ಜೂನ್ 1 ರಿಂದ ಮಾವು ಮತ್ತು ಹಲಸು ಪ್ರದರ್ಶನ ಮತ್ತು ಮಾರಾಟ ಮೇಳ

 ತುಮಕೂರು:

      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಸಂಯುಕ್ತಾಶ್ರಯದಲ್ಲಿ ಜೂನ್ 1 ರಿಂದ 5ರವರೆಗೆ 5 ದಿನಗಳ ಕಾಲ “ಮಾವು ಮತ್ತು ಹಲಸು ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಸಸ್ಯಸಂತೆ ಮೇಳ”ವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದರು.

      ಜಿಲ್ಲಾ ಪಂಚಾಯತಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೇಳವನ್ನು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಮಾವು ಪ್ರಮುಖವಾದ ಬೆಳೆಯಾಗಿದ್ದು, 16,330 ಹೆಕ್ಟೇರ್ ಪ್ರದೇಶದ ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತಿದೆ. ಬಾದಾಮಿ, ರಸಪುರಿ, ಸೇಂದೂರು, ತೋತಾಪುರಿ ಮತ್ತಿತರ ಮಾವಿನ ತಳಿಗಳನ್ನು ಹೆಚ್ಚಾಗಿ ಬೆಳೆಯುತ್ತಿರುವುದರಿಂದ 1.50 ರಿಂದ 1.90ಲಕ್ಷ ಮೆಟ್ರಿಕ್ ಟನ್‍ಗಳಷ್ಟು ವಾರ್ಷಿಕ ಉತ್ಪಾದನೆಯಾಗುತ್ತಿದೆ ಎಂದು ಅಂದಾಜು ಮಾಡಲಾಗಿದೆ ಎಂದು ತಿಳಿಸಿದರು.

      ಜಿಲ್ಲೆಯಲ್ಲಿ ಸತತ ಮೂರು-ನಾಲ್ಕು ವರ್ಷಗಳಿಂದ ಬರಪರಿಸ್ಥತಿಯಿರುವುದರಿಂದ ಮತ್ತು ಕಳೆದ ಸಾಲಿನ ಹಿಂಗಾರಿನ ವೈಫಲ್ಯತೆಯಿಂದಾಗಿ ಪ್ರಸಕ್ತ ಸಾಲಿನಲ್ಲಿ ಮಾವು ಉತ್ಪಾದನೆ ಕಡಿಮೆಯಾಗಿದೆ. ಅಲ್ಲದೆ ಮಧ್ಯವರ್ತಿಗಳ ಹಾವಳಿಯಿಂದ ರೈತರಿಗೆ ಉತ್ತಮ ಬೆಲೆ ಸಿಗದೆ ಇರುವುದರಿಂದ, ಮಾವು ಬೆಳೆಯುತ್ತಿರುವ ರೈತರಿಗೆ ಉತ್ತಮ ಬೆಲೆ ದೊರಕಿಸಿಕೊಡಲು ಈ ಮೇಳವನ್ನು ನಡೆಸಲಾಗುತ್ತಿದೆ. ಮೇಳದಲ್ಲಿ ವಿವಿಧ ತಳಿಗಳ ಮಾವು ಹಾಗೂ ಹಲಸು ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ರೈತರಿಂದ ನೇರವಾಗಿ ಖರೀದಿದಾರರಿಗೆ/ಗ್ರಾಹಕರಿಗೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಕಾರ್ಬೈಡ್ ಮುಕ್ತ ಹಣ್ಣುಗಳ ಮಾರಾಟ :-

      ಮೇಳದಲ್ಲಿ ರೈತರು ಹಣ್ಣುಗಳನ್ನು ಮಾರಾಟ ಮಾಡಲು ಉಚಿತವಾಗಿ 22 ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ರೈತರಿಂದ ಗ್ರಾಹಕರಿಗೆ ಕಾರ್ಬೈಡ್ ಮುಕ್ತ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಹಾಪ್‍ಕಾಮ್ಸ್ ನಿಗಧಿಪಡಿಸಿದಂತೆ ಸುಲಭ ದರದಲ್ಲಿ ನೇರವಾಗಿ ಮಾರಾಟ ಮಾಡಲಾಗುವುದು. ವ್ಯಾಪಾರಿಗಳು ಬೇಗ ಹಣ್ಣು ಮಾಡುವ ದೃಷ್ಟಿಯಿಂದ ಬಲಿಯದೇ ಇರುವ ಕಾಯಿಗಳನ್ನು ಕಾರ್ಬೈಡ್ ರಾಸಾಯನಿಕ ವಸ್ತುವನ್ನು ಬಳಸಿ ಹಣ್ಣನ್ನು ಮಾಗಿಸುತ್ತಿದ್ದಾರೆ. ಕಾರ್ಬೈಡ್‍ಯುಕ್ತ ಹಣ್ಣುಗಳು ಕ್ಯಾನ್ಸರ್‍ಕಾರಕವಾಗಿರುತ್ತವೆ. ಈ ನಿಟ್ಟಿನಲ್ಲಿ ಮೇಳದಲ್ಲಿ ಮಾರಾಟ ಮಾಡುವ ಹಣ್ಣುಗಳನ್ನು ಮಾಗಿಸಲು ರಾಸಾಯನಿಕವನ್ನು ಬಳಸಲಾಗಿದೆಯೇ ಎಂಬುದನ್ನು ಪರೀಕ್ಷಿಸಲು ಇಲಾಖೆಯಿಂದ ತಂಡವನ್ನು ನಿಯೋಜಿಸಲಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ಆಗಮಿಸಿ ನೈಸರ್ಗಿಕವಾಗಿ ಹಣ್ಣು ಮಾಡಿದ ಮಾವು ಮತ್ತು ಹಲಸಿನ ಹಣ್ಣುಗಳನ್ನು ಖರೀದಿಸುವ ಮೂಲಕ ರೈತರನ್ನು ಉತ್ತೇಜಿಸಬೇಕೆಂದು ಮನವಿ ಮಾಡಿದರು.

      ತೋಟಗಾರಿಕೆ ಉಪನಿರ್ದೇಶಕ ಬಿ.ರಘು ಮಾತನಾಡಿ, ಮೇಳವನ್ನು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ. ಪರಮೇಶ್ವರ್ ಅವರು ಜೂನ್ 1ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆ ಮಾಡಲಿದ್ದಾರೆ. ಕಾರ್ಮಿಕ ಸಚಿವ ವೆಂಕಟರಮಣಪ್ಪ, ಸಣ್ಣ ಕೈಗಾರಿಕೆ ಸಚಿವ ಎಸ್.ಆರ್. ಶ್ರೀನಿವಾಸ್ ತಾಂತ್ರಿಕ ಕಿರುಹೊತ್ತಿಗೆ ಬಿಡುಗಡೆ ಮಾಡಲಿದ್ದಾರೆ. ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಮೇಳದ ಅಧ್ಯಕ್ಷತೆವಹಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಹಾಗೂ ಸಂಸದ ಜಿ.ಎಸ್. ಬಸವರಾಜು ಮಳಿಗೆಗಳ ಉದ್ಘಾಟಿಸಲಿದ್ದಾರೆ. ಶಾಸಕ ಡಿ.ಸಿ. ಗೌರಿಶಂಕರ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜಿ.ಸತ್ಯನಾರಾಯಣ, ಮಹಾನಗರ ಪಾಲಿಕೆ ಮಹಾಪೌರರಾದ ಲಲಿತಾ ರವೀಶ್, ಜಿಲ್ಲೆಯ ವಿವಿಧ ಸಂಸದರು, ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಸಸ್ಯಸಂತೆ :-

      ಈ ಮೇಳದಲ್ಲಿ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟವನ್ನಷ್ಟೇ ಅಲ್ಲದೆ ಸಸ್ಯಸಂತೆ ಎಂಬ ವಿನೂತನ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದ್ದು, ಸಸ್ಯಸಂತೆಯಲ್ಲಿ ರೈತಾಪಿ ಸಮುದಾಯ ಹಾಗೂ ನಗರವಾಸಿಗಳಿಗೆ ಅವಶ್ಯಕವಿರುವ, ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಉತ್ಪಾದಿಸಲಾಗುತ್ತಿರುವ ಉತ್ಕೃಷ್ಟ ಗುಣಮಟ್ಟದ ವಿವಿಧ ತೋಟಗಾರಿಕೆ ಬೆಳೆಗಳ ಕಸಿ ಮತ್ತು ಸಸಿಗಳ ಪ್ರದರ್ಶಿಕೆ ಮತ್ತು ಮಾರಾಟ ಮಾಡಲಾಗುವುದು. ಅಲ್ಲದೆ ಇಲಾಖೆಯ ಜೈವಿಕ ಕೇಂದ್ರಗಳಲ್ಲಿ ಉತ್ಪಾದಿಸಲಾಗಿರುವ ಜೈವಿಕ ಗೊಬ್ಬರಗಳಾದ ವರ್ಮಿಕಾಂಪೋಸ್ಟ್, ವರ್ವಿವಾಶ್, ವೆಜಿಟೇಬಲ್ ಸ್ಪೆಷಲ್, ಬನಾನ ಸ್ಪೆಷಲ್ ಮತ್ತು ಇತರೆ ಉತ್ಪನ್ನಗಳು, ಔಷಧೀಯ ಹಾಗೂ ಸುಗಂಧ ಗಿಡಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ ಹಾಗೂ ದಾಳಿಂಬೆ, ಅಣಬೆಯನ್ನು ಬೆಳೆಯುವ ರೈತರನ್ನು ಪ್ರೋತ್ಸಾಹಿಸಲು ಪ್ರತ್ಯೇಕವಾಗಿ ಮಳಿಗೆಯನ್ನು ತೆರೆದು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

      ನಗರದ ತಾರಸಿ ತೋಟ ಹಾಗೂ ಕೈತೋಟ ಮಾಡುವ ಹವ್ಯಾಸಿಗರಿಗೆ ಪ್ರೋತ್ಸಾಹ ನೀಡಲು ಕುಂಡಗಳಲ್ಲಿ ಬೆಳೆ ಬೆಳೆಯಲು ಅವಶ್ಯಕವಿರುವ ಸಲಕರಣೆಗಳನ್ನು ಮತ್ತು ಸಾವಯುವ ರೀತಿಯಲ್ಲಿ ಪೋಷಕಾಂಶಗಳನ್ನು ನೀಡುವ ಗೊಬ್ಬರಗಳನ್ನು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರಲ್ಲದೆ, ತೋಟಗಾರಿಕಾ ಇಲಾಖೆಯಿಂದ ಹೆಬ್ಬೂರು ತೋಟಗಾರಿಕೆ ಬೆಳೆಗಳ ರೈತ ಉತ್ಪಾದಕ ಸಂಸ್ಥೆಗೆ ನೀಡಿರುವ ಹಣ್ಣು ಮತ್ತು ತರಕಾರಿ ಮಾರಾಟ ವಾಹನ(Mobile Vending Van)ವನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುವುದು. ಮೇಳದ ನಂತರ ಈ ವಾಹನವನ್ನು ಪ್ರಾಯೋಗಿಕವಾಗಿ ನಗರದಲ್ಲಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಮಾವು ಬೆಳೆಯುವ ರೈತರಿಗೆ ಕಡಿಮೆ ವೆಚ್ಚದಲ್ಲಿ ಹುಲ್ಲಿನಿಂದ, ಇಥಲಿನ್ ಗ್ಯಾಸ್‍ನಿಂದ ಹಾಗೂ ರೈಪನಿಂಗ್ ಛೇಂಬರ್‍ನಲ್ಲಿ ಹಣ್ಣುಗಳನ್ನು ನೈಸರ್ಗಿಕವಾಗಿ ಮಾಗಿಸುವ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಆರೋಗ್ಯದ ಹಿತದೃಷ್ಟಿಯಿಂದ ವ್ಯಾಪಾರಿಗಳಿಗೂ ಸಹ ನೈಸರ್ಗಿಕವಾಗಿ ಹಣ್ಣನ್ನು ಮಾಗಿಸುವ ತರಬೇತಿಯನ್ನು ನೀಡಲಾಗುವುದು.

      ಜಿಲ್ಲೆಯ ರೈತರು, ತುಮಕೂರು ನಗರವಾಸಿಗಳು/ಗ್ರಾಹಕರು ಹಾಗೂ ಸಂಘಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಮೇಳದ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.

(Visited 15 times, 1 visits today)

Related posts