ಲಾಟ್’’ ಆಗಿಸಬಾರದು. ನಿಮ್ಮ ಯೌವನವದು ಮಾದಕದ್ರವ್ಯಗಳ “ಅಡ್ಡಾ’’ ಆಗಬಾರದು.

     ನೀವುಗಳು ನಿಮ್ಮ ಯೌವನಕ್ಕೆ ಯತಿದೀಕ್ಷೆಯನ್ನು ಕೊಟ್ಟುಕೊಂಡಿರಬೇಕು. ಯೌವನಕ್ಕೆ ಯಯಾತಿದೀಕ್ಷೆಯನ್ನು ಕೊಟ್ಟುಕೊಂಡಿರುವುದು ಬೇಡ.
ನಿಮ್ಮ ಯೌವನ, ಚಿರಾಯುವಾಗಬೇಕು; ಅದು ಚಿರಂಜೀವಿಯಾಗಬೇಕು. ಯೌವನಕ್ಕೆ ಚಿರಂಜೀವಿದೀಕ್ಷೆಯನ್ನು ಕೊಟ್ಟುಕೊಂಡಿರಬೇಕು. ನಿಮ್ಮ ಯೌವನಕ್ಕೆ ವಿವೇಕಾನಂದದೀಕ್ಷೆಯನ್ನು ಕೊಟ್ಟುಕೊಂಡಿರಬೇಕು.

     ಸ್ವಾಮಿ ವಿವೇಕಾನಂದರು ತಮ್ಮ ಯೌವನಕ್ಕೆ ಚಿರಂಜೀವಿದೀಕ್ಷೆಯನ್ನು ಕೊಟ್ಟುಕೊಂಡಿದ್ದರು. ಇದು ಕಾರಣವಾಗಿಯೇ, “ಯೌವನ’’ ಎಂಬ ಪದ ಕಿವಿಗೆ ಬೀಳುತ್ತಲೇ ವಿವೇಕಾನಂದರ ಮುಖ ನಮ್ಮ ಮುಂದೆ ಪ್ರತ್ಯಕ್ಷವಾಗುತ್ತದೆ. ಶಂಕರಾಚಾರ್ಯರು ತಮ್ಮ ಯೌವನಕ್ಕೆ ಚಿರಂಜೀವಿದೀಕ್ಷೆಯನ್ನು ಕೊಟ್ಟುಕೊಂಡಿದ್ದರು. ಆದ್ದರಿಂದಲೇ, “ಯೌವನ’’ ಎಂಬ ಪದವನ್ನು ಕೇಳುತ್ತಲೇ ನಮ್ಮಗಳಿಗೆ ಶಂಕರಾಚಾರ್ಯರು ನೆನಪಾ ಗುತ್ತಾರೆ.

     ಅಕ್ಕ, ಅಲ್ಲಮ, ಬಸವಣ್ಣ, ಚೆನ್ನಬಸವಣ್ಣ…., ಇತ್ಯಾದಿ ಇವರೆಲ್ಲ ಮಹಾನುಭಾವರು ತಮ್ಮ ಯೌವನಕ್ಕೆ ಚಿರಂಜೀವಿದೀಕ್ಷೆಯನ್ನು ಕೊಟ್ಟುಕೊಂಡಿದ್ದ ಕಾರಣ ದಿಂದಾಗಿಯೇ ಈಗಲೂ ಸಹ ಅಮರರಾಗಿ ಉಳಿದಿದ್ದಾರೆ.
ಯುವಕರೇ,
ನಿಮಗೆ ನೀವೇ ಗುರುವಾಗಬೇಕು. ನಿಮ್ಮ ಅರಿವೇ ನಿಮ್ಮ ಗುರುವಾಗಬೇಕು. ನಿಮ್ಮೊಳಗಿನ ಅರಿವೇ ನಿಮ್ಮನ್ನು ತಿದ್ದಬೇಕು, ತೀಡಬೇಕು. ಅದುವೇ ನಿಮಗೆ ತಿಳುವಳಿಕೆ ಹೇಳಬೇಕು.

       ನೀವು ಅಶಿಕ್ಷಿತರಲ್ಲ. ನೀವು ಓದಿಲ್ಲವೆಂದಲ್ಲ. ನೀವು ಚೆನ್ನಾಗಿ ಓದಿದ್ದೀರಿ. ಎಸ್. ಎಸ್. ಎಲ್. ಸಿ.’ ಪಿ.ಯು.ಗಳಲ್ಲಿ ಒಳ್ಳೆಯ “ಮಾಕ್ರ್ಸ್’’ ತೆಗೆದಿದ್ದೀರಿ. ನಿಮ್ಮ ಅಪ್ಪ, ಅಮ್ಮ “ನಮ್ಮ ಮಗ ಎಸ್. ಎಸ್. ಎಲ್. ಸಿ.- ಯಲ್ಲಿ 90% ಮಾಕ್ರ್ಸ್ ತೆಗೆದಿದ್ದಾನೆ’’, “ನಮ್ಮ ಮಗಳು ಪಿ. ಯು.ನಲ್ಲಿ 95% “ಮಾಕ್ರ್ಸ್’’ ತೆಗೆದಿದ್ದಾಳೆ’’ ಎಂದು ಬಂಧು-ಬಾಂಧವರ ಮುಂದೆ ಎದೆಯುಬ್ಬಿಸಿ ಹೇಳಿಕೊಂಡು ಬಂದಿದ್ದಾರೆ. ಅದನ್ನು ಜ್ಞಾಪಿಸಿಕೊಳ್ಳಿ.
ಸ್ಕೂಲು, ಹೈಸ್ಕೂಲ್‍ನಲ್ಲಿ ಚೆನ್ನಾಗಿದ್ದ ನೀವು ಕಾಲೇಜ್‍ಗೆ ಬರುತ್ತಲೇ ಅದೇಕೆ ಕೆಟ್ಟುಹೋಗುತ್ತೀರಿ?
ಸ್ಕೂಲು, ಹೈಸ್ಕೂಲ್‍ವರೆಗೆ “ಅಪ್ಪನ ಮಗ’’, “ಅಮ್ಮನ ಮಗ’’ ಆಗಿದ್ದ ನೀವು ಕಾಲೇಜ್‍ಗೆ ಬರುತ್ತಲೇ ಅದೇಕೆ “ಬ್ಯಾಡ್ ಬಾಯ್’’, “ಸ್ಯಾಡ್ ಗರ್ಲ್’’ ಆಗುತ್ತೀರಿ?
ನಿಮಗಾರೂ ಬುದ್ಧಿ ಹೇಳುವುದಿಲ್ಲ. ಎಲ್ಲರ ಬುದ್ಧಿಗಿಂತಲೂ ನಿಮ್ಮ ಬುದ್ಧಿ ಚುರುಕಾಗಿದೆ.
ನಿಮಗೆ ನೀವೇ ಬುದ್ಧಿ ಹೇಳಿಕೊಳ್ಳಬೇಕು.
ನೀವು ದಡ್ಡರಾಗಿದ್ದರೆ, ಅವಿದ್ಯಾವಂತರಾಗಿದ್ದರೆ ಬೇರೆಯವರಿಂದ ಬುದ್ಧಿ ಹೇಳಿಸಬಹುದಿತ್ತು. ಆದರೆ ನೀವು ನಿಮ್ಮ ಅಪ್ಪ, ಅಮ್ಮನಿಗಿಂತಲೂ ಚೆನ್ನಾಗಿ ಓದಿದ್ದೀರಿ. ನಿಮ್ಮ ಕಂಪ್ಯೂಟರ್ ಕೈಗೆ ಕೊಟ್ಟರೆ ಅರ್ಧಗಂಟೆಯಲ್ಲಿ ಜಗತ್ತನ್ನು ಸುತ್ತಿಸಿಕೊಂಡು ಬರುತ್ತೀರಿ. ನಿಮ್ಮಲ್ಲಿ ಅದ್ಭುತ ಶಕ್ತಿ ಇದೆ. ಆ ದೇವರೊಬ್ಬನನ್ನು ಹೊರತುಪಡಿಸಿದರೆ “ಕರ್ತುಂ, ಅಕರ್ತುಂ, ಅನ್ಯಥಾ ಕರ್ತುಂ’’ ಶಕ್ತಿ ಇರುವುದು ನಿಮ್ಮಲ್ಲಿ ಮಾತ್ರ!! ನಿಮ್ಮಲ್ಲಿನ ಯೌವನದಲ್ಲಿ ಏನೆಲ್ಲ ಶಕ್ತಿ ಇದೆ, ಏನೆಲ್ಲ ಸಾಮಥ್ರ್ಯವಿದೆ.

ನಮ್ಮ ದಾಸವರೇಣ್ಯರು,
“ಮಾನವಜನ್ಮ ದೊಡ್ಡದು, ಇದನು ಹಾನಿಮಾಡಬೇಡಿ ಹುಚ್ಚಪ್ಪಗಳಿರಾ’’ ಎಂದು ಹೇಳಿದ ಹಾಗೆ, ನಾವೂ ಸಹ ನಿಮಗೆ,
“ಯೌವನವೆಂಬುವುದಿದು ತುಂಬ ದೊಡ್ಡದು, ಇದನು ಹಾನಿಮಾಡಬೇಡಿ ಹುಚ್ಚಪ್ಪಗಳಿರಾ’’ ಎಂದು ಹೇಳಬಯಸುತ್ತೇವೆ.
ಯುವಕರೇ,
ನಿಮಗೆಲ್ಲ ತುಂಬ ಕಳಕಳಿಯಿಂದ ಹೇಳುತ್ತೇವೆ.

      ನೀವು ಕನಕದಾಸ, ಪುರಂದರದಾಸ, ತುಳಸೀದಾಸ, ಸೂರದಾಸರ ಹಾಗೆ ಆಗುವುದಾದರೆ ಆಗೋಣವಾಗಲಿ. ನಾವು ತುಂಬ ಸಂತೋಷಪಡುತ್ತೇವೆ. ನಾವಷ್ಟೇ ಅಲ್ಲ, ನಿಮ್ಮ ತಂದೆ, ತಾಯಿ, ನಿಮ್ಮ ಬಂಧು-ಮಿತ್ರರು,
ನಿಮ್ಮ ಕುಟುಂಬ, ನಿಮ್ಮ ಸುತ್ತಮುತ್ತಲಿರುವ ಜನಗಳು ಕೂಡ ಸಂತೋಷಪಡುತ್ತಾರೆ.

      ಅದೊಂದು ವೇಳೆ, ನೀವು ಕನಕದಾಸ, ಪುರಂದರದಾಸ, ತುಳಸೀದಾಸರ, ಸೂರದಾಸ ಆಗದಿದ್ದರೂ ಪರವಾ ಇಲ್ಲ. ನೀವು ಡ್ರಗ್‍ದಾಸರಂತೂ ಆಗಲೇಬೇಡಿ. ನೀವು ಡ್ರಗ್ಸ್‍ದಾಸರಾಗಬೇಡಿ. ನೀವುಗಳು ಬೇಸೂರ್‍ದಾಸರಾಗಬೇಡಿ.
ನಿಮ್ಮ ಯೌವನವೇ ನಿಮ್ಮ ಆಸ್ತಿಯಾಗಲಿ. ನಿಮ್ಮ ಯೌವನವನ್ನು ನೀವು ಆಸ್ತಿಯಾಗಿಸಬೇಕು.
ಅದು ಬರೀ ಮೋಜು, ಮಜಾ, ಮಸ್ತಿಯಾಗುವುದು ಬೇಡ.
ನಿಮ್ಮ ಯೌವನವನ್ನು ಆಸ್ತಿಯಾಗಿಸಿಕೊಳ್ಳಿ. ನಿಮ್ಮ ಯೌವನವನ್ನು ನಿಮ್ಮ ಅಪ್ಪ, ಅಮ್ಮ, ಅಜ್ಜ, ಮುತ್ತಜ್ಜ ಮಾಡಿದ ಆಸ್ತಿಯನ್ನು ಕಳೆಯುವುದಕ್ಕಾಗಿ ಮತ್ತು ಕಳೆದುಹಾಕುವುದಕ್ಕಾಗಿ ಬಳಸಬೇಡಿ.
ನಿಮ್ಮ ಯೌವನವದು ಅಗ್ರಹಾರದತ್ತ ಮುಖ ಮಾಡಿಕೊಂಡಿರಬೇಕು.
ಅದು ಪರಪ್ಪನ ಅಗ್ರಹಾರದತ್ತ ಮುಖಮಾಡಿಕೊಂಡಿರುವುದು ಬೇಡ.
“ಒಳ್ಳೆಯದು ಕೊನೆತನಕ; ಕೆಟ್ಟದ್ದು ಜೈಲು ಕಂಬಿಯ ತನಕ’’ ಎಂಬುವುದು ನಿಮಗೆ ಗೊತ್ತಿರಲಿ.
ನೀವು ಯುವಕರು ವಿವೇಚನೆಯೊಂದಿಗೆ “ಸಪ್ತಪದಿ’’ ತುಳಿಯುವುದನ್ನು ಅಭ್ಯಾಸಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ವಿವೇಚನೆಗೆ ವಿಚ್ಛೇದನಕೊಟ್ಟುಕೊಂಡಿರುವುದಕ್ಕೆ ನೀವುಗಳು ಯೋಚಿಸಬಾರದು.

ಕೊನೆಯದಾಗಿ ಒಂದು ಮಾತು,
ಯುವಕರೇ, ನೀವು ನಿಮ್ಮ ಕಣ್ಣುಗಳಿಗೆ ಬರೀ ಕನ್ನಡಕವನ್ನು ಹಾಕಿಕೊಂಡರೆ ಸಾಲದು.
ನೀವು ನಿಮ್ಮ ಕಣ್ಣೊಳಗೆ ಕನಸುಗಳನ್ನು ಹಾಕಿಕೊಳ್ಳಬೇಕು. ನೀವು ಕನ್ನಡಕಗಳಿಂದ ಜಗತ್ತನ್ನು ನೋಡಬಾರದು.
ನೀವು ನಿಮ್ಮ ಕನಸುಗಳ ಮೂಲಕ ಜಗತ್ತನ್ನು ನೋಡಬೇಕು. ನೀವು ಕಂಡ ಕನಸುಗಳನ್ನು ನನಸಾಗಿಸಿಕೊಳ್ಳಲು ನಿಮ್ಮಲ್ಲಿನ ಯೌವನವನ್ನು “ಅಹರ್ನಿಶಿ’’ ದುಡಿಸಬೇಕು; ಮತ್ತದನ್ನು “ಅಹರ್ನಿಶಿ’’ ದಣಿಸಬೇಕು.

ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು

(Visited 11 times, 1 visits today)

Related posts