
ತುಮಕೂರು: ಶನಿವಾರ ಬೆಳ್ಳಂ ಬೆಳಗ್ಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ತಿಪಟೂರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ವಿದ್ಯಾರ್ಥಿ ನಿಲಯಗಳು ಮತ್ತು ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ವಚ್ಛತೆ, ಮೂಲಸೌಕರ್ಯ ಮತ್ತು ಗುಣಮಟ್ಟ ಕುರಿತು ಅಧಿಕಾರಿಗಳಿಗೆ ಕಡಕ್ ಸೂಚನೆಗಳನ್ನು ನೀಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆಗೆ ಭೇಟಿ:
ಉಪಲೋಕಾಯುಕ್ತರ ಭೇಟಿ ಹಿನ್ನೆಲೆಯಲ್ಲಿ ಎಪಿಎಂಸಿ ಅಧಿಕಾರಿಗಳು ಫುಲ್ ಅಲರ್ಟ್ ಆಗಿ, ಬೆಳ್ಳಂ ಬೆಳಗ್ಗೆ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದರು. ಉಪಲೋಕಾಯುಕ್ತರು ಸ್ಥಳಕ್ಕೆ ಭೇಟಿ ನೀಡಿದ ವೇಳೆ ರೈತರೊಂದಿಗೆ ಮಾತನಾಡಿದಾಗ ಮಾರುಕಟ್ಟೆಯ ಅವ್ಯವಸ್ಥೆ ಬಗ್ಗೆ ರೈತರು ತಮ್ಮ ಅಸಮಾಧಾನವನ್ನು ಹೊರಹಾಕುತ್ಥಾ ಇಂದು ಮಾತ್ರ ಸ್ವಚ್ಛತೆ ಇದೆ. ಉಳಿದ ದಿನಗಳಲ್ಲಿ ಇಲ್ಲಿಯ ಅನೈರ್ಮಲ್ಯತೆಯನ್ನು ಊಹಿಸಲೂ ಸಾಧ್ಯವಿಲ್ಲ. ಅಂಗಡಿಗಳನ್ನು ಅನುಕೂಲಕ್ಕೆ ತಕ್ಕಂತೆ ಹಂಚಿಕೆ ಮಾಡಿದ್ದು, ಅವರಿಗೆ ಇಷ್ಟ ಬಂದ ಹಾಗೆ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ರೈತರು ದೂರು ನೀಡಿದರು.
ರೈತರ ಅಹವಾಲು ಆಲಿಸಿದ ಉಪಲೋಕಾಯುಕ್ತರು ತಕ್ಷಣವೇ ಎಪಿಎಂಸಿ ಅಧಿಕಾರಿಗಳಿಗೆ ಅಂಗಡಿಗಳ ಹಂಚಿಕೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ಶುಲ್ಕವನ್ನು ನಿಗದಿಪಡಿಸಬೇಕು. ಮಾರುಕಟ್ಟೆಯ ಸ್ವಚ್ಛತೆಯನ್ನು ದಿನನಿತ್ಯ ಇದೇ ರೀತಿಯಲ್ಲಿ ಕಾಯ್ದುಕೊಳ್ಳಬೇಕು. ಕುಡಿಯುವ ನೀರಿನ ಗುಣಮಟ್ಟವನ್ನು ಪರಿಶೀಲಿಸಬೇಕು. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಮಳೆ ಬಂದಾಗ ರೈತರಿಗೆ ಆಶ್ರಯ ವ್ಯವಸ್ಥೆ ಒದಗಿಸಬೇಕು ಎಂದು ಸೂಚನೆ ನೀಡಿದರು.
ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಪರಿಶೀಲನೆ: ನಂತರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪ್ರಯಾಣಿಕರಿಗೆ ಒದಗಿಸುತ್ತಿರುವ ಸೌಲಭ್ಯಗಳ ಕುರಿತು ಪರಿಶೀಲಿಸಿದರು. ನಿಲ್ದಾಣದಲ್ಲಿರುವ ಹೋಟೆಲ್‌ಗಳಲ್ಲಿ ಊಟ-ತಿಂಡಿ-ತಿನಿಸಿನ ದರಗಳ ಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಅವಧಿ ಮುಗಿದ ತಂಪು ಪಾನೀಯ, ಮತ್ತಿತರ ತಿಂಡಿ ತಿನಿಸುಗಳನ್ನು ಮಾರಾಟ ಮಾಡಬಾರದು. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಪೀಕ್ ಅವಧಿಯಲ್ಲಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿದ್ಯಾರ್ಥಿ ನಿಲಯಗಳ ಪರಿಶೀಲನೆ : ಡಾ: ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಹಾಸಿಗೆಯ ವ್ಯವಸ್ಥೆ ಕಲ್ಪಿಸಬೇಕು. ನೀರಿನ ಶೇಖರಣಾ ಟ್ಯಾಂಕ್‌ಗಳ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರಿಗೆ ಸೂಚಿಸಿದರು.
ಸ್ಥಳದಲ್ಲಿದ್ದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಕಡೆ ಗಮನಹರಿಸಿ ತಂದೆ ತಾಯಿಯರಿಗೆ ಗೌರವ ತರುವಂತರಾಗಬೇಕು ಎಂದು ಹಿತೋಪದೇಶ ನೀಡಿದರು.
ನಂತರ ನಗರದ ಶ್ರೀ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಅವರು ನಿಮ್ಮ ಮುಂದಿನ ಭವಿಷ್ಯ ಶಿಕ್ಷಣದಲ್ಲಿ ಅಡಗಿದೆ. ಪ್ರೀತಿ-ಪ್ರೇಮದ ಕಡೆ ಗಮನ ಕೊಡದೆ ಶಿಕ್ಷಣದ ಕಡೆ ಹೆಚ್ಚು ಗಮನ ಹರಿಸಬೇಕು. ಮುಂದಿನ ದಿನಗಳಲ್ಲಿ ನೀವು ಉನ್ನತ ಮಟ್ಟದ ಹುದ್ದೆಗಳನ್ನು ಪಡೆದು ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ದನಿಯಾಗಬೇಕು ಎಂದು ಪ್ರೇರೇಪಿಸಿದರು.
ಪ್ರತಿ ತಿಂಗಳು ವಿದ್ಯಾರ್ಥಿನಿಯರಿಗೆ ವೈದ್ಯಕೀಯ ಪರೀಕ್ಷೆ ಕಡ್ಡಾಯವಾಗಿ ಮಾಡಿಸಬೇಕು. ನಿಲಯದಲ್ಲಿ ಹೆಚ್ಚು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಊಟದ ವಿಚಾರದಲ್ಲಿ ಯಾವುದೇ ಅಸಡ್ಡೆ ತೋರದೆ ಗುಣಮಟ್ಟ ಕಾಯ್ದುಕೊಳ್ಳಬೇಕು. ನಿಲಯದಿಂದ ಸಿಗುವ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸಬೇಕೆಂದು ಸೂಚನೆ ನೀಡಿದರು.
ಕೆರೆಗಳ ಸ್ವಚ್ಛತೆ ಮತ್ತು ನೀರಿನ ಗುಣಮಟ್ಟ ಪರಿಶೀಲನೆ: ಹಿಂಡಿಸ್ಕೆರೆ ಹಾಗೂ ಈಚನೂರು ಕೆರೆಗಳಿಗೆ ಭೇಟಿ ನೀಡಿದ ಉಪಲೋಕಾಯುಕ್ತರು ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳಬೇಕು. ಕೆರೆಯ ಸಮೀಪದಲ್ಲಿರುವ ಕೊಳವೆ ಬಾವಿಗಳ ನೀರಿನ ಗುಣಮಟ್ಟವನ್ನು ಪರಿಶೀಲಿಸಿ ವರದಿ ನೀಡುವಂತೆ ಪರಿಸರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ ಉಪನಿಬಂಧಕ ಅರವಿಂದ ಎನ್.ವಿ. ತುಮಕೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಶೀಲ್ದಾರ್ ಜಿ.ವಿ. ಮೋಹನ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.



