
ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಸುಮಾರು ೨೯ ಕೆರೆಗಳಿಗೆ ನೀರು ಬಿಡುವ ಏತ ನೀರಾವರಿ ಯೋಜನೆಗೆ ಸರ್ಕಾರ ಹೆಚ್ಚುವರಿ ಅನುದಾನ ಮಂಜೂರು ಮಾಡಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರ ಅವರು ನೀರಾವರಿಯಿಂದ ವಂಚಿತರಾಗಿರುವ ದಬ್ಬೇಘಟ್ಟ ಹೋಬಳಿಯ ಜನರಿಗೆ ಈ ಕಾಮಗಾರಿ ಆದಲ್ಲಿ ಬಹುಪಾಲು ನೀರಿನ ಸಮಸ್ಯೆಯನ್ನು ಬಗೆಹರಿಸಿದಂತಾಗುತ್ತದೆ. ಈಗಾಗಲೇ ಮಲ್ಲಾಘಟ್ಟ ಕೆರೆಯಿಂದ ಕಾಮಗಾರಿ ಆರಂಭವಾಗಿದೆ. ಮಲ್ಲಾಘಟ್ಟದ ಬಳಿ ಜಾಕ್ವೆಲ್ ನಿರ್ಮಿಸಲಾಗಿದೆ. ಅಲ್ಲಿಂದ ನೀರು ಹರಿಸುವ ಸಲುವಾಗಿ ಪೈಪ್ ಲೈನ್ ಕಾಮಗಾರಿ ಪ್ರಾರಂಭ ಮಾಡಲಾಗಿದೆ. ಈಗಾಗಲೇ ವೈಟಿ ರಸ್ತೆ ವರೆಗೆ ಪೈಪ್ ಲೈನ್ ಕಾಮಗಾರಿ ಮುಗಿದಿದೆ. ಒಟ್ಟು ೪೮ ಕೋಟಿ ಯೋಜನೆಗೆ ಸರ್ಕಾರ ಕೇವಲ ೯ ಕೋಟಿಯಷ್ಟು ಹಣ ಮಾತ್ರ ಬಿಡುಗಡೆಗೊಳಿಸಿದೆ. ಉಳಿದ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆ ಚಾಲನೆಯಲ್ಲಿದೆ. ತಿಪಟೂರು, ಗುಬ್ಬಿ ತಾಲ್ಲೂಕಿನಲ್ಲಿ ಕಾಮಗಾರಿ ಮಾಡಲು ತಲಾ ೫೦ ಕೋಟಿ ನೀಡಲಾಗಿದೆ. ಆದರೆ ತುರುವೇಕೆರೆಗೆ ಕೇವಲ ೩೦ ಕೋಟಿ ನೀಡಲಾಗಿದೆ. ಇದು ತಾರತಮ್ಯ. ಈ ಬಗ್ಗೆ ಉಪ ಮುಖ್ಯಮಂತ್ರಿಗಳನ್ನು ಕೇಳಿದರೆ, ಲಿಂಕ್ ಕೆನಾಲ್ ಗೆ ತಡೆ ಒಡ್ಡದಿದ್ದರೆ ೫೦ ಕೋಟಿ ಕೊಡ್ತೇನೆ ಎಂದು ಆಮಿಷ ಒಡ್ಡುತ್ತಾರೆ. ಇದು ಸರಿಯಲ್ಲ. ನಮಗೆ ಜಿಲ್ಲೆಯ ರೈತ ಹಿತ ಮುಖ್ಯವೇ ಹೊರೆತು ಅವರು ನೀಡುವ ಆಮಿಷವಲ್ಲ. ಅವರ ದುಡ್ಡೇ ಬೇಡ. ಗಣಿಭಾದಿತ ಪ್ರದೇಶವೆಂದು ಗಣಿ ಮಾಲೀಕರು ಸುಮಾರು ೩೦೦ ಕೋಟಿ ಹಣ ನೀಡಿದ್ದಾರೆ. ಅದರಲ್ಲಿ ವಿತರಣೆ ಮಾಡಲು ಅವರಿಗೇನು ಕಷ್ಠ ಎಂದು ಕಿಡಿಕಾರಿದರು.
ತಾಲ್ಲೂಕಿನ ಮಾಯಸಂದ್ರದಿ0ದ ಕೆ.ಬಿ.ಕ್ರಾಸ್ ತನಕ ಮಾಡಲಾಗುತ್ತಿರುವ ೧೫೦ಎ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತ್ವರಿತ ತಗತಿಯಲ್ಲಿ ಸಾಗಬೇಕು. ಕೂಡಲೇ ಗ್ರಾಮಾಂತರ ಪ್ರದೇಶಗಳಲ್ಲಿ ಸರ್ವೀಸ್ ರಸ್ತೆ ಮಾಡುವ ಮೂಲಕ ಜನರಿಗೆ ಸರಾಗವಾಗಿ ಓಡಾಡಲು ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.
ರಾಷ್ಟ್ರೀಯ ಹೆದ್ದಾರಿ ೧೫೦ ಎ ಕಾಮಗಾರಿ ಮಾಡುವ ಸಂಬ0ಧ ರಸ್ತೆಯ ಅಕ್ಕಪಕ್ಕ ನೂರಾರು ವರ್ಷಗಳಿಂದ ಬೆಳೆದಿದ್ದ ನೂರಾರು ಬೃಹತ್ ಮರಗಳನ್ನು ಕಡಿಯಲಾಗಿದೆ. ಅದರಲ್ಲಿ ರಸ್ತೆ ನಿರ್ಮಾಣಕ್ಕೆ ತೊಂದರೆ ಯಾಗದಿದ್ದರೂ ಸಹ ಉತ್ತಮ ಗುಣಮಟ್ಟದ ಮರ ಎಂಬ ಕಾರಣಕ್ಕೆ ಕೊಡಲಿ ಹಾಕಲಾಗಿದೆ. ಮರ ಹರಾಜು ಪ್ರಕ್ರಿಯೆಯಲ್ಲಿ ಕೋಟಿ ಕೋಟಿ ವಂಚನೆ ಮಾಡಲಾಗಿದೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಶಾಮೀಲಾಗಿ ಲೂಟಿ ಮಾಡಿದ್ದಾರೆ. ಈ ಸಂಬ0ಧ ಜಿಲ್ಲಾ ಅರಣ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಸೂಕ್ತ ತನಿಖೆಗೆ ಆಗ್ರಹಿಸುತ್ತೇನೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್, ಎಪಿಎಂಸಿ ಮಾಜಿ ಸದಸ್ಯರಾದ ವಿಜಯೇಂದ್ರ, ಮಂಗೀಕುಪ್ಪೆ ಬಸವರಾಜು, ಅರಿಶಿನದ ಹಳ್ಳಿ ನರಸಿಂಹಮೂರ್ತಿ ಉಪಸ್ಥಿತರಿದ್ದರು.



