ಜೇಷ್ಠತೆ ವಿಸ್ತರಿಸುವ ಕಾಯ್ದೆ 2017 ಜಾರಿಗೆ ಒತ್ತಾಯ

  ತುಮಕೂರು:

      ಕರ್ನಾಟಕ ಸರ್ಕಾರ 2 ಸದನಗಳ ಒಪ್ಪಿಗೆ ಪಡೆದು ರೂಪಿಸಿರುವ ಮೀಸಲಾತಿ ಆಧಾರದಲ್ಲಿ ಬಡ್ತಿ ಪಡೆದ ಪರಿಶಿಷ್ಟ ಜಾತಿ ಮತ್ತು ಪಗಂಡಗಳ ಸರ್ಕಾರಿ ನೌಕರರಿಗೆ ತತ್ಪರಿಣಾಮ ಜೇಷ್ಠತೆ ವಿಸ್ತರಿಸುವ ಕಾಯ್ದೆ 2017 ಜಾರಿಗೆ ತರಬೇಕೆಂದು ಒತ್ತಾಯಿಸಿ ಇಂದು ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿಯಿಂದ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

      ದೇವರಾಜಅರಸು ಅವರ ಕಾಲದಲ್ಲಿ ಜಾರಿಗೆ ತಂದಿದ್ದ ಬಡ್ತಿ ಮೀಸಲಾತಿ ಕಾಯ್ದೆ ವಿರುದ್ಧ ಬಿ.ಕೆ.ಪವಿತ್ರ ಪ್ರಕರಣ ತೀರ್ಪಿನಿಂದ ಉಂಟಾದ ನಷ್ಟವನ್ನು ತಡೆಯುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಅಂದಿನ ಸರ್ಕಾರ ಸದರಿ ಕಾಯ್ದೆಯನ್ನು ಎಲ್ಲ ಇಲಾಖೆಗಳ ಮಾಹಿತಿ ಪಡೆದು ರೂಪಿಸಿತ್ತು. ಸದರಿ ಕಾಯ್ದೆ ಕರ್ನಾಟಕ ಸರ್ಕಾರದ ಮೇಲ್ಮನೆ ಹಾಗೂ ಕೆಳಮನೆಯಲ್ಲಿ ವಿಸ್ಕøತವಾಗಿ ಚರ್ಚೆಯಾಗಿ ಅನುಮೋದನೆಗೊಂಡು, ರಾಷ್ಟ್ರಪತಿಗಳ ಅಂಕಿತ ಪಡೆದು, ರಾಜ್ಯಪತ್ರದಲ್ಲಿ ಪ್ರಕಟಗೊಂಡು ತಿಂಗಳುಗಳೇ ಕಳೆಯುತ್ತಿದ್ದರು, ಕುಮಾರಸ್ವಾಮಿ ಅವರ ನೇತೃತ್ವದ ರಾಜ್ಯ ಸರ್ಕಾರ ಇದುವರೆಗೆ ಕಾಯ್ದೆಯನ್ನು ಜಾರಿಗೆ ತರಲು ಮೀನಾಮೇಷ ಎಣಿಸುತ್ತಿದ್ದು, ಇದರಿಂದ ದಲಿತ ನೌಕರರಲ್ಲಿನ ಕಾರ್ಯಕ್ಷಮತೆ ಕುಂದುತಿದ್ದು, ನಾಲ್ವರು ಪ್ರಾಣಕಳೆದುಕೊಂಡಿದ್ದು, ಹಲವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಸಾಕಷ್ಟು ನಷ್ಟವನ್ನುಂಟು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ರಾಜ್ಯದಾದ್ಯಂತ ಅಂಬೇಡ್ಕರ್ ಪರಿನಿರ್ವಾಣ ದಿನವನ್ನು ದಲಿತರ ಸ್ವಾಭಿಮಾನಿ ಹೋರಾಟದ ದಿನವನ್ನಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿರುವುದಾಗಿ ಸಮಿತಿಯ ಜಿಲ್ಲಾಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ ತಿಳಿಸಿದ್ದಾರೆ.

       ಸದರಿ ಬಡ್ತಿ ಪಡೆದ ಪರಿಶಿಷ್ಟ ಜಾತಿ ಮತ್ತು ಪಗಂಡಗಳ ಸರ್ಕಾರಿ ನೌಕರರಿಗೆ ತತ್ಪರಿಣಾಮ ಜೇಷ್ಠತೆ ವಿಸ್ತರಿಸುವ ಕಾಯ್ದೆ 2017 ಜಾರಿಗೆ ಬಂದಿರುವುದನ್ನು ಸರ್ವೋಚ್ಛ ನ್ಯಾಯಾಲಯ 2018ರ ಅಕ್ಟೋಬರ್ 12ರ ಮಧ್ಯಂತರ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ರಾಜ್ಯದ ಅಡ್ವೋಕೇಟ್‍ಜನರಲ್ ಮೌಖಿಕವಾಗಿ ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ಹೇಳಿದ್ದ ಮಾತನ್ನು ಹಿರಿಯ ವಕೀಲರು ಅಟಾರ್ನಿ ಜನರಲ್‍ರವರಾದ ಮುಕುಲ್ ರೋಹಟಗಿ ವಾಪಾಸ್ ಪಡೆದಿರುವುದಾಗಿ ನ್ಯಾಯಾಲಯ ತಿಳಿಸಿದೆ ಆದ್ದರಿಂದ ಕಾಯ್ದೆಯನ್ನು ಜಾರಿಗೆ ತರಲು ಯಾವುದೇ ಕಾನೂನಾತ್ಮಕ ಅಡ್ಡಿ ಇಲ್ಲದ ಹಿನ್ನೆಲೆಯಲ್ಲಿ ಕೂಡಲೇ ರಾಜ್ಯ ಸರ್ಕಾರ ಸದರಿ ಕಾಯ್ದೆ ಜಾರಿಗೆ ತರುವಂತೆ ವಿನಂತಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

      ಮನವಿ ಸಲ್ಲಿಸುವ ವೇಳೆ ಜಿಲ್ಲಾಧ್ಯಕ್ಷ ವೈ.ಕೆ.ಬಾಲಕೃಷ್ಣರವರೊಂದಿಗೆ ಕಾರ್ಯದರ್ಶಿಗಳಾದ ಡಾ.ಚಂದ್ರಕುಮಾರ್, ಎಂ.ವಾಸು ದೇವ್, ಸಂಘಟನಾ ಕಾರ್ಯದರ್ಶಿ ಆರ್.ಗೋಪಿನಾಥ್ ಮತ್ತಿತರರು ಜೊತೆಗಿದ್ದರು.

(Visited 19 times, 1 visits today)

Related posts