ತುಮಕೂರು: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿಯಲ್ಲಿ ಗಣತಿದಾರರು ಮಾದಿಗ ಸಮುದಾಯವನ್ನು ಎಕೆ, ಎಡಿ, ಎಎ ಎಂದು ನಮೂದು ಮಾಡಿರುವುದರಿಂದ ಮಾದಿಗ ಸಮುದಾಯದ ಕಾಲೋನಿಗಳಲ್ಲಿ ಮರು ಸಮೀಕ್ಷೆ ನಡೆಸುವಂತೆ ಒಳಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ ಒತ್ತಾಯಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕೊರಟಗೆರೆ, ಮಧುಗಿರಿ, ತುರುವೇಕೆರೆ, ಚಿಕ್ಕನಾಯಕನಹಳ್ಳಿ ಹಾಗು ಶಿರಾ ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶಿಷ್ಠ ಜಾತಿ ಮುಖಂಡರೊ0ದಿಗೆ ಚರ್ಚಿಸಿದಾಗ ಸಮೀಕ್ಷೆಯಲ್ಲಿ “ಮಾದಿಗ” ಗುಂಪಿನ ಕುಟುಂಬಗಳು “ಆದಿಕರ್ನಾಟಕ” ಎಂದು ನಮೂದು ಮಾಡಿದ್ದಾರೆ ಎಂದು ತಿಳಿಸಿದರು.
ಗಣತಿದಾರರು ವಿದ್ಯಾವಂತರಿಲ್ಲದಾಗ ಕುಟುಂಬದ ಮಾಹಿತಿಯನ್ನು ಪಡೆದು ಸಮೀಕ್ಷೆಯನ್ನು ತರಾತುರಿಯಲ್ಲಿ ಪೂರ್ಣಗೊಳಿಸುತ್ತಿದ್ದು, ನ್ಯಾ.ನಾಗಮೋಹನದಾಸ್ ಅವರ ವರದಿಯಲ್ಲಿ ನಮೂದಾಗಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆದಿ ಕರ್ನಾಟಕ ಎಂದು ಸಮೀಕ್ಷೆಯ ವೇಳೆ ಗಣತಿದಾರರು ನಮೂದು ಮಾಡಿರುವುದು ಜಿಲ್ಲೆಯಲ್ಲಿ ಕಂಡು ಬಂದಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಮನೆ ಬಾಗಿಲಿಗೆ ಗುರುತಿನ ಚೀಟಿ ಅಂಟಿಸಿಲ್ಲದ ಕಾರಣಕ್ಕೆ ಅಂತಹ ಮನೆಗಳನ್ನು ಕೈಬಿಟ್ಟು ಗಣತಿಕಾರ್ಯ ಮಾಡಲಾಗಿದೆ. ಬಿಪಿಎಲ್ ಕಾರ್ಡ್ನಲ್ಲಿ ಹೆಸರು ಸೇರಿಲ್ಲದವರ ಮಾಹಿತಿಯ ಗಣತಿಯನ್ನೇ ನಿರಾಕರಿಸಿರುವ ಘಟನೆಗಳು ನಡೆದಿದ್ದು, ಗಣತಿದಾರರು ಸಮೀಕ್ಷೆಯಲ್ಲಿ ಜಾತಿ ಕಾಲಂನಲ್ಲಿ ‘ಬಿ-೦೬೧’ ನಲ್ಲಿ ಮಾದಿಗ ಜಾತಿ ನಮೂದಾಗಿದ್ದರು ಬಹುತೇಕ ಕಡೆ ಆದಿಕರ್ನಾಟಕವೆಂದು ದಾಖಲಿಸಿರುವುದರಿಂದ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದರು.
ಕೊರಟಗೆರೆ, ಮಧುಗಿರಿ, ತುರುವೇಕೆರೆ, ಚಿಕ್ಕನಾಯನಹಳ್ಳಿ, ಬಹಳಷ್ಟು ಹಳ್ಳಿಗಳಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಜಾತಿಗಣತಿಯಲ್ಲಿ ಮಾದಿಗರೆಂದು ಬರೆಸಲಾಗಿರುವ ಶೇ.೭೫ರಿಂದ ೮೫ರಷ್ಟು ಕುಟುಂಬಗಳು ಈಗ ಆದಿಕರ್ನಾಟಕ ಎಂದು ತಪ್ಪಾಗಿ ಬರೆಸಿದ್ದಾರೆ. ಈ ವ್ಯತ್ಯಾಸಗಳ ಬಗ್ಗೆ ಗಣತಿದಾರರನ್ನು ಪ್ರಶ್ನಿಸಿದಾಗ ಮನೆ ಮುಖ್ಯಸ್ಥರ ಹೇಳಿಕೆಯಂತೆ ಮಾತ್ರ ಜಾತಿ ದಾಖಲಿಸಿ ಎಂದು ನಮಗೆ ಸ್ಪಷ್ಟ ನಿರ್ದೇಶನವಿದೆ ಎಂದು ಹೇಳಿ ಕೈ ಚೆಲ್ಲುತ್ತಿದ್ದಾರೆ ಎಂದು ದೂರಿದರು.
ಜಾತಿಯನ್ನು ನಮೂದಿಸಿರುವ ಬಗ್ಗೆ ಮಾಹಿತಿಯ ದಾಖಲೆ ಕೇಳಿದರೆ/ ಒತ್ತಾಯಿಸಿದರೆ ನೀವೆ ಆನ್‌ಲೈನ್‌ನಲ್ಲಿ ಸ್ವತಂತ್ರವಾಗಿ ಮಾಹಿತಿಯನ್ನು ದಾಖಲಿಸಬಹುದೆಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಜೊತೆಗೆ ನಮಗೆ ಇಂತಿಷ್ಟು ಮನೆಗಳ ದಾಖಲೀಕರಣ ಮಾಡಲೇಬೇಕೆಂದು ಕಾಲಮಿತಿಯನ್ನು ಹೇರಿದ್ದಾರೆಂದು ಸಮೀಕ್ಷೆಯನ್ನು ತರಾತುರಿಯಲ್ಲಿ ಪೂರ್ಣಗೊಳಿಸುವ ಆತುರತೆಯನ್ನು ಗಣತಿದಾರರು ವ್ಯಕ್ತಪಡಿಸುತ್ತಿದ್ದಾರೆ ಎಂದರು.
ತರಾತುರಿಯಲ್ಲಿ ಸಮೀಕ್ಷೆ ನಡೆಸುತ್ತಿರುವುದರಿಂದ ಗಣತಿದಾರರಿಗೆ ಸರಿಯಾದ ತರಬೇತಿ ನೀಡದೇ ಇರುವುದರಿಂದ ಸಾಕಷ್ಟು ಸಮಸ್ಯೆಗಳಾಗುತ್ತಿರುವುದರಿಂದ ಆಯೋಗ ಮತ್ತು ಜಿಲ್ಲಾಡಳಿತ ಮಾದಿಗ ಸಮುದಾಯದ ಕಾಲೋನಿಗಳಲ್ಲಿ ಮರು ಸಮೀಕ್ಷೆ ನಡೆಸಬೇಕು, ಇಲ್ಲವಾದಲ್ಲಿ ಜಿಲ್ಲೆಯ ಎಲ್ಲಾ ಮಾದಿಗ ಸಮುದಾಯಗಳು ಆದಿ ಕರ್ನಾಟಕ ಎಂದು ಗುರುತಿಸಿಕೊಂಡು ಜಾತಿ ಪ್ರಮಾಣಪತ್ರ ಪಡೆಯುತ್ತಿರುವುದರಿಂದ ಸಮೀಕ್ಷೆಯಲ್ಲಿ ನಮೂದಾಗಿರುವ ಆದಿಕರ್ನಾಟಕ ಜಾತಿಯನ್ನು ಮಾದಿಗ ಜಾತಿ, ಉಪಜಾತಿ ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ನಗರಸಭೆ ಮಾಜಿ ಸದಸ್ಯ ಹನುಮಂತರಾಯಪ್ಪ, ಟೂಡಾ ಮಾಜಿ ಸದಸ್ಯ ಜಯಮೂರ್ತಿ, ನರಸಿಂಹಯ್ಯ, ದೊಡ್ಡೇರಿ ಕಣಿಮಯ್ಯ, ಮಹಾಲಿಂಗಯ್ಯ, ಹನುಮಂತರಾಯಪ್ಪ, ಜಯಶೀಲ, ಯಲ್ಲಾಪುರ ರಮೇಶ್, ಮೂರ್ತಿ ಸೇರಿದಂತೆ ಇತರರು ಇದ್ದರು.
(Visited 1 times, 1 visits today)