ತುಮಕೂರು : ಕಂಟೈನ್‍ಮೆಂಟ್ ವಲಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಕ್ಕೆ ಅವಕಾಶವಿಲ್ಲ!!

ತುಮಕೂರು :

     ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದ ಕಾರಣ ಮಾರ್ಚ್ 27 ರಿಂದ ನಡೆಯಬೇಕಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಇದೇ ಜೂನ್ 25 ರಿಂದ ನಡೆಸಲು ಉದ್ದೇಶಿಸಲಾಗಿದ್ದು, ಕಂಟೈನ್‍ಮೆಂಟ್ ವಲಯದಲ್ಲಿ ಯಾವುದೇ ಪರೀಕ್ಷಾ ಕೇಂದ್ರಗಳನ್ನು ತೆರೆಯಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

      ಕೋವಿಡ್-19 ಹಿನ್ನೆಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಜಿಲ್ಲಾ ಪಂಚಾಯತಿಯಲ್ಲಿಂದು ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪರೀಕ್ಷೆ ಬರೆಯುವ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ನೀಡಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದರು. ಯಾವುದೇ ಪರೀಕ್ಷಾ ಕೇಂದ್ರವನ್ನು ಕ್ವಾರೆಂಟೈನ್ ಕೇಂದ್ರವನ್ನಾಗಿ ಬಳಸಬಾರದು. ನಗರ/ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮೂಲಕ ಪ್ರತಿ ಪರೀಕ್ಷಾ ಕೇಂದ್ರವನ್ನು ಪರೀಕ್ಷೆಗೆ ಮೂರು ದಿನಗಳ ಮುನ್ನ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಿ ಸ್ವಚ್ಛಗೊಳಿಸುವ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

      ಪ್ರತೀ ಪರೀಕ್ಷಾ ಕೇಂದ್ರದಲ್ಲೂ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸುವ ಪ್ರದೇಶ ಹಾಗೂ ಪರೀಕ್ಷಾ ಕೊಠಡಿಗಳಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಕಲ್ಪಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ಕೊಠಡಿಯಲ್ಲಿ ಗರಿಷ್ಠ 18 ರಿಂದ 20 ಮಕ್ಕಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.

       ಕೆಮ್ಮು/ನೆಗಡಿ/ಜ್ವರ ಮುಂತಾದವುಗಳಿಂದ ಬಳಲುತ್ತಿರುವ ಅಥವಾ ಕಂಟೈನ್‍ಮೆಂಟ್ ವಲಯದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಪ್ರತೀ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 2 ವಿಶೇಷ ಕೊಠಡಿಗಳನ್ನು ಕಾಯ್ದಿರಿಸಬೇಕು. ಪರೀಕ್ಷಾ ಕೇಂದ್ರದಲ್ಲಿ ಸಾಕಷ್ಟು ಕೊಠಡಿಗಳ ಲಭ್ಯತೆಯಿಲ್ಲದಿದ್ದರೆ ಸಮೀಪದ ಶಾಲೆಗಳಲ್ಲಿ ಹೆಚ್ಚುವರಿ ಕೊಠಡಿಗಳನ್ನು ಬ್ಲಾಕ್ ಕೇಂದ್ರಗಳೆಂದು ಘೋಷಿಸಿ ಬಳಸಿಕೊಳ್ಳಬೇಕು. ಪ್ರತಿ ತಾಲ್ಲೂಕಿನ ಕೇಂದ್ರ ಮತ್ತು ಜಿಲ್ಲಾ ಕೇಂದ್ರಸ್ಥಾನಗಳಲ್ಲಿ ಕನಿಷ್ಠ ಎರಡು ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಕಾಯ್ದಿರಿಸಬೇಕು. ಯಾವುದೇ ಪರೀಕ್ಷಾ ಕೇಂದ್ರವು ಕೋವಿಡ್-19 ಪಾಸಿಟಿವ್ ವರದಿಯಾಗಿ ಕಂಟೈನ್‍ಮೆಂಟ್ ವಲಯದೊಳಗಿದ್ದರೆ ಕಾಯ್ದಿರಿಸಿರುವ ಈ ಹೆಚ್ಚುವರಿ ಪರೀಕ್ಷಾ ಕೇಂದ್ರಕ್ಕೆ ಸ್ಥಳಾಂತರಿಸಬೇಕು ಎಂದು ಸೂಚಿಸಿದರು.

      ಪರೀಕ್ಷೆ ಪ್ರಾರಂಭವಾದ ಅಂದರೆ ಜೂನ್ 22ರ ನಂತರ ಯಾವುದೇ ಪರೀಕ್ಷಾ ಕೇಂದ್ರ ಕಂಟೈನ್‍ಮೆಂಟ್ ವಲಯದೊಳಗೆ ಬಂದರೆ ಅಂತಹ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಾಕಿ ಪರೀಕ್ಷೆಗಳನ್ನು ಮುಂದೂಡಿ ಪೂರಕ ಪರೀಕ್ಷೆ ಸಮಯದಲ್ಲಿ ಪ್ರಥಮ ಅವಕಾಶವೆಂದೇ ಪರಿಗಣಿಸಿ ಪರೀಕ್ಷೆ ಬರೆಯಲು ಅವಕಾಶವಿದೆ ಎಂದು ತಿಳಿಸಿದರು.

      ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ಶಾಲೆಯ ಮುಖ್ಯಸ್ಥರು ಎಲ್ಲಾ ವಿದ್ಯಾರ್ಥಿಗಳೊಂದಿಗೆ ಸಮನ್ವಯ ಸಾಧಿಸಿ ಸಾರಿಗೆ ವ್ಯವಸ್ಥೆಯ ಬೇಡಿಕೆಗಳನ್ನು ಕ್ರೋಢೀಕರಿಸಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಲುಪಿಸಬೇಕು. ಇದರಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಲು ಅನುಕೂಲವಾಗಲಿದೆ ಎಂದರು.

      ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರವೇಶ ಪತ್ರ ತೋರಿಸಿ ಯಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಥವಾ ಜಿಲ್ಲಾಡಳಿತ ಕಲ್ಪಿಸುವ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಮಕ್ಕಳನ್ನು ಕರೆದೊಯ್ಯುವ ಬಸ್ಸುಗಳನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು. ಯಾವುದೇ ಕೋರಿಕೆ ಮಾರ್ಗದಲ್ಲಿ ಸರ್ಕಾರಿ ಸ್ವಾಮ್ಯದ ಬಸ್ಸುಗಳು ಲಭ್ಯವಿಲ್ಲದಿದ್ದಲ್ಲಿ ಖಾಸಗಿ/ ಅನುದಾನಿತ ಶಾಲೆಗಳ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಕಲ್ಪಿಸಬೇಕೆಂದು ಡಿಡಿಪಿಐಗಳಿಗೆ ನಿರ್ದೇಶನ ನೀಡಿದರು.

      ಪ್ರತೀ ಪರೀಕ್ಷಾ ಕೇಂದ್ರದಲ್ಲಿ 200 ಮಕ್ಕಳಿಗೆ ಒಂದರಂತೆ ಆರೋಗ್ಯ ತಪಾಸಣಾ ಕೌಂಟರ್ ಅನ್ನು ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಲ್ಲಿ ಸ್ಥಾಪಿಸಬೇಕು ಹಾಗೂ ಆರೋಗ್ಯ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಡಿಹೆಚ್‍ಓ ಅವರಿಗೆ ಸೂಚಿಸಿದರು. ವಿದ್ಯಾರ್ಥಿ ಸೇರಿದಂತೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸುವ ಪ್ರತಿಯೊಬ್ಬ ಅಧಿಕೃತ ವ್ಯಕ್ತಿಯನ್ನು ಆರೋಗ್ಯ ತಪಾಸಣೆಗೊಳಪಡಿಸಿ ಕೈಗಳನ್ನು ಸ್ಯಾನಿಟೈಸ್ ಮಾಡಿ, ಮಾಸ್ಕ್ ಧರಿಸಿರುವ ಬಗ್ಗೆ ಖಾತ್ರಿಪಡಿಸಿಕೊಂಡ ನಂತರವೇ ಪ್ರವೇಶಕ್ಕೆ ಅನುಮತಿಸಬೇಕು ಎಂದು ತಿಳಿಸಿದರು.

    ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಯಾವುದೇ ಸಿಬ್ಬಂದಿಗೆ ರೋಗ ಲಕ್ಷಣಗಳಿಲ್ಲದಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರಲ್ಲದೆ ಪರೀಕ್ಷೆಗೆ ಹಾಜರಾಗುವ ಯಾವುದೇ ಮಕ್ಕಳು ರಾಜ್ಯದ ಹೊರಗೆ ವಲಸೆ ಹೋಗಿದ್ದರೆ/ಪ್ರಯಾಣಿಸಿದ್ದರೆ ಅಥವಾ ಗಡಿ ರಾಜ್ಯದಲ್ಲಿ ಉಳಿದುಕೊಂಡಿದ್ದರೆ ಜೂನ್ 25 ರಿಂದ ಜುಲೈ 4 ರವರೆಗೆ ನಡೆಯುವ ಮುಖ್ಯ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ. ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಮಕ್ಕಳಿಗೆ ಪೂರಕ ಪರೀಕ್ಷೆಗೆ ಹಾಜರಾಗಲು ಆಯ್ಕೆ ನೀಡಲಾಗುವುದು. ಈ ಮಕ್ಕಳ ಪೂರಕ ಪರೀಕ್ಷೆಯನ್ನು ಮೊದಲ/ಹೊಸ ಪ್ರಯತ್ನವೆಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.

      ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳು ಪರೀಕ್ಷೆಯನ್ನು ಸುಗಮವಾಗಿ ಬರೆಯಲು ಅನುಕೂಲವಾಗುವಂತೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಸಿಸಿಟಿವಿ ಅಳವಡಿಸದೆ ಇರುವ ಪರೀಕ್ಷಾ ಕೇಂದ್ರಗಳಿಗೆ ಕೂಡಲೇ ಅಳವಡಿಸಲು ಕ್ರಮವಹಿಸಬೇಕು. ಸಿದ್ಧಗಂಗಾ ಮಠ ಸೇರಿದಂತೆ ವಸತಿ ಶಾಲೆಗಳಲ್ಲಿ ಉಳಿದು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪಟ್ಟಿಯನ್ನು ತಮಗೆ ಸಲ್ಲಿಸಬೇಕೆಂದು ಡಿಡಿಪಿಐಗಳಿಗೆ ನಿರ್ದೇಶಿಸಿದರು.

     ನಿಯೋಜಿತ ಪರೀಕ್ಷಾ ಸಿಬ್ಬಂದಿಗಳಿಗೆ ಸರ್ಕಾರದ ಮಾರ್ಗಸೂಚಿಗಳ ಪಾಲನೆ ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸೂಕ್ತ ತರಬೇತಿ ನೀಡಬೇಕು. ಪರೀಕ್ಷಾ ಕಾರ್ಯಕ್ಕೆ ಸ್ವಯಂ ಸೇವಕರ ಅಗತ್ಯವಿದ್ದಲ್ಲಿ ಕೂಡಲೇ ಮಾಹಿತಿ ನೀಡಿದಲ್ಲಿ ಎನ್‍ಸಿಸಿ/ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಮುಖ್ಯಸ್ಥರಿಗೆ ಸ್ವಯಂ ಸೇವಕರನ್ನು ಒದಗಿಸಲು ಮನವಿ ಮಾಡಲಾಗುವುದು ಎಂದು ತಿಳಿಸಿದರು.

      ಪುನರ್ಮನನ ತರಗತಿ ನಡೆಸಲು ಅವಕಾಶವಿಲ್ಲದಿರುವುದರಿಂದ ಎಸ್‍ಎಸ್‍ಎಲ್‍ಸಿ ಪಠ್ಯ ವಿಷಯಕ್ಕೆ ಸಂಬಂಧಿಸಿದ ವಿಶೇಷವಾಗಿ ವಿಜ್ಞಾನ ಹಾಗೂ ಗಣಿತ ವಿಷಯಗಳಿಗೆ ಸಂಬಂಧಿಸಿದಂತೆ ಡಯಟ್‍ನಲ್ಲಿರುವ ವಿಷಯ ನಿರ್ವಾಹಕರು ಕನಿಷ್ಟ 2 ನಿಮಿಷಗಳ ವಿಡಿಯೋ ತಯಾರಿಸಿ ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಡಬೇಕೆಂದು ಸಲಹೆ ನೀಡಿದರು. ಇದರಿಂದ ಮಕ್ಕಳಿಗೆ ಪರೀಕ್ಷೆ ಎದುರಿಸಲು ಪ್ರಯೋಜನವಾಗುತ್ತದೆ ಎಂದು ತಿಳಿಸಿದರು.

      ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಒಟ್ಟು 723 ಶಾಲೆಗಳ 37317 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ತುಮಕೂರಿನ 7 ಬ್ಲಾಕ್ ಪರೀಕ್ಷಾ ಕೇಂದ್ರ ಸೇರಿದಂತೆ ಒಟ್ಟು 92 ಹಾಗೂ ಮಧುಗಿರಿಯ 9 ಬ್ಲಾಕ್ ಪರೀಕ್ಷಾ ಕೇಂದ್ರ ಸೇರಿದಂತೆ ಒಟ್ಟು 68 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ತುಮಕೂರಿನ 2 ಹಾಗೂ ಮಧುಗಿರಿಯ 1 ಕೇಂದ್ರದಲ್ಲಿ ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಧುಗಿರಿಯ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಪಾವಗಡ ತಾಲ್ಲೂಕಿನ ಅನುದಾನಿತ ಶಾಲೆಯಾದ ವೈ.ಎನ್. ಹೊಸಕೋಟೆಯ ರಾಷ್ಟ್ರೀಯ ವಿದ್ಯಾಪೀಠ ಪ್ರೌಢಶಾಲೆಯನ್ನು ಸೂಕ್ಷ್ಮ ಪರೀಕ್ಷಾ ಕೇಂದ್ರವೆಂದು ಗುರುತಿಸಲಾಗಿದೆ ಎಂದು ಡಿಡಿಪಿಐಗಳಾದ ಎಂ.ಆರ್. ಕಾಮಾಕ್ಷಿ ಹಾಗೂ ರೇವಣ್ಣ ಸಿದ್ದಪ್ಪ ಸಭೆಗೆ ಮಾಹಿತಿ ನೀಡಿದರು.

      ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ, ಜಿ.ಪಂ. ಉಪಕಾರ್ಯದರ್ಶಿ ಕೃಷ್ಣಮೂರ್ತಿ, ಡಯಟ್ ಪ್ರಾಂಶುಪಾಲ ಮಂಜುನಾಥ, ಡಿಹೆಚ್‍ಓ ಡಾ: ನಾಗೇಂದ್ರಪ್ಪ, ಎಲ್ಲಾ ತಾಲ್ಲೂಕಿನ ತಹಶೀಲ್ದಾರರು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು, ಎನ್‍ಸಿಸಿ/ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಮುಖ್ಯಸ್ಥರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮತ್ತಿತರರು ಹಾಜರಿದ್ದರು.

(Visited 4 times, 1 visits today)

Related posts

Leave a Comment