ತುಮಕೂರು: ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ, ಶ್ರೀರಾಮ ಸೇನೆವತಿಯಿಂದ ಆಯೋಜಿಸಿರುವ ದತ್ತ ಜಯಂತಿಯಲ್ಲಿ ಪಾಲ್ಗೊಳ್ಳಲು ಗುರುವಾರ ನಗರದಿಂದ ನೂರಾರು ದತ್ತ ಮಾಲಾಧಾರಿ ಭಕ್ತರು ತೆರಳಿದರು.
ಬಿಜಿಎಸ್ ವೃತ್ತದ ನಾಗರಕಟ್ಟೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮಾಲಾಧಾರಿಗಳು ಗುಬ್ಬಿ ವೃತ್ತದ ಕುಂಟಮ್ಮನ ತೋಟದ ಆಂಜನೇಯ ದೇವಸ್ಥಾನದವರೆಗೆ ಪಾದಯತ್ರೆ ಸಾಗಿ, ಅಲ್ಲಿ ಪೂಜೆ ಸಲ್ಲಿಸಿ ನಂತರ ಆರು ಬಸ್‌ಗಳಲ್ಲಿ ದತ್ತಪೀಠದತ್ತ ಪ್ರಯಾಣ ಬೆಳೆಸಿದರು.
ನಾಗರಕಟ್ಟೆ ಗಣಪತಿ ದೇವಸ್ಥಾನದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೊರಟಗೆರೆ ತಾಲ್ಲೂಕು ತಂಗನಹಳ್ಳಿ ಕಾಶಿ ಅನ್ನಪೂರ್ಣೇಶ್ವರಿ ಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ದತ್ತಪೀಠ ಹಿಂದೂಗಳ ಪವಿತ್ರ ಧಾರ್ಮಿಕ ಕೇಂದ್ರ, ಇದಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಅನೇಕ ಋಷಿಮುನಿಗಳು ತಪಸ್ಸು, ಧಾನ್ಯ ಮಾಡಿದ್ದ ಶ್ರದ್ಧಾ ಕೇಂದ್ರ. ಭಕ್ತರು ಪ್ರತಿ ವರ್ಷ ಮಾಲೆ ಧರಿಸಿ ದತ್ತ ಪೀಠಕ್ಕೆ ಯಾತ್ರೆ ತೆರಳಿ ದತ್ತತ್ರೇಯರ ಪಾದುಕೆ ದರ್ಶನ, ಸ್ಪರ್ಶ ಮಾಡಿ ಭಕ್ತಿ ಸಮರ್ಪಿಸುವ ಆಚರಣೆ ಅನಾದಿ ಕಾಲದಿಂದಲೂ ನಡೆದುಬರುತ್ತಿದೆ ಎಂದು ಹೇಳಿದರು.
ಮಾಜಿ ಸಚಿವ ಸೊಗಡು ಶಿವಣ್ಣ, ಗಾರ್ಡನ್ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನ ಅಧ್ಯಕ್ಷರೂ, ಗುರುಸ್ವಾಮಿಗಳೂ ಆದ ಟಿ.ಬಿ.ಶೇಖರ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಡಾ.ಧನಿಯಾಕುಮಾರ್, ಮುಖಂಡರಾದ ಮಂಜು ಭಾರ್ಗವ್, ಮಧುಗಿರಿ ಮೋದಿ, ಎಸ್.ಎನ್.ಕೃಷ್ಣಯ್ಯ, ಮಹೇಶ್ ಬೆಳ್ಳಾವಿ, ಕೇಶವಮೂರ್ತಿ, ಮಾರಣ್ಣ, ಗೋಕುಲ ಮಂಜುನಾಥ್ ಮೊದಲಾದವರು ಹಾಜರಿದ್ದು ದತ್ತ ಯಾತ್ರಿಗಳಿಗೆ ಶುಭ ಕೋರಿ ಬೀಳ್ಕೊಟ್ಟರು. ಮಹಿಳೆಯರೂ ಸೇರಿದಂತೆ ೩೦೦ಕ್ಕೂ ಹೆಚ್ಚು ಮಾಲಾಧಾರಿಗಳು ಆರು ಬಸ್‌ಗಳಲ್ಲಿ ದತ್ತಪೀಠಕ್ಕೆ ತೆರಳಿದರು.

(Visited 1 times, 1 visits today)