ತುಮಕೂರು : 15ನೇ ವಾರ್ಡಿನ ಪಾಲಿಕೆ ಸದಸ್ಯರಿಂದ ಜನಸ್ಪಂದನ ಕಾರ್ಯಕ್ರಮ

ತುಮಕೂರು:

      ನಗರದ 15ನೇ ವಾರ್ಡಿನ ಪಾಲಿಕೆ ಸದಸ್ಯರಾದ ಶ್ರೀಮತಿ ಗಿರಿಜಾ ಧನಿಯಾಕುಮಾರ್ ಅವರ ಅಧ್ಯಕ್ಷತೆ ಯಲ್ಲಿ ಇಂದು ಪಾಲಿಕೆಯ ಅಧಿಕಾರಿಗಳು ಮತ್ತು ನಾಗರಿಕರ ಜನಸ್ಪಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

       ಪಾಲಿಕೆಯ ಪರವಾಗಿ ಆರೋಗ್ಯಾಧಿಕಾರಿ ಡಾ.ನಾಗೇಶ್,ಇಂಜಿನಿಯರ್‍ಗಳಾದ ಸಂದೀಪ್, ಮಧುಸೂಧನ್, ಪರಿಸರ ವಿಭಾಗದ ಕೃಷ್ಣಮೂರ್ತಿ, ಕಂದಾಯ ವಿಭಾಗದ ರುದ್ರಮೂರ್ತಿ, ಬೀದಿ ದೀಪ, ಕಸ ನಿರ್ವಹಣೆ ವಿಭಾಗಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರೆ,ಜೈನ ಸಮಾಜದ ಸುರೇಶ್, ಧನಿಯಕುಮಾರ್,ಬೆಸ್ಟೆಕ್ ರಾಮರಾಜು,ವಿನೋದ್,ಬಾಲಚಂದ್ರ, ಸುಮಾರು ಮೂವತ್ತು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮೊದಲಿಗೆ ಮಾತನಾಡಿದ ಪಾಲಿಕೆಯ ಸದಸ್ಯರಾದ ಶ್ರೀಮತಿ ಗಿರಿಜಾ ಧನಿಯಕುಮಾರ್,ನಾವು ಚುನಾವಣೆ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಹಲವು ನಾಗರಿಕರು ತಮ್ಮ ಬಡಾವಣೆಯ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದಿದ್ದರು. ಅವರುಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಕುಡಿಯುವ ನೀರು ಮತ್ತು ಕಸ ವಿಲೇವಾರಿಯನ್ನು ಹೊರತುಪಡಿಸಿ, ಉಳಿದಂತೆ ಬೇರೆ ಸಮಸ್ಯೆಗಳು ಬಗೆಹರಿದಿಲ್ಲ.ಈ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳು ಮತ್ತು ಜನಸಾಮಾನ್ಯರನ್ನು ಮುಖಾಮುಖಿಯಾಗಿಸಿ,ಅವರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವ ನಿಟ್ಟಿನಲ್ಲಿ ಈ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದೆ.ಈ ಕಾರ್ಯಕ್ರಮದಲ್ಲಿ ಜನರಿಂದ ಬಂದ ಸಮಸ್ಯೆಗಳನ್ನು ಗುರುತು ಮಾಡಿ ಕೊಂಡು, ಮುಂದಿನ ಸಭೆಯಲ್ಲಿ ಈ ಹಿಂದೆ ಜನರು ಹೆಸರಿಸಿದ್ದ ಸಮಸ್ಯೆಗಳು ಬಗೆಹರಿದಿವೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು.ಜನರು ಮತ್ತು ಅಧಿಕಾರಿಗಳ ನಡುವೆ ಸೇತುವೆಯಾಗಿ ಪಾಲಿಕೆಯ ಸದಸ್ಯೆಯಾಗಿ ನಾನು ಕೆಲಸ ಮಾಡಲಿದ್ದೇನೆ ಎಂದರು.

     ಮೂರು ಉದ್ಯಾನವನಗಳ ಅಭಿವೃದ್ದಿ:ಜನಸಾಮಾನ್ಯರಿಗೆ ಅನುಕೂಲವಾಗುವಂತೆ ವಾರ್ಡಿನಲ್ಲಿರುವ ಸುಮಾರು 3 ಉದ್ಯಾನವನಗಳ ಅಭಿವೃದ್ದಿಗೆ ಚಿಂತನೆ ನಡೆಸಲಾಗಿದೆ. ಪ್ರತಿ ಉದ್ಯಾನವನದಲ್ಲಿ ಮಕ್ಕಳಿಗೆ ಆಟದ ಸಲಕರಣೆಗಳು,ಯುವಕರಿಗೆ ವ್ಯಾಯಾಮದ ವಸ್ತುಗಳು,ಹಿರಿಯರಿಗೆ ವಾಕಿಂಗ್ ಮಾಡಲು ಪಾಥ್ ನಿರ್ಮಿಸಲು ಚಿಂತನೆ ನಡೆದಿದೆ.ಎಸ್.ಎಸ್.ಪುರಂನ ಕನರ್ವೆನ್ಸಿಗಳಲ್ಲಿ ದ್ವಿಚಕ್ರವಾಹನಗಳ ಪಾರ್ಕಿಂಗ್‍ಗೆ ಕ್ರಮ ಕೈಗೊಳ್ಳಲಾಗುವುದು.ಅಲ್ಲದೆ ಎಲ್ಲೆಲ್ಲಿ ಕನರ್ವೆನ್ಸಿಗಳ ಒತ್ತುವರಿ ಯಾಗಿದೆ ಅದನ್ನು ತೆರೆವುಗೊಳಿಸಿ,ಜನಸಾಮಾನ್ಯರಿಗೆ ತಿರುಗಾಡಲು ಅನುಕೂಲ ಮಾಡಿಕೊಡಲಾಗುವುದು ಎಂದು ಶ್ರೀಮತಿ ಗಿರಿಜಾ ಧನಿಯಕುಮಾರ್ ತಿಳಿಸಿದರು.

      ವಾರ್ಡಿನ ನಾಗರಿಕರಿಂದ ಕೋತಿ, ನಾಯಿಗಳ ಹಾವಳಿ ತಡೆ, ಎಸ್.ಎಸ್.ಪುರಂ 15 ನೇ ಕ್ರಾಸ್‍ನಲ್ಲಿ ರಸ್ತೆಗೆ ಹಂಪ್ಸ್ ಹಾಕುವುದು, ಪಾರ್ಕಿಂಗ್ ಸಮಸ್ಯೆಗೆ ಪರಿಹಾರ,ಬೀದಿ ದೀಪಗಳ ಸಮರ್ಪಕ ನಿರ್ವಹಣೆ, ರೈಲ್ವೆ ನಿಲ್ದಾಣ ರಸ್ತೆಯ ದುರಸ್ತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟರು.

      ಗಾಂಧಿನಗರ ಆಸ್ಪತ್ರೆಯ ನಗರವಾಗಿ ಪರಿವರ್ತನೆಯಾಗುತ್ತಿದೆ.ಜನನಿ ಆಸ್ಪತ್ರೆಯವರು ಕನ್ಸರ್ವೆನ್ಸಿ ಒತ್ತುವರಿ ಮಾಡಿಕೊಂಡು ಯಾವುದೇ ಅನುಮತಿ ಪಡೆಯದೆ,ಮನೆಯಲ್ಲಿ ಅಕ್ರಮವಾಗಿ ನರ್ಸಿಂಗ್ ಹೋಂ ನಡೆಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಂಜುಂಡಸ್ವಾಮಿ ಎಂಬುವವರು ದೂರಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಸಂಬಂಧಪಟ್ಟ ದಾಖಲೆ ನೀಡಿದರೆ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.

      ಬೀದಿ ನಾಯಿ ಮತ್ತು ಕೋತಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಉತ್ತರಿಸಿದ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗೇಶ್,ಈಗಾಗಲೇ 3 ಬಾರಿ ಕಾರ್ಯಾಚರಣೆ ನಡೆಸಿದ ನಾಯಿಗಳನ್ನು ಹಿಡಿದು,ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ ಅಯಾಯ ಸ್ಥಳಗಳಿಗೆ ಬಿಡುಗಡೆ ಮಾಡಲಾಗಿದೆ.ಇದಕ್ಕಾಗಿ ಸೋರೆಕುಂಟೆ ಗೇಟ್ ಬಳಿ ಶಸ್ತ್ರಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಕೋತಿ ಹಿಡಿಯಲು ವಿಶಾಖಪಟ್ಟಂನಿಂದ ಆಳುಗಲನ್ನು ಕರೆಯಿಸಬೇಕಾಗಿದೆ.ಈ ಕೆಲಸವನ್ನು ಟೆಂಡರ್ ಕರೆಯಲಾಗಿದೆ ಎಂದರು.

(Visited 19 times, 1 visits today)

Related posts