ತುಮಕೂರು: ಜಿಲ್ಲೆಯ ೧೦ ತಾಲೂಕುಗಳಲ್ಲಿ ೪೦ ನೀರಿನ ಮೂಲಗಳ ಮಾದರಿಗಳನ್ನು ಜೈವಿಕ ಪರೀಕ್ಷೆಗೊಳಪಡಿಸಲಾಗಿದ್ದು, ಪರೀಕ್ಷೆಯಲ್ಲಿ ೧೯ ಮಾದರಿಗಳು ಕುಡಿಯಲು ಯೋಗ್ಯವಲ್ಲವೆಂದು ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಪತ್ತು ನಿರ್ವಹಣಾ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿ ೯, ಸಿರಾ-೬, ತುಮಕೂರು-೩ ಮತ್ತು ಗುಬ್ಬಿ-೧ ನೀರಿನ ಮೂಲಗಳು ಕುಡಿಯಲು ಯೋಗ್ಯವಿಲ್ಲವೆಂದು ವರದಿ ಬಂದಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕುಡಿಯಲು ಯೋಗ್ಯವಲ್ಲದ ನೀರಿನ ಮೂಲಗಳಿಂದ ಸರಬರಾಜು ಮಾಡಬಾರದು ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅಮೃತ್ ಮತ್ತು ಜಲ್ ಜೀವನ್ ಮಿಷನ್ ಯೋಜನೆಗಳಡಿ ನಡೆಯುತ್ತಿರುವ ಕಾಮಗಾರಿಗಳ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದರಲ್ಲದೆ, ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವ ಎಲ್ಲ ಕೊಳವೆಬಾವಿಗಳಲ್ಲಿ ಕಡ್ಡಾಯವಾಗಿ ಕ್ಲೋರಿನೇಷನ್ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಸೂಚಿಸಿದರು.
ನಗರದಲ್ಲಿನ ಎಲ್ಲಾ ಸರ್ಕಾರಿ ವಿದ್ಯಾರ್ಥಿನಿಲಯಗಳು ಹಾಗೂ ಪ್ರಾಥಮಿಕ ಶಾಲೆಗಳಿಗೆ ಪೂರೈಕೆ ಮಾಡುವ ಕುಡಿಯುವ ನೀರನ್ನು ನಿಯಮಿತವಾಗಿ ಪರೀಕ್ಷೆಗೊಳಪಡಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಮಳೆಯಿಂದಾಗಿ ಈಗಾಗಲೇ ಸಂಭವಿಸಿರುವ ಮನೆ, ಬೆಳೆ ಹಾಗೂ ಪಶು ಹಾನಿ ಪ್ರಕರಣಗಳ ಕುರಿತು ಮಾಹಿತಿ ನೀಡಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸೊಳ್ಳೆ ನಿಯಂತ್ರಿಸಲು ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರತೀ ದಿನ ಧೂಮೀಕರಣ ಕೈಗೊಳ್ಳಬೇಕು. ನಗರ ಪ್ರದೇಶಗಳಲ್ಲಿ ಯಾವುದೇ ರೀತಿ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಂಜೀವಪ್ಪ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಮೇಶ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಾರದಮ್ಮ, ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ ಸೇರಿದಂತೆ ಮತ್ತಿತರರು ಅಧಿಕಾರಿಗಳು ಉಪಸ್ಥಿತರಿದ್ದರು.
(Visited 1 times, 1 visits today)