
ಹುಳಿಯಾರು: ಈ ವರ್ಷ ಹಿಂಗಾರು ಹಂಗಾಮಿನಲ್ಲಿ ಉತ್ತಮವಾಗಿ ಮಳೆ ಸುರಿದ ಪರಿಣಾಮ ರೈತರು ಬಂಪರ್ ರಾಗಿ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ರಾಗಿ ತೆನೆ ಕಟ್ಟಿದ್ದು, ಕಾಳು ಬಲಿಯುವ ಹಂತದಲ್ಲಿದೆ. ಕೆಲವು ಕಡೆ ರಾಗಿ ಕಟಾವಿಗೆ ಬಂದಿದ್ದು ರೈತರಿಗೆ ಹರ್ಷ ತಂದಿದೆ.
ಕಳೆದ ವರ್ಷವೂ ಸಹ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಬಂಪರ್ ಬೆಳೆಯಾಗಿತ್ತು. ಪರಿಣಾಮ ಈ ವರ್ಷವೂ ಸಹ ರೈತರು ಉತ್ಸಾಹದಿಂದ ರಾಗಿ ಬಿತ್ತಿದ್ದರು. ಪರಿಣಾಮ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ತಾಲೂಕಿನ ಗುರಿ ಮೀರಿ ಬಿತ್ತನೆಯ ಪ್ರಗತಿಯಾಗಿದೆ. ಆದರೆ ಸೆಪ್ಟೆಂಬರ್ ಮಾಹೆಯಲ್ಲಿ ಒಂದೇ ಒಂದು ಹನಿ ಮಳೆ ನೀರು ಭೂ ರಮೆಯ ತಣಿಸದೆ ರೈತನಿಗೆ ಆಘಾತ ನೀಡಿತ್ತು. ತೇವಾಂಶದ ಕೊರತೆಯುಂಟಾಗಿ ಬೆಳೆ ಹಾನಿಯ ಭೀತಿ ಎದುರಾಗಿತ್ತು. ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ಸಾಲ, ಸೋಲ ಮಾಡಿ ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡಿದ್ದ ರೈತ ಚಿಂತಾಕ್ರಾ0ತರಾನ್ನಾಗಿಸಿತ್ತು.
ಅದೃಷ್ಟವಶತ್ ರಾಗಿ ಕಾಳು ಕಟ್ಟುವ ಹಂತದಲ್ಲಿದ್ದ ಸಂದರ್ಭದಲ್ಲಿ ಉತ್ತಮ ಮಳೆಯಾಯಿತು. ಇಡೀ ವಾರ ತುಂತುರು ಮಳೆಯಾದ ಪರಿಣಾಮ ಒಣಗುತ್ತವೆ ಎನ್ನುತ್ತಿದ್ದ ರಾಗಿ ಸಹ ನಳನಳಿಸುವಂತಾಯಿತು. ರಾಗಿ ಬೆಳೆಯಲ್ಲಿ ಮುಷ್ಟಿ ಗಾತ್ರದ ದಪ್ಪ ತೆನೆಗಳಿದ್ದು, ಎಕರೆಗೆ ೮ ರಿಂದ ೧೦ ಕ್ವಿಂಟಲ್ ಇಳುವರಿ ನಿರೀಕ್ಷಿಸಲಾಗುತ್ತಿದೆ. ರಾಗಿ ಬೆಳೆ ೪ ರಿಂದ ೫ ಅಡಿ ಎತ್ತರ ಬೆಳೆದಿದ್ದು, ಉತ್ತಮ ಮೇವೂ ಸಹ ಈ ವರ್ಷ ರೈತನಿಗೆ ಸಿಗಲಿದೆ.
ತಾಲೂಕಿನಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಸಹ ರಾಗಿ ಬಂಪರ್ ಬೆಳೆಯಾಗುವುದರಿಂದ ಪಕ್ಕದ ತಮಿಳುನಾಡಿನಿಂದ ಈಗಾಗಲೇ ನೂರಾರು ರಾಗಿ ಕಟಾವು ಯಂತ್ರಗಳು ಬಂದಿವೆ. ಪಂಚಾಯ್ತಿಗೆ ಹತ್ತದಿನೈದರಂತೆ ರಾಗಿ ಕಟಾವು ಯಂತ್ರಗಳು ನಿಂತಿದ್ದು ಹೊಲಗಳಿಗೆ ಹೋಗಿ ರೈತರನ್ನು ಭೇಟಿ ಮಾಡಿ ರಾಗಿ ಕಟಾವು ದಿನಾಂಕಗಳ ನಿಗದಿ ಮಾಡಿಕೊಳ್ಳುತ್ತಿದ್ದಾರೆ.
ಅಲ್ಲದೆ ಎಪಿಎಂಸಿಯ ರಾಗಿ ಖರೀದಿ ಕೇಂದ್ರದಲ್ಲೂ ಸಹ ರಾಗಿ ಮಾರಾಟಕ್ಕೆ ರೈತರು ಸರತಿ ಸಾಲಿನಲ್ಲಿ ನಿಂತು ಗ್ರೀನ್ ವೋಚರ್ ಪಡೆಯುತ್ತಿದ್ದಾರೆ. ವಾರ್ತಕರೂ ಸಹ ತಮ್ಮ ಆತ್ಮೀಯ ರೈತರಿಗೆ ದೂರವಾಣಿ ಕರೆ ಮಾಡಿ ನಮ್ಮಲ್ಲೇ ರಾಗಿ ಬಿಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಒಟ್ಟಾರೆ ಈ ವರ್ಷದ ರಾಗಿ ಬೆಳೆಯಿಂದ ರೈತರು ಮತ್ತು ವರ್ತಕರಲ್ಲಿ ಸಂಭ್ರಮ ಮನೆಮಾಡಿದಂತಾಗಿದೆ.





