
ತುರುವೇಕೆರೆ: ೨೦೨೫-೨೬ನೇ ಸಾಲಿನ ತಾಲ್ಲೂಕಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಪಟ್ಟಣದ ಎನ್.ಎಚ್.ಪಿ.ಎಸ್ ಶಾಲೆಯಲ್ಲಿನ ಮಕ್ಕಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ ಹೂಗುಚ್ಚ ನೀಡುವ ಮೂಲಕ ಶುಕ್ರವಾರ ಚಾಲನೆ ನೀಡಿದರು.
ಮಕ್ಕಳ ಶೈಕ್ಷಣಿಕ ಹಿತ ದೃಷ್ಟಿಯಿಂದ ಇಲ್ಲಿನ ಮುಖ್ಯಶಿಕ್ಷಕರು ಎಲ್.ಕೆ.ಜಿ ಮತ್ತು ಯು.ಕೆ.ಜಿಯನ್ನು ಎಸ್.ಡಿ.ಎಂಸಿ ಸದಸ್ಯರು, ಇಲಾಖೆಯ ಸಹಮತದಲ್ಲಿ ಪ್ರಾರಂಭಿಸಿದ್ದಾರೆ. ಇದರ ಜೊತೆಗೆ ೬ ಮತ್ತು ೭ ತರಗತಿಗಳಿಗೂ ಆಂಗ್ಲಮಾಧ್ಯಮ ನೀಡ ಬೇಕೆಂಬ ಮನವಿಯೂ ಸಹ ಬಂದಿದೆ. ಅದನ್ನೂ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಪಟ್ಟಣ ಪಂಚಾಯಿತಿಯಿAದ ಶೌಚಾಲಯವನ್ನು ನಿರ್ಮಿಸಿದ್ದಾರೆ. ವಿವೇಕ ಯೋಜನೆಯಡಿ ನೂತನ ಕೊಠಡಿಯನ್ನು ಸಹ ನಿರ್ಮಾಣ ಮಾಡಿಕೊಡಲಾಗಿದೆ ಎಂದರು.
ಶಿಕ್ಷಕರು, ಪೋಷಕರು ಮತ್ತು ಅಧಿಕಾರಿಗಳ ಪರಿಶ್ರಮದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲೇ ತುರುವೇಕೆರೆ ಸತತ ಎರಡನೇ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿ. ಈಗಾಗಲೇ ತಾಲ್ಲೂಕಿನ ಪ್ರಾಥಮಿಕ, ಪ್ರೌಢ ಶಾಲೆ, ಅನುಧಾನಿತ ಮತ್ತು ಖಾಸಗಿ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಲಾಗಿದ್ದು. ದಾಖಲಾತಿ ಹಾಜರಾತಿ ಹೆಚ್ಚಿಸುವಂತೆ ಕ್ರಮ ವಹಿಸಲಾಗಿದೆ.
ಈ ಬಾರಿ ಸರ್ಕಾರಿ ಶಾಲೆಗಳ ಎಸ್.ಎಸ್.ಎಲ್.ಸಿ ಫಲಿತಾಂಶ ಉನ್ನತಮಟ್ಟದಲ್ಲಿದೆ. ಸರ್ಕಾರಿ ಶಾಲೆಯಲ್ಲಿ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಸ್ಕಾಲರ್ ಶಿಫ್, ಶೂ ಸಾಕ್ಸ್,, ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ, ಹಾಲು ಸೇರಿದಂತೆ ಹಲವು ಯೋಜನೆಗಳನ್ನು ಸರ್ಕಾರ ನೀಡುತ್ತಿದೆ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿರುವುದರಿಂದ ದಿನೇ ದಿನೇ ಸರ್ಕಾರಿ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ.
ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿ ಪ್ರತಿ ಮಕ್ಕಳಿಗೂ ಹೂವು, ಸಿಹಿ ಪದಾರ್ಥ, ಸಮವಸ್ತ್ರ ಮತ್ತು ವರ್ಣ ರಂಜಿತ ಬಲೂನ್ ಗಳನ್ನು ನೀಡುವ ಮೂಲಕ ಮಕ್ಕಳು ಖುಷಿಯಿಂದ ಶಾಲೆಗೆ ಬರುವಂತೆ ಮಾಡಲಾಗಿದೆ. ಮೊದಲ ದಿನವೇ ಮಕ್ಕಳಿಗೆ ಸಿಹಿ ನೀಡುವುದರೊಂದಿಗೆ ಮಧ್ಯಾಹ್ನದ ಬಿಸಿಯೂಟ ಆರಂಭಿಸಲಾಗಿದೆ.
ತಾಲ್ಲೂಕು ಅಕ್ಷರದಾಸೋಹದ ಸಹಾಯಕ ನಿರ್ದೇಶಕಿ ಎಚ್.ಕೆ.ಸವಿತ ಮಾತನಾಡಿ, ಎನ್.ಎಚ್.ಪಿ.ಎಸ್ ಶಾಲೆಯ ಸುತ್ತ ಮುತ್ತಲೂ ಐತಿಹಾಸಿಕ ದೇವಾಲಯಗಳಿವೆ ಹಾಗಾಗಿ ಇದೊಂದು ಆಧ್ಯಾತ್ಮಕ ನೆಲೆಯಾಗಿದ್ದು ಮಕ್ಕಳ ಕಲಿಗೆ ಉತ್ತಮ ವಾತಾವರಣವಿದೆ. ಪ್ರಸ್ತಕ ಸಾಲಿನಲ್ಲಿ ‘ಎರಡು ವರ್ಷ ಶಿಕ್ಷಣದಲ್ಲಿ ಹರುಷ’ ಎಂಬ ಘೋಷ ವಾಕ್ಯದೊಂದಿಗೆ ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳನ್ನು ರೂಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ವಪ್ನಾ ನಟೇಶ್, ಮುಖ್ಯ ಶಿಕ್ಷಕರಾದ ನಂರಾಜು ಮುನಿಯೂರು, ಎಸ್.ಡಿ.ಎಂ.ಸಿ ಅಧ್ಯಕ್ಷ ಶಂಕರ್, ಬಿಆರ್.ಸಿ ಅಧಿಕಾರಿ ಸುರೇಶ್, ಬಿಆರ್.ಪಿ ಸುರೇಶ್, ಪ್ರಾಥಮಿ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಷಣ್ಮುಖಪ್ಪ, ಶಿಕ್ಷಕರುಗಳಾದ ನೇತ್ರಾವತಿ, ಪುಷ್ಪಾವತಿ, ಸವಿತ, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತಿದ್ದರು.





