ತುಮಕೂರು:

ಹೃದಯ ರೋಗಕ್ಕೆ ಸಂಬಂಧಿಸಿದ ಆರೋಗ್ಯ ಸೇವೆ ಬಡಜನರಿಗೆ ಸಿಗುವುದು ಕಷ್ಟವಾಗಿದೆ. ಹಣವಂತರು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ತೆರಳುತ್ತಾರೆ. ಆದರೆ ಬಡವರಿಗೆ ಸರ್ಕಾರಿ ಆಸ್ಪತ್ರೆ ನಿಗಧಿತ ಸಮಯದೊಳಗೆ ಚಿಕಿತ್ಸೆ ಸಿಗುವುದಿಲ್ಲ. ಅಂಥ ಜನಜನರ ಸೇವೆಗಾಗಿ ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್’ ತೆರೆಯಲಾಗುತ್ತಿದೆ ಎಂದು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ತಿಳಿಸಿದರು.
ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ 26ರಂದು ವೈದ್ಯಕೀಯ ಕಾಲೇಜಿನಲ್ಲಿ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ಆರಂಭವಾಗಲಿದ್ದು, ವಿದೇಶಿ ಗುಣಮಟ್ಟದ ಆಧುನಿಕ ಸಲಕರಣೆಗಳನ್ನು ಒಳಗೊಂಡ ನುರಿತ ವೈದ್ಯರ ತಂಡ ಕಾರ್ಯನಿರ್ವಹಿಸಲಿದೆ.
32 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ತಂದೆ ಡಾ. ಗಂಗಾಧರಯ್ಯ ಮತ್ತು ಸಹೋದರರಾದ ಡಾ.ಶಿವಪ್ರಸಾದ್ ಆಶಯದಂತೆ ಸಮಾಜದ ಕಟ್ಟಕಡೆಯ ಬಡಜನರಿಗೆ ಆರೋಗ್ಯ ಸೇವೆ ದೊರಕಿಸಲಿ ಸಂಸ್ಥೆ ಮುಂದಾಗಿದೆ. ಬಡವರಿಗೆ ಆರೋಗ್ಯ ಸೇವೆ ತಲುಪುವುದು ಕಷ್ಟವಾಗಿದೆ. ಹಣವಂತರು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ತೆರಳುತ್ತಾರೆ. ಆದರೆ ಬಡವರು ಸರ್ಕಾರಿ ಆಸ್ಪತ್ರೆ ಹಾಗೂ ನಮ್ಮ ಆಸ್ಪತ್ರೆಗೆ ಬರುತ್ತಾರೆ, ಅಂಥವರಿಗಾಗಿ ಕಾರ್ಡಿಯೋ ಕೇರ್ ಸಂಸ್ಥೆ ಸಹಯೋಗದೊಂದಿಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಸಿದ್ಧಾರ್ಥ ವೈದ್ಯಕೀಯ ಸಂಸ್ಥೆ ಎಲ್ಲಾ ರೀತಿಯ ಚಿಕಿತ್ಸೆಯನ್ನು ಅತ್ಯಂತ ಕಡಿಮೆ ದರದಲ್ಲಿ ನೀಡುವ ಉದ್ದೇಶ ಹೊಂದಿದೆ ಎಂದು ಡಾ.ಜಿ. ಪರಮೇಶ್ವರ ತಿಳಿಸಿದರು.
ಖಾಸಗಿ ಆಸ್ಪತ್ರೆಯಲ್ಲಿ ಆಗುತ್ತಿರುವ ಶೋಷಣೆ ತಪ್ಪಿಸಲು ನಮ್ಮ ಸಂಸ್ಥೆಯಲ್ಲಿ ಎಲ್ಲ ತರಹದ ತಪಾಸಣೆ ಮತ್ತು ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಲಾಗುತ್ತಿz. ಕೋವಿಡ್ ಸಂದರ್ಭದಲ್ಲಿ ಜನಸಾಮಾನ್ಯರು ಪಡುತ್ತಿದ್ದ ಕಷ್ಟ ತಪ್ಪಿಸಲು ಸುಮಾರು ಒಂದು ಕೋಟಿ ವೆಚ್ಚದಲ್ಲಿ ತಪಾಸಣಾ ಕೇಂದ್ರವನ್ನು ತೆರೆಯಾಯಿತು ಎಂದು ಅವರು ವಿವರಿಸಿದರು.
ಸರ್ಕಾರದ ಸೇವೆಗಳು ಲಭ್ಯ: ಬಿ.ಪಿ.ಎಲ್, ಆಯುಷ್ಮನ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಉಚಿತವಾಗಿ ತಪಾಸಣೆ ಮಾಡಲಾಗುವುದು ಎಂದು ವಿವರಿಸಿದ ಡಾ. ಜಿ. ಪರಮೇಶ್ವರ, ಕೋವಿಡ ನಂತರದ ದಿನದಲ್ಲಿ ಹೃದಯ ತೊಂದರೆ ಜನ ಒಳಗಾಗುತ್ತಿದ್ದಾರೆ. ಇದನ್ನು ಮನಗಂಡು ತುಮಕೂರಿನ ಸುತ್ತಮುತ್ತಲಿನ ಹಾಗೂ ನೆರೆಹೊರೆ ಜಿಲ್ಲೆಗಳಿಗೂ ಆರೋಗ್ಯ ಸೇವಾ ಮತ್ತು ಚಿಕಿತ್ಸಾ ಸೌಲಭ್ಯ ದೊರಕುವಂತಾಗಲಿ ಎಂಬ ಉದ್ದೇಶದಿಂದ ‘ಹೃದಯದಿಂದ ಹೃದಯಕ್ಕೆ’ ಎನ್ನುವ ಆಶಯದೊಂದಿಗೆ ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ತೆರೆಯಲಾಗಿದೆ. ಇಲ್ಲಿ ಎಲ್ಲಾ ರೀತಿಯ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಉಪಕರಣಗಳು ಹಾಗೂ ಉತ್ತಮ ಹೃದಯ ತಜ್ಞರ ತಂಡ ಒಳಗೊಂಡಿದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಾರ್ಡಿಯೋ ಕೇರ್ ಸಂಸ್ಥೆಯ ಡಾ. ತಮಿನ್ ಅಹಮದ್, ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಸ್ಥಾಪಿತವಾಗುತ್ತಿರುವ ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್‍ನಲ್ಲಿ ವಾರದ 24 ಗಂಟೆಯೂ ವೈದ್ಯರು ಲಭ್ಯವಿದ್ದು, ಸೆಂಟರ್‍ಗೆ ಬರುವ ಎಲ್ಲಾ ರೋಗಿಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ. ಈ ಭಾಗದ ಬಡಜನರಿಗೆ ಇದು ತುಂಬಾ ಉಪಯೋಗವಾಗಲಿದೆ ಎಂದರು.
ಶ್ರೀ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಸಿಇಓ ಪಿ.ಕೆ.ಡಾ.ದೇವದಾಸ್ ಪ್ರಾಂಶುಪಾಲರಾದ ಡಾ. ಎ.ಜಿ.ಶ್ರೀನಿವಾಸಮೂರ್ತಿ, ಡಾ.ಪ್ರಬಾಕರ್ ಅವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.





