
ತುಮಕೂರು: ನಾಡಿನ ಹಬ್ಬ-ಹುಣ್ಣಿಮೆಗಳ ಆಚರಣೆ, ಪೂಜಾ ವಿಧಾನ, ಗ್ರಾಮೀಣ ಜನರ ಅಡುಗೆ, ಉಡುಗೆ, ದಾರ್ಶನಿಕರು ಸಾರಿದ ಜೀವನ ಸಾರ, ನಾಡುನುಡಿಯ ಹಿರಿಮೆ ಒಳಗೊಂಡ ದೀರ್ಘ ಅಧ್ಯಯನದ ಪ್ರಬುದ್ಧ ಲೇಖನಗಳ ಜ್ಞಾನಗುಚ್ಛ ದೇವಕಣ ಕೃತಿ ಎಂದು ಪ್ರಾಚೀನ ವಚನಕಾರ ಟಿ.ಮುರಳಿಕೃಷ್ಣಪ್ಪ ಹೇಳಿದರು.
ಜ್ಞಾನಬುತ್ತಿ ಸತ್ಸಂಗ ಕೇಂದ್ರ ಹಾಗೂ ಶಾಲ್ಮಲೀ ಪ್ರಕಾಶನದಿಂದ ನಗರದ ವಾಸವಿ ಸುಜ್ಞಾನ ಮಂದಿರ ಸಭಾಂಗಣದಲ್ಲಿ ಮಂಗಳ ವಾರ ಸಂಜೆ ನಡೆದ ಹಿರಿಯ ಸಾಹಿತಿ, ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಡಾ.ಗಂಗಾಧರ ಕೊಡ್ಲಿಯವರು ರಚಿಸಿರುವ ‘ದೇವಕಣ’ ಗ್ರಂಥ ಲೋಕಾರ್ಪಣೆ ಮಾಡಿ, ಗ್ರಂಥ ಕುರಿತು ಮಾತನಾಡಿದರು.
ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಡಾ.ಗಂಗಾಧರ ಕೊಡ್ಲಿ ಯರರು ಪ್ರವೃತ್ತಿಯಲ್ಲಿ ಉತ್ತಮ ಸಾಹಿತ್ಯ ರಚನಾಕಾರರು, ಇದೂವರೆಗೆ ಹತ್ತು ಕೃತಿಗಳನ್ನು ರಚಿಸಿದ್ದಾರೆ, ಇವರ ದೇವರಕಣ ಶ್ರೇಷ್ಠ ಕೃತಿಯಾಗಿ ಕನ್ನಡ ಸಾಹಿತ್ಯ ಸೇರಿದೆ. ಕೃತಿಯಲ್ಲಿರುವ ಎಲ್ಲಾ ೨೪ ಲೇಖನಗಳನ್ನು ಕೃತಿಕಾರರು ಅಪಾರ ಅಧ್ಯಯನ ಮಾಡಿ ರಚಿಸಿದ ಲೇಖನಗಳಲ್ಲಿ ವಿಷಯದ ಆಳ, ಗಟ್ಟಿತನ ಕಂಡುಬರುತ್ತದೆ ಎಂದರು.
ನಮ್ಮ ಗ್ರಾಮೀಣ ಪ್ರದೇಶದ ಬದುಕನ್ನು ಕುತೂಹಲದಿಂದ ನೋಡಿರುವ ಡಾ.ಗಂಗಾಧರ ಕೊಡ್ಲಿಯವರು, ಹಬ್ಬ-ಹುಣ್ಣಿಮೆಗಳ ಆಚರಣೆ, ಪೂಜಾ ಪದ್ದತಿ, ಹೆಣ್ಣುಮಕ್ಕಳ ವೇಷಭೂಷಣವನ್ನು ವರ್ಣಿಸಿದ್ದಾರೆ. ಗ್ರಾಮೀಣ ಜನರು, ರೈತರ ಬದುಕು-ಬವಣೆಯನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಮಳೆ ನೀರಿನ ಜಾಲತಾಣಗಳು, ನೀರಿನ ಮಹತ್ವವನ್ನು ವಿವರಿಸಿದ್ದಾರೆ. ಮಹರ್ಷಿ ವಾಲ್ಮೀಕಿ, ಕನಕದಾಸರು, ದೇವರಾಜ ಅರಸು, ಸಂಗೋಳ್ಳಿ ರಾಯಣ್ಣ ಮೊದಲಾದ ದಾರ್ಶನಿಕರ ಬದುಕು, ಆದರ್ಶವನ್ನು ವಿಶೇಷವಾಗಿ ಗಮನಿಸಿ ತಮ್ಮ ಲೇಖನಗಳಲ್ಲಿ ತಂದಿದ್ದಾರೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಉಪಾಧ್ಯಕ್ಷ ಆರ್.ಬಸವರಾಜಪ್ಪ ಮಾತನಾಡಿ, ಈಗಿನ ಪೀಳಿಗೆಯಲ್ಲಿ ಪುಸ್ತಕ ಓದುವ, ಬರೆಯುವ ಹವ್ಯಾಸ ಕಡಿಮೆಯಾಗುತ್ತಿರುವುದು ಆತಂಕಕಾರಿ ವಿಚಾರ. ಶಾಲಾ ಹಂತದಲ್ಲೇ ಮಕ್ಕಳು ಕಂಪ್ಯೂಟರ್ ಬಳಕೆ ಆರಂಭಿಸಿ ಬರವಣಿಯನ್ನೇ ಮರೆಯುವಂತಾಗಿದೆ. ಪೋಷಕರು, ಶಿಕ್ಷಕರು ಮಕ್ಕಳಲ್ಲಿ ಪುಸ್ತಕ ಓದು, ಬರೆಯುವ ಹವ್ಯಾಸ, ಸಾಹಿತ್ಯಾಸಕ್ತಿ ಬೆಳೆಸಬೇಕು ಎಂದು ಹೇಳಿದರು.
ಕೃತಿಕಾರ ಡಾ.ಗಂಗಾಧರ ಕೊಡ್ಲಿಯವರ ಮಾತನಾಡಿ, ಕನ್ನಡ ನಮ್ಮ ಮಾತೃಭಾಷೆ, ಅನ್ನದ ಭಾಷೆ, ನಾವು ಯಾವುದೇ ಪ್ರದೇಶದಲ್ಲಿದ್ದರೂ, ಯಾವುದೇ ಹುದ್ದೆಯಲ್ಲಿದ್ದರೂ ಎಷ್ಟೇ ಭಾಷೆ ಕಲಿತಿದ್ದರೂ ನಾವು ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಮಾತೃಭಾಷೆ ಕನ್ನಡದಲ್ಲೇ. ಇಂತಹ ಭಾಷೆಯ ಬಗ್ಗೆ ಎಲ್ಲರೂ ಅಭಿಮಾನ ಪಡಬೇಕು. ಹೊಸತಲೆಮಾರಿಗೂ ಬೆಳೆಸಬೇಕು ಎಂದು ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದರು.



