ತುಮಕೂರು: ಆಗ್ನೇಯ ಪದವಿಧರರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರು ನಗರದ ವಿವಿಧ ಕಾಲೇಜು, ನ್ಯಾಯಾಲಯ ಆವರಣಗಳಲ್ಲಿ ಪದವಿಧರ ಮತದಾರರನ್ನು ಭೇಟಿ ಮಾಡಿ ಮತಯಾಚಿಸಿದರು. ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಮತ್ತಿತರ ಮುಖಂಡರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ಸರ್ಕಾರಿ ಜ್ಯೂನಿಯರ್ ಕಾಲೇಜು, ಶ್ರೀದೇವಿ ಕಾಲೇಜು, ಸರ್ವೋದಯ ಕಾಲೇಜು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳು ಹಾಗೂ ನಗರದ ನ್ಯಾಯಾಲಯ ಆವರಣದಲ್ಲಿ ವಕೀಲರನ್ನು ಭೇಟಿ ಮಾಡಿ ಮತ ಯಾಚಿಸಿದರು. ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಬೆಂಬಲಿಸಲು ಕೋರಿದರು.
ಪ್ರಚಾರದ ವೇಳೆ ಮಾತನಾಡಿದ ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್, ದಾವಣಗೆರೆ ಮೂಲದ ತಾವು ಶಿಕ್ಷಣ ಸಂಸ್ಥೆ ನಡೆಸುತ್ತಿದ್ದು, ಪದವಿದರರ ಸಮಸ್ಯೆ, ಬೇಡಿಕೆಗಳ ಬಗ್ಗೆ ಅರಿವಿದೆ.ಚುನಾವಣೆಯಲ್ಲಿ ಆಯ್ಕೆಯಾದ ನಂತರ ನಿಮ್ಮಗಳ ಧ್ವನಿಯಾಗಿ ಪರಿಷತ್ತಿನಲ್ಲಿ ಸಮರ್ಥವಾಗಿ ಮಂಡನೆ ಮಾಡಿ ಸರ್ಕಾರದ ಗಮನ ಸೆಳೆದು ಸಮಸ್ಯೆ ಬಗೆಹರಿಸುವ, ಬೇಡಿಕೆ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಪದವಿಧರರ ಅನುಕೂಲಕ್ಕಾಗಿ ತಮ್ಮ ಪ್ರತಿಷ್ಠಾನದಿಂದ ಕ್ಷೇತ್ರದ ಎಲ್ಲಾ ಐದು ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಇ-ಗ್ರಂಥಾಲಯ ಸ್ಥಾಪಿಸುವುದಾಗಿ ಹೇಳಿದ ಅಭ್ಯರ್ಥಿ ಸುರೇಶ್, ಈಗಾಗಲೇ ಆಗ್ನೇಯ ಪದವಿಧರ ಕ್ಷೇತ್ರದಾದ್ಯಂತ ಹಲವು ಸುತ್ತಿನ ಪ್ರವಾಸ ಮಾಡಿ ಮತದಾರರನ್ನು ಭೇಟಿ ಮಾಡಿ ಅವರ ಅಹವಾಲುಗಳನ್ನು ಆಲಿಸಿದ್ದೇನೆ, ಗೆದ್ದ ನಂತರವೂ ನಿರಂತರ ಸಂಪರ್ಕದಲ್ಲಿರುತ್ತೇನೆ ಎಂದರು.
ಕಳೆದ ೨೦ ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ಪಕ್ಷ ವಹಿಸಿದ್ದ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ. ಹಲವಾರು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದು ಪದವಿಧರರ ಅಗತ್ಯತೆಗಳ ಬಗ್ಗೆ ಹತ್ತಿರದಿಂದ ತಿಳಿದಿದ್ದೇನೆ. ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತö್ಯದ ಮತ ನೀಡಿ ಚುನಾಯಿಸಬೇಕು ಎಂದು ಕೆ.ಎಂ. ಸುರೇಶ್ ಮನವಿ ಮಾಡಿದರು.
ಈಗಿನ ಚುನಾವಣಾ ವ್ಯವಸ್ಥೆ ಹಳಿ ತಪ್ಪುತ್ತಿದೆ ಇಂತಹ ಸಂದರ್ಭದಲ್ಲಿ ಪ್ರಜ್ಞಾವಂತ ಪದವಿಧರ ಮತದಾರರು ಚುನಾವಣೆಯ ಘನತೆ ಕಾಪಾಡಲು ಸಮರ್ಥ ಆಭ್ಯರ್ಥಿಯಾದ ಸುರೇಶ್ ಅವರನ್ನು ಬೆಂಬಲಿಸಬೇಕು ಎಂದು ಜ್ಯೋತಿಗಣೇಶ್ ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಹೆಚ್. ಹನುಮಂತರಾಜು, ನಗರ ಅಧ್ಯಕ್ಷ ಧನುಷ್, ಮುಖಂಡರಾದ ಸುನಿಲ್ ಪ್ರಸಾದ್, ಸದಾಶಿವಯ್ಯ ಮೊದಲಾದವರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
(Visited 1 times, 1 visits today)





