
ತುಮಕೂರು: ನಗರದ ಗಾರ್ಡನ್ ರಸ್ತೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಈ ತಿಂಗಳ ೧೬ರಿಂದ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ, ಮಕರಜ್ಯೋತಿ ಮತ್ತು ಮಕರ ಸಂಕ್ರಾ0ತಿ ಪೂಜೆಗಳು ಆರಂಭವಾಗಲಿವೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷರಾದ ಟಿ.ಬಿ.ಶೇಖರ್ ಹೇಳಿದರು.
ಈ ಸಂಬ0ಧ ಗುರುವಾರ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ೧೬ರಂದು ಸಂಜೆ ೫.೩೦ಕ್ಕೆ ಅಯ್ಯಪ್ಪ ಸ್ವಾಮಿಯ ಮಂಡಲ ಪೂಜೆ ಸಂದರ್ಭದಲ್ಲಿ ಕವಿ ರಮೇಶ್ ನಂದಿಕೋಲು ರಚಿಸಿ, ಗಾಯಕ ಪೊಲೀಸ್ ರಮೇಶ್ ಧ್ವನಿ ನೀಡಿರುವ ಅಯ್ಯಪ್ಪ ಸ್ವಾಮಿ ಭಕ್ತಿ ಗೀತೆಗಳ ಶ್ರೀ ಶಾಸ್ತ ಗಾನಾಮೃತ ಎಂಬ ಅಯ್ಯಪ್ಪ ಸ್ವಾಮಿ ಭಕ್ತಿಗೀತೆಗಳ ಧ್ವನಿಸುರುಳಿ ಬಿಡುಗಡೆ ಮಾಡಲಾಗುತ್ತದೆ ಎಂದರು.
ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಂಡಲ ಪೂಜಾ ಮಹೋತ್ಸವ ಉದ್ಘಾಟನೆ ನೆರವೇರಿಸಿದರೆ ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಧ್ವನಿಸುರುಳಿ ಬಿಡುಗಡೆ ಮಾಡುವರು. ಹಿಂದೂಸ್ತಾನಿ ಗಾಯಕ ಸಿದ್ಧೇಂದ್ರಕುಮಾರ್ ಹಿರೇಮಠ್, ಅಡಿಷನಲ್ ಎಸ್ಪಿಗಳಾದ ಸಿ.ಗೋಪಾಲ್, ಪುರುಷೋತ್ತಮ್, ಡಿವೈಎಸ್‌ಪಿ ಕೆ.ಆರ್.ಚಂದ್ರಶೇಖರ್, ಸ್ಫೂರ್ತಿ ಡೆವಲಪರ್ಸ್ ಮಾಲೀಕ ಎಸ್.ಪಿ.ಚಿದಾನಂದ್, ಶಬರಿಮಲ ಅಯ್ಯಪ್ಪ ಸೇವಾ ಸಮಾಜಂ ದಕ್ಷಿಣ ಪ್ರಾಂತೀಯ ಕಾರ್ಯದರ್ಶಿ ಎಸ್.ಎನ್.ಕೃಷ್ಣಯ್ಯ ಮೊದಲಾದವರು ಭಾಗವಹಿಸುವರು ಎಂದು ಟಿ.ಬಿ.ಶೇಖರ್ ಹೇಳಿದರು.
ಶಬರಿಮಲೈ ಯಾತ್ರೆ ಮಾಡುವವ ಭಕ್ತರಿಗೆ ಈ ತಿಂಗಳ ೧೭ರಿಂದ ದೇವಾಲಯದಲ್ಲಿ ಮಾಲೆ ಹಾಕುವ, ಇರುಮುಡಿ ಕಟ್ಟುವ ವ್ಯವಸ್ಥೆ ಮಾಡಲಾಗಿದೆ. ಮಂಡಲ ಪೂಜೆ ಅಂಗವಾಗಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ, ಧ್ವಜಸ್ತಂಭದ ಪೂಜೆ, ತೆಪ್ಪೋತ್ಸವ, ಮಂಡಲ ಉತ್ಸವ, ಮಕರಜ್ಯೋತಿ ಪೂಜೆ, ಸ್ವಾಮಿಗೆ ತುಪ್ಪಾಭಿಷೇಕ ಮುಂತಾದ ಪೂಜಾಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ವೇಳೆ ಶಬರಿಮಲ ಅಯ್ಯಪ್ಪ ಸೇವಾ ಸಮಾಜಂ ದಕ್ಷಿಣ ಪ್ರಾಂತೀಯ ಕಾರ್ಯದರ್ಶಿ ಎಸ್.ಎನ್.ಕೃಷ್ಣಯ್ಯ, ಗಾಯಕ ಪೊಲೀಸ್ ರಮೇಶ್, ಕವಿ ರಮೇಶ್ ನಂದಿಕೋಲು, ಭೀಮರಾಜು ಮೊದಲಾದವರು ಭಾಗವಹಿಸಿದ್ದರು.



