ಶಿರಾ: ಹೈನುಗಾರಿಕೆ ರೈತರ ಜೀವನಕ್ಕೆ ವರದಾನವಾಗಿದ್ದು, ರೈತರು ಕೃಷಿ ಜೊತೆಗೆ ಹೆಚ್ಚು ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಬೇಕು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಶಿರಾ ನಗರದ ನಂದಿನಿ ಕ್ಷೀರ ಭವನ ಆವರಣದಲ್ಲಿ ತುಮಕೂರು ಹಾಲು ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ೨.೫ ಕೋಟಿ ರೂಪಾಯಿ ಅನುದಾನದ ವಿವಿಧ ಫಲಾನುಭವಿಗಳಿಗೆ ಸವಲತ್ತು ವಿತರಣೆ ಹಾಗೂ ಅಂಧರ ಟಿ೨೦ ಕ್ರಿಕೇಟ್‌ನಲ್ಲಿ ನಾಯಕಿಯಾಗಿದ್ದ ಶಿರಾ ತಾಲೂಕಿನ ಕುಮಾರಿ ದೀಪಿಕಾ ಅವರಿಗೆ ಸನ್ಮಾನ, ಹಾಗೂ ವಿವಿಧ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾನು ಸ್ವತಃ ಇಷ್ಟ ಪಟ್ಟು ಕೃಷಿ ಮಂತ್ರಿ, ಪಶು ಸಂಗೋಪನೆ, ನೀರಾವರಿ ಖಾತೆ ಕೇಳಿ ಪಡೆದಿದ್ದೆ. ಸಚಿವನಾಗಿದ್ದ ಸಂದರ್ಭದಲ್ಲಿ ಹೈನುಗಾರಿಕೆಗೆ ಪ್ರೋತ್ಸಾಹ ನೀಡಿದ್ದೇನೆ ಎಂದ ಅವರು ಶಿರಾ ತಾಲೂಕಿನಲ್ಲಿ ನಂದಿನಿ ಉತ್ಪನ್ನಗಳ ತಯಾರಿಕಾ ಘಟಕ ಸ್ಥಾಪಿ ಸಲು ೪.ಎಕರೆ ಜಮೀನನ್ನು ಮಂಜೂರು ಮಾಡಲಾಗುವುದು ಎಂದರು.
ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ ಶಿರಾದಲ್ಲಿ ಶಾಸಕ ಟಿ.ಬಿ.ಜಯಚಂದ್ರ ಅವರು ನೀರನ ಹೊಳೆ ಹರಿಸಿದ್ದಾರೆ. ಎಸ್.ಆರ್.ಗೌಡ ಅವರು ಹಾಲಿನ ಹೊಳೆ ಹರಿಸಿದ್ದಾರೆ ನಾನು ನನ್ನ ಇಚ್ಚೆಯಂತೆ ಶಿಕ್ಷಣದ ಹೊಳೆ ಹರಿಸುವ ಕಾರ್ಯ ಮಾಡುತ್ತಿದ್ದೇನೆ. ಒಟ್ಟಾರೆ ಶಿರಾ ತಾಲೂಕಿನ ಜನತೆ ಅನುಕೂಲವಾಗುವ ಕೆಲಸವನ್ನು ಎಲ್ಲರೂ ಪಕ್ಷಾತೀತವಾಗಿ ಮಾಡುತ್ತಿದ್ದೇವೆ ಎಂದ ಅವರು ಜೀವನದಲ್ಲಿ ಯಶಸ್ವಿಯಾಗಲು ಶಿಕ್ಷಣದಿಂದ ಮಾತ್ರ ಸಾಧ್ಯ. ಆದ್ದರಿಂದ ಹೈನುಗಾರರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದರು.
ಶಾಸಕರು ಹಾಗೂ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ, ಶಾಸಕ ಎಚ್.ವಿ.ವೆಂಕಟೇಶ್ ಮಾತನಾಡಿ ತುಮಕೂರು ಹಾಲು ಒಕ್ಕೂಟಕ್ಕೆ ನಾನು ಅಧ್ಯಕ್ಷನಾದಾಗಿನಿಂದ ರೈತರ ಪರವಾದ, ಹೈನುಗಾರರ ಪರವಾದ ನಿರ್ಣಯ ತೆಗೆದುಕೊಳ್ಳುತ್ತೇವೆ. ನಾನು ಅಧ್ಯಕ್ಷನಾದ ತಕ್ಷಣ ಹೈನುಗಾರರಿಗೆ ೨. ರೂಪಾಯಿ ಪ್ರೋತ್ಸಾಹ ಧನ ನೀಡಿದ್ದೇನೆ ಮುಂದಿನ ದಿನಗಳಲ್ಲೂ ಹೈನುಗಾರರಿಗೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸುತ್ತೇವೆ ಎಂದರು.
ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್ ಆರ್ ಗೌಡ ಮಾತನಾಡಿ ಜಿಲ್ಲೆಯಲ್ಲಿ ಶಿರಾ ತಾಲೂಕಿನಲ್ಲಿ ಸುಮಾರು ೮೦ ಸಾವಿರ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ನಾವು ೧. ಲಕ್ಷ ಲೀಟರ್ ಹಾಲು ಉತ್ಪಾದನೆ ಗುರಿ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲರೂ ಹೈನುಗಾರಿಕೆಗೆ ಹೆಚ್ಚು ಗಮನ ನೀಡಬೇಕು. ಯುವಕರು ಬೆಂಗಳೂರಿಗೆ ವಲಸೆ ಹೋಗುವಬದಲು ಇಲ್ಲಿಯೇ ಹೈನುಗಾರಿಕೆ ಉದ್ಯಮ ಮಾಡಿದರೆ ಹೆಚ್ಚು ಅಭಿವೃದ್ಧಿ ಹೊಂದಬಹುದು ಎಂದರು.
೨ ಲಕ್ಷ ರೂಪಾಯಿ ಪ್ರೋತ್ಸಾಹ ಧನ ಪಡೆದು, ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂಧರ ಟಿ೨೦ ವಿಶ್ವಕಪ್ ವಿಜೇತ ತಂಡದ ನಾಯಕಿಯಾದ ಶಿರಾ ತಾಲೂಕಿನ ಕರೆತಿಮ್ಮನಹಳ್ಳಿ ಗ್ರಾಮದ ಕುಮಾರಿ ದೀಪಿಕ ಟಿ.ಸಿ. ಮಾತನಾಡಿ ಶಿರಾ ತಾಲೂಕಿನಲ್ಲಿ ನನಗೆ ಹೆಚ್ಚು ಪ್ರೋತ್ಸಾಹ ಸಿಕ್ಕಿದೆ. ನಾನು ಮುಂದೆಯೂ ಅಂತ ರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚು ಗೆಲುವು ಸಾಧಿಸಿ ಶಿರಾಕ್ಕೆ ಕೀರ್ತಿ ತರುತ್ತೇನೆ ಎಂದರು.
ನಿರ್ದೇಶಕರುಗಳಾದ ಮಹಾಲಿಂಗಯ್ಯ, ಡಿ. ಕೃಷ್ಣಕುಮಾರ್, ನಾಗೇಶ್ ಬಾಬು, ಸಿದ್ದಗಂಗಪ್ಪ, ಶಿರಾ ನಗರಸಭೆ ಅಧ್ಯಕ್ಷ ಜಿಶಾನ್ ಮೊಹಮ್ಮದ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎಸ್. ರವಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಎನ್. ಮೂರ್ತಿ, ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ಶ್ರೀನಿವಾಸ್, ಚಂದ್ರಶೇಖರ್ ,ಉಪ ವ್ಯವಸ್ಥಾಪಕ ಬಿ.ಗಿರೀಶ್, ವಿಸ್ತರಣಾಧಿಕಾರಿ ಚೈತ್ರ, ಮುಖಂಡರಾದ ಮದಲೂರು ನರಸಿಂಹಮೂರ್ತಿ, ನಗರಸಭೆ ಸದಸ್ಯೆ ಉಮಾ ವಿಜಯರಾಜ್, ಸೂಡ ಈರಣ್ಣ, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ನಿಡಗಟ್ಟೆ ಚಂದ್ರಶೇಖರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಡಿ.ಮಲ್ಲೇಶ್ ಸೇರಿದಂತೆ ಶಿರಾ ತಾಲೂಕಿನ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ,ಕಾರ್ಯದರ್ಶಿಗಳು, ಸದಸ್ಯರು, ಹಾಲು ಉತ್ಪಾದಕರು ಸೇರಿದಂತೆ ಹಲವರು ಉಪಸಿತರಿದ್ದರು.
ಇದೇ ಸಂದರ್ಭದಲ್ಲಿ ಅಂದ ಮಹಿಳೆ ವಿಶ್ವಕಪ್ ಗೆದ್ದು ಭಾರತ ದೇಶಕ್ಕೆ ಕೀರ್ತಿ ತಂದ ಕ್ರಿಕೆಟ್ ತಂಡದ ನಾಯಕಿ ಎಚ್. ಟಿ . ದೀಪಿಕಾ ರವರಿಗೆ ತುಮಕೂರು ಹಾಲು ಒಕ್ಕೂಟದ ವತಿಯಿಂದ ಎರಡು ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಿ, ಅದ್ದೂರಿಯಾಗಿ ಸನ್ಮಾನಿಸಲಾಯಿತು.
ತುಮಕೂರು ಹಾಲು ಒಕ್ಕೂಟದ ವತಿಯಿಂದ ವಿದ್ಯಾರ್ಥಿ ವೇತನ, ಮರಣ ಹೊಂದಿದ ರಾಸುಗಳ ವಿಮೆ, ಮರಣ ಹೊಂದಿದ ಹಾಲು ಉತ್ಪಾದಕರಿಗೆ ಪರಿಹಾರ ಸೇರಿ ೨.೫ ಕೋಟಿ ರೂಪಾಯಿ ಅನುದಾನದ ಚೆಕ್ಕುಗಳನ್ನು ವಿತರಿಸಲಾಯಿತು

(Visited 1 times, 1 visits today)