ತುಮಕೂರು: ಕೊಳವೆಬಾವಿ ಕೊರೆದು ವರ್ಷಗಳೇ ಕಳೆದರೂ ಪಂಪು ಮೋಟಾರ್ ವಿತರಣೆ ಮಾಡದೆ ವಿಳಂಬ ಧೋರಣೆ ಅನುಸರಿಸಿರುವ ಅಧಿಕಾರಿಗಳ ಮತ್ತು ಗುತ್ತಿಗೆದಾರರ ವಿರುದ್ಧ ಶಾಸಕ ಬಿ ಸುರೇಶ್ ಗೌಡರು ತೀವ್ರ ಆಕ್ರೋಶಗೊಂಡರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊನ್ನೊಡುಕೆ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ಪಂಪು ಮೋಟಾರ್ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಲಿತರು ಎಂದರೆ ಈ ಸರ್ಕಾರಕ್ಕೆ ತಾತ್ಸಾರ ಮನೋಭಾವ ಇದೆ. ದಲಿತರ ಹಾಗೂ ಹಿಂದುಳಿದ ವರ್ಗಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯರವರು ದಲಿತರಿಗೆ ಮೀಸಲಾಗಿರುವ ಎಲ್ಲ ನಿಗಮಗಳಲ್ಲೂ ಕೂಡ ಅವ್ಯಾಹತವಾಗಿ ಹಗರಣಗಳು ನಡೆದಿವೆ ಬೋವಿ ನಿಗಮ ವಾಲ್ಮೀಕಿ ನಿಗಮ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ವ್ಯಾಪಕವಾದ ಭ್ರಷ್ಟಾಚಾರ ಇದೆ. ಮೋಸ ಮಾಡಲು ದಲಿತರೇ ಬೇಕೆ ದಲಿತೋದ್ಧಾರಕ ಎಂದು ಉದ್ಘಾರ ಮಾಡುವ ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸದೆ ಇರುವುದು ನೋಡಿದರೆ ಅವರಿಗೆ ದಲಿತರ ಉದ್ಧಾರ ಆಗುವುದು ಬೇಕಿಲ್ಲ ಬಡವರು ಬಡವರಾಗಿರಬೇಕು ಎಂಬುದು ಕಾಂಗ್ರೆಸ್ ಪಕ್ಷದ ಧೋರಣೆಯಾಗಿದೆ ಎಂದು ಶಾಸಕ ಬಿ ಸುರೇಶ್ ಗೌಡ ತೀವ್ರ ತರಾಟೆಗೆ ತೆಗೆದುಕೊಂಡರು.
ರೈತರೇ ತಂದು ಹಾಕುವ ಮೋಟರ್ ಪಂಪ್ಗಳು ವರ್ಷಗಳು ಕಳೆದರೂ ದುರಸ್ಥಿಗೆ ಬರುವುದಿಲ್ಲ. ಆದರೆ ನಿಗಮದ ಅಧಿಕಾರಿಗಳು ವಿತರಣೆ ಮಾಡುವ ಪಂಪು ಮೋಟರುಗಳು ಪದೇ ಪದೇ ರಿಪೇರಿಗೆ ಬರುತ್ತಿರುವುದು ಅನೇಕ ಬಾರಿ ನನ್ನ ಗಮನಕ್ಕೆ ಬಂದಿದೆ ಕಳಪೆ ಗುಣಮಟ್ಟದಿಂದ ಕೂಡಿರುವ ಪಂಪು ಮೋಟರ್ ಗಳ ವಿತರಣೆ ಮಾಡಿದ್ದಲ್ಲಿ ನಾನಂತೂ ಸುಮ್ಮನೆ ಕೂರುವುದಿಲ್ಲ ಖಂಡಿತ ಅಮಾನತ್ತಿಗೆ ಶಿಫಾರಸು ಮಾಡುತ್ತೇನೆ ಎಂದು ಶಾಸಕ ಬಿ.ಸುರೇಶ್ ಗೌಡರು ಎಚ್ಚರಿಕೆ ನೀಡಿದರು.
ಇದೇ ವೇಳೆ ರೈತರಿಂದ ಹಣ ಪಡೆದುಕೊಳ್ಳುತ್ತಿರುವ ಕೆಲವು ಅಧಿಕಾರಿಗಳ ವಿರುದ್ದ ಗರಂ ಆದರು. ಫಲಾನುಭವಿಗಳಿಗೆ ಕೊಳವೆ ಬಾವಿ ಕೊರೆಯುವ ವೇಳೆ ಬೋರ್ವೆಲ್ ಏಜೆಂಟ್ ರೈತರ ಬಳಿ ಹತ್ತು-ಇಪ್ಪತ್ತು ಸಾವಿರ ಹಣ ವಸೂಲಿ ಮಾಡುತ್ತಿದ್ದಾರೆಂದು ರೈತರು ಶಾಸಕರಿಗೆ ದೂರು ನೀಡಿದರು. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ರೈತರ ಬಳಿ ಹಣ ವಸೂಲಿ ಮಾಡುವ ಬೋರ್ವೆಲ್ ಗುತ್ತಿಗೆದಾರರ ಪರವಾನಿಗೆ ರದ್ದು ಮಾಡಲು ಶಿಫಾರಸ್ಸು ಮಾಡುವಂತೆ ಸೂಚಿಸಿದರು.
ಗುಣಮಟ್ಟದ ಸಾಮಗ್ರಿಗಳನ್ನು ವಿತರಣೆ ಮಾಡುವಂತೆ ಎಚ್ಚರಿಕೆ ಕೊಟ್ಟರು.
ಹಳೆ ಸರಕಾರದ ಯೋಜನೆಗಳು ನನೆಗುದಿಗೆ ಬಿದ್ದು ಹೊಸ ಗ್ಯಾರಂಟಿಗಳು ಅನುಷ್ಠಾನವಾಗುತ್ತಿರುವ ಬೆನ್ನಲ್ಲೆ ರಾಜ್ಯ ಸರಕಾರದ ಮೂಲ ಸೌಕರ್ಯಗಳನ್ನು ಒದಗಿಸುವ ಯೋಜನೆಯಡಿ ರಾಜಕೀಯ ಹಸ್ತಕ್ಷೆಪ ಆಗುತ್ತಿದೆ ಎಂಬುದು ಬೆಳಕಿಗೆ ಬಂದಿದೆ.
ಬಿಜೆಪಿ ಸರಕಾರದ ಅವಧಿಯಲ್ಲಿ ಆದಿಜಾಂಬವ, ಡಾ. ಬಿ.ಆರ್. ಅಂಬೇಡ್ಕರ್, ಶ್ರೀ ವಾಲ್ಮಿಕಿ ನಿಗಮಗಳಲ್ಲಿ ಪ್ರತಿ ಕ್ಷೇತ್ರದಲ್ಲಿ ನೂರಾರು ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಗ್ಯಾರಂಟಿಗಳ ಸೋಗಿನಲ್ಲಿರುವ ಈ ಸರ್ಕಾರ ಒಂದು ಕ್ಷೇತ್ರಕ್ಕೆ ಒಂದು ಎರಡು ಅಥವಾ ಮೂರು ಘಟಕಗಳನ್ನು ನೀಡುತ್ತಿರುವುದು ಬಹಳ ಶೋಚನಿಯ ಸ್ಥಿತಿ ಇದ್ದು ಬಡ ಕುಟುಂಬಗಳ ಬದುಕಿನ ಮೇಲೆ ಬರೆ ಎಳೆದಂತಾಗಿದ್ದು ಹಲವು ವರ್ಷಗಳಿಂದ ಕನಸು ಕಟ್ಟಿಕೊಂಡವರು ಆತಂಕಕ್ಕೆ ಸಿಲುಕುವಂತಾಗಿದೆ.
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ
ಗಂಗಾ ಕಲ್ಯಾಣ, ನೇರ ಸಾಲ ಯೋಜನೆಗಳು
ಪರಿಶಿಷ್ಟ ಜಾತಿ, ಪಂಗಡದ ಸಣ್ಣ ಮತ್ತು ಅತೀ ಸಣ್ಣ ರೈತರ ಖುಷ್ಕಿ ಜಮೀನಿನಲ್ಲಿ ಕೊಳವೆ ಬಾವಿ ಕೊರೆದು ಪಂಪ್ ಮೋಟಾರ್ ಅಳವಡಿಸಿ, ವಿದ್ಯುದ್ದಿಕರಣಗೊಳಿಸಿ ನೀರಾವರಿ ಸೌಲಭ್ಯ ಒದಗಿಸಲಾಗುವ ಗಂಗಾ ಕಲ್ಯಾಣ ಯೋಜನೆ ಹಾಗೂ ನಿರುದ್ಯೋಗಿಗಳು ಕೈಗಾಡಿಗಳನ್ನು ಖರೀದಿಸಿ ಮತ್ತು ರೈತರಿಂದ ತರಕಾರಿ, ಹಣ್ಣುಗಳನ್ನು ಖರೀದಿ ಮಾಡಿ ತಳ್ಳುವ ಗಾಡಿ ಮೂಲಕ ಮಾರಾಟ ಮಾಡಿ ಸ್ವಯಂ ಉದ್ಯೋಗ ಕೈಗೊಂಡು ಆದಾಯ ಗಳಿಸಲು ಅವಶ್ಯವಿರುವ ಸಾಲ ಮತ್ತು ಸಹಾಯಧನವನ್ನು ನಿಗಮದಿಂದ ನೇರ ಸಾಲ ಮಂಜೂರು ಯೋಜನೆ, ಐಎಸ್‌ಬಿ ಯೋಜನೆಯಲ್ಲಿ ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಘಟಕ ವೆಚ್ಚದ ಶೆ.೭೦ರಷ್ಟು ಅಥವಾ ಗರಿಷ್ಠ ರೂ. ೨ ಲಕ್ಷಗಳವರೆಗೆ ಸಹಾಯಧನ ಮಂಜೂರು ಮಾಡಿ ಬ್ಯಾಂಕ್ ಸಹಯೋಗದೊಂದಿಗೆ ಯೋಜನೆಯನ್ನು ಅನುಷ್ಠಾನಗೊಳಿಸುವ ಯೋಜನೆ ಮತ್ತು ಉದ್ಯಮ ಶೀಲತಾ ಅಭಿವೃದ್ಧಿ ಸ್ವಾವಲಂಬಿ ಸಾರಥಿ (ಸರಕು/ಟ್ಯಾಕ್ಸಿ) ಯೋಜನೆಯಡಿ ೪ ಚಕ್ರದ ವಾಹನಗಳಿಗೆ ಘಟಕ ವೆಚ್ಚದ ಶೆ.೭೫ರಷ್ಟು ಅಥವಾ ಗರಿಷ್ಠ ರೂ.೪.೦೦ ಲಕ್ಷಗಳವರೆಗೆ ಸಹಾಯಧನವನ್ನು ಮಂಜೂರು ಮಾಡಿ ಬ್ಯಾಂಕ್ ಸಹಯೋಗದೊಂದಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವ ಯೋಜನೆಗಳು ಜಾರಿಯಲ್ಲಿದ್ದವು ಆದರೆ ಈಗಲೂ ಯೋಜನೆಗಳು ಜಾರಿಯಲ್ಲಿದ್ದರೂ ಕೂಡ ಫಲಾನುಭವಿಗಳ ಸಂಖ್ಯೆ ಗಣನೀಯ ಮಟ್ಟದಲ್ಲಿ ಕಡಿಮೆ ಆಗಿರೋದು ಸರ್ಕಾರದಲ್ಲಿ ಆರ್ಥಿಕ ಪರಿಸ್ಥಿತಿ ಬಹಳ ಕೆಟ್ಟದಾಗಿದೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ ಎಂದು ಶಾಸಕ ಬಿ.ಸುರೇಶ್ ಗೌಡ ಹೇಳಿದರು.
ಬರುವಂಥ ವಿಧಾನಸಭೆಯ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ ದಲಿತರಿಗೆ ಹೆಚ್ಚು ಸೌಲಭ್ಯಗಳನ್ನು ಒದಗಿಸಿ ಕೊಡುವಂತೆ ಆಗ್ರಹಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಹೊಳಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಂಜಿನಪ್ಪ ಊರುಕೆರೆಯ ವಿಜಯ್ ಕುಮಾರ್ ಯಲ್ಲಾಪುರ ರಮೇಶ್, ಹಮೀದ್, ಹೊನ್ನುಡಿಕೆ ಕಿಟ್ಟಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಮಕೃಷ್ಣ (ಅಪ್ಪಿ) ಶಿವರಾಜು ನಾಗವಲ್ಲಿ ಪಾಪಣ್ಣ ಸೇರಿದಂತೆ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು
(Visited 1 times, 1 visits today)