
ತುಮಕೂರು: ಸರ್ಕಾರದ ವಿವಿಧ ಯೋಜನೆಗಳಡಿ ನೀಡಲಾಗುವ ಸೌಲಭ್ಯಗಳನ್ನು ಪಡೆಯಲು ಫಲಾನುಭವಿಗಳು ಮಧ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ಸಂಬAಧಿಸಿದ ಕಚೇರಿಯನ್ನು ಸಂಪರ್ಕಿಸಬೇಕೆAದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಫಲಾನುಭವಿಗಳಿಗೆ ಕಿವಿ ಮಾತು ಹೇಳಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಕಾಡುಗೊಲ್ಲ ಸಮುದಾಯದ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿ ಫಲಾನುಭವಿಗಳ ಆಯ್ಕೆ ಸಮಿತಿ ಸಭೆ ನಡೆಸಿ ಅವರು ಮಾತನಾಡಿದರು. ನಿಗಮದಿಂದ ೨೦೨೪-೨೫ನೇ ಸಾಲಿಗಾಗಿ ಅರ್ಹ ಫಲಾನುಭವಿಗಳಿಗೆ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ ಸಾಲ / ಸಹಾಯಧನ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಅರಿವು ಶೈಕ್ಷಣಿಕ ನೇರ ಸಾಲ ಯೋಜನೆಯಡಿ ಸಾಲ ಸೌಲಭ್ಯ ನೀಡಲಾಗುವುದು. ಸಾಲ ಸೌಲಭ್ಯ ಕೋರಿ ಒಟ್ಟು ೮೧೦ ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ ವಿವಿಧ ಕಾರಣಗಳಿಂದ ೪೨ ಅರ್ಜಿಗಳು ತಿರಸ್ಕೃತಗೊಂಡಿವೆ. ಉಳಿದ ೭೬೮ ಫಲಾನುಭವಿಗಳು ಯೋಜನೆಗಳ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ ಎಂದು ತಿಳಿಸಿದರು.
ಯೋಜನೆಗೆ ಅರ್ಹತೆ ಪಡೆದ ಫಲಾನುಭವಿಗಳು ಜೂನ್ ೧೦ರೊಳಗೆ ಅಗತ್ಯ ಮೂಲ ದಾಖಲೆಗಳನ್ನು ಸಂಬAಧ ಪಟ್ಟ ಅಧಿಕಾರಿಗಳಿಗೆ ಸಲ್ಲಿಸಿ ಯೋಜನೆಗಳ ಲಾಭ ಪಡೆಯಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಕಾಡುಗೊಲ್ಲ ಸಮುದಾಯದವರು ಅರಿವು-ಶೈಕ್ಷಣಿಕ ನೇರ ಸಾಲ ಯೋಜನೆಯಡಿ ವೃತ್ತಿಪರ ತಾಂತ್ರಿಕ, ವೈದ್ಯಕೀಯ ಹಾಗೂ ಇತ್ಯಾದಿ ಉನ್ನತ ಕೋರ್ಸುಗಳ ವ್ಯಾಸಂಗಕ್ಕೆ ಪ್ರವೇಶ ಪರೀಕ್ಷಾ ಪ್ರಾಧಿಕಾರದಿಂದ ಸೀಟು ಪಡೆದು ಕಾಲೇಜಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗೆ ಶೇ. ೨ರ ಬಡ್ಡಿ ದರದಲ್ಲಿ ವಾರ್ಷಿಕ ೧ ಲಕ್ಷ ರೂ.ಗಳವರೆಗೆ ಸಾಲ ಪಡೆಯಬಹುದು ಎಂದು ತಿಳಿಸಿದರಲ್ಲದೆ ಈ ಯೋಜನೆಯಡಿ ಜಿಲ್ಲೆಯಲ್ಲಿ ಕೇವಲ ೫ ಅರ್ಜಿಗಳು ಸ್ವೀಕೃತವಾಗಿವೆ. ಈ ಎಲ್ಲ ಯೋಜನೆಗಳ ಬಗ್ಗೆ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ, ನಿಗಮದ ಜಿಲ್ಲಾ ವ್ಯವಸ್ಥಾಪಕ ವೆಂಕಟರಾಜು ಬಿ.ವಿ., ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.





