
ತುಮಕೂರು: ಸಾಮಾಜಿಕ ಕಳಕಳಿ ಹೊಂದಿರುದ ದಿನಪತ್ರಿಕೆಗಳನ್ನು ರೂಪಿಸುವ ಹೊಣೆ ಹೊತ್ತಿರುವ ಸಂಪಾದಕರು ದಿನನಿತ್ಯ ಬಿಡುವಿಲ್ಲದೆ ಕೆಲಸ ಮಾಡಬೇಕಾಗುತ್ತದೆ. ಈ ಕಾರ್ಯಭಾರದಲ್ಲಿ ಅವರು ತಮ್ಮ ಖಾಸಗಿ ಬದುಕನ್ನೂ ಕಳೆದುಕೊಳ್ಳುವಷ್ಟು ಒತ್ತಡ ಬರಬಹುದು. ಎಷ್ಟೇ ಕಾರ್ಯ ಒತ್ತಡದ ನಡುವೆಯೂ ತಮ್ಮ ಕುಟುಂಬಕ್ಕಾಗಿ ಸಮಯ ಮೀಸಲಿಟ್ಟು ಅವರೊಂದಿಗೆ ಬೆರೆತು ಕುಟುಂಬದ ಕಲ್ಯಾಣಕ್ಕೆ ಪ್ರಯತ್ನಿಸಬೇಕು ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದಿ0ದ ಹಮ್ಮಿಕೊಂಡಿದ್ದ ರಾಷ್ಟಿçಯ ಪತ್ರಿಕಾ ದಿನಾಚರಣೆ, ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಸಮಿತಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ವಿಶ್ವವಿದ್ಯಾಲಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ತಮ್ಮ ಹಾಲಪ್ಪ ಪ್ರತಿಷ್ಠಾನದಡಿ ಚಿನ್ನದ ಪದಕ ನೀಡಲಾಗುತ್ತಿದೆ. ಇದೇ ರೀತಿ ಪತ್ರಕರ್ತರ ಕಲ್ಯಾಣ ಹಾಗೂ ಪ್ರೋತ್ಸಾಹಕ್ಕಾಗಿ ಸಾಧ್ಯವಾದಷ್ಟು ದತ್ತಿ ಹಣ ಮೀಸಲಿಡುವ ಮೂಲಕ ಅವರ ವೃತ್ತಿ ಬದುಕಿಗೆ ಶಕ್ತಿ ತುಂಬುವ ಪ್ರಯತ್ನ ಮಾಡುವುದಾಗಿ ಹೇಳಿದರು.
ಕೈಗಾರಿಕೋದ್ಯಮಿ, ಟೂಡಾ ಮಾಜಿ ಅಧ್ಯಕ್ಷರಾದ ಹೆಚ್.ಜಿ.ಚಂದ್ರಶೇಖರ್ ಮಾತನಾಡಿ, ಪತ್ರಿಕೋದ್ಯಮ ಸಾಮಾಜಿಕ ಕಳಕಳಿಯುಳ್ಳ, ಬದ್ಧತೆಯ ವೃತ್ತಿಯಾಗಿದೆ. ಸಾಮಾಜಿಕ ಸೇವಾ ಕ್ಷೇತ್ರವಾಗಿರುವ ಪತ್ರಿಕಾ ಕ್ಷೇತ್ರದಲ್ಲಿ ತೊಡಗಿರುವ ಪತ್ರಕರ್ತರು ವೃತ್ತಿ ಬದ್ಧತೆ ಸಾಧಿಸಬೇಕು ಎಂದು ಹೇಳಿದ ಅವರು, ಸಂಪಾದಕರ ಸಂಘದ ದತ್ತಿ ಪ್ರಶಸ್ತಿಗೆ ತಾವು ಒಂದು ಲಕ್ಷ ರೂ. ದೇಣಿಗೆ ನೀಡುವುದಾಗಿ ಪ್ರಕಟಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ರಾಮಕೃಷ್ಣ ಮಾಮರ ಮಾತನಾಡಿ, ಸಣ್ಣ ಪತ್ರಿಕೆಗಳು ಗ್ರಾಮೀಣ ಪ್ರದೇಶದ ಮೂಲೆಮೂಲೆಗಳಲ್ಲಿನ ಸಮಸ್ಯೆಗಳನ್ನು ಎತ್ತಿ ಹಿಡಿದು ಸಮಾಜದ ಮುಂದೆ ತರುತ್ತವೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಣ್ಣ ಪತ್ರಿಕೆಗಳನ್ನು ನಡೆಸುವುದು ಕಷ್ಟವಾಗಿದೆ. ಇಂತಹ ಪತ್ರಿಕೆಗಳಿಗೆ ಸರ್ಕಾರ ಹೆಚ್ಚಿನ ಪ್ರಮಾಣದ ಜಾಹೀರಾತು ನೀಡಿ ಸಣ್ಣ ಪತ್ರಿಕೆಗಳಿಗೆ ಆರ್ಥಿಕ ಶಕ್ತಿ ತುಂಬಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಜಿ.ಕರುಣಾಕರ್ ಮಾತನಾಡಿ, ವಿಜಯಮುಗಿಲು ಪತ್ರಿಕೆ ಸಹ ಸಂಪಾದಕರಾದ ಹೆಚ್.ಹನುಮಂತಯ್ಯ ಅವರು ಸಂಘದಲ್ಲಿ ದತ್ತಿಯಾಗಿ ಇಟ್ಟಿರುವ ಪ್ರಶಸ್ತಿ ಹಾಗೂ ನಗದು ಪ್ರೋತ್ಸಾಹ ನೀಡಿದೆ ಎಂದ ಅವರು, ಜೊತೆಗೆ ಸಣ್ಣ ಪತ್ರಿಕೆಗಳ ಸಂಪಾದಕರು ಸಂಘಟಿತರಾಗಿ ಸಮಾಜದ ಅಂಕುಡೊAಕು ತಿದ್ದಲು, ಎದುರಾಗುವ ಸವಾಲುಗಳನ್ನು ಬಗೆಹರಿಸಿಕೊಳ್ಳಲು ಸನ್ನದ್ಧರಾಗಬೇಕು. ಪತ್ರಕರ್ತರಿಗೆ ಮೂಲಭೂತ ಸೌಲಭ್ಯ, ಹಕ್ಕು ದೊರಕಿಸಲು ಪ್ರಯತ್ನಿಸಬೇಕು ಎಂದರು.
ವಿಜಯ ಮುಗಿಲು ಪತ್ರಿಕೆ ಸಹ ಸಂಪಾದಕ ಹೆಚ್.ಹನುಮಂತಯ್ಯ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ಮಾಧ್ಯಮಕ್ಕೆ ವಿಶೇಷ ಮಾನ್ಯತೆ ಇದ್ದು, ಅದರ ಮಹತ್ವ ಅರಿತು ಪತ್ರಿಕೆಗಳು ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುತ್ತಿವೆ. ಇಂದು ಹಣ, ಜಾತಿ ಹಾಗೂ ಪತ್ರಿಕೆಗಳ ಗುಣಮಟ್ಟದ ಆಧಾರದಲ್ಲಿ ಪತ್ರಕರ್ತರ ಮೌಲ್ಯಗಳನ್ನು ಅಳೆಯುತ್ತಿರುವುದು ವಿಷಾದನೀಯ ಎಂದು ಹೇಳಿದರು.
ಮಾಜಿ ಶಾಸಕ, ಅಮೃತವಾಣಿ ಸಂಪಾದಕ ಗಂಗಹನುಮಯ್ಯ ಮಾತನಾಡಿ, ಪತ್ರಿಕೋದ್ಯಮಕ್ಕೆ ತನ್ನದೇ ಆದ ಶಕ್ತಿ ಇದೆ. ಆ ಶಕ್ತಿಯನ್ನು ಸಮಾಜದ ಏಳಿಗೆಗೆ ಬಳಸಬೇಕು ಎಂದು ತಿಳಿಸಿ ಜಿಲ್ಲೆಯ ಪತ್ರಿಕೆಗಳ ಬೆಳವಣಿಗೆಗೆ ಬಗ್ಗೆ ನೆನಪು ಮಾಡಿಕೊಂಡರು.
ಪ್ರಜಾಪರ್ವ ಪತ್ರಿಕೆ ಸಂಪಾದಕ ಕೊಪ್ಪಳದ ಎಂ.ಜಿ ಶ್ರೀನಿವಾಸ್ ಅವರಿಗೆ ಈ ವೇಳೆ ‘ಸಂಪಾದಕ ರತ್ನ’ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಅವರು ಮಾತನಾಡಿ, ಸಣ್ಣ ಪತ್ರಿಕೆಗಳು ಕೀಳರಮೆ ಬಿಟ್ಟು ಸಾಮಾಜಿಕ ಕಾಳಜಿಯ ಸುದ್ದಿಗಳನ್ನು ಪ್ರಕಟಿಸಿ ಸಮಾಜ ಪರಿವರ್ತನೆಗೆ ನೆರವಾಗಲಿ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಯೋಗೀಶ್, ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್, ನಿರ್ದೇಶಕ ಜಯಣ್ಣ ಬೆಳಗೆರೆ ಮಾತನಾಡಿದರು.
ಸುದಿನ ಪತ್ರಿಕೆ ಸ್ಥಾನಿಕ ಸಂಪಾದಕ ಹೆಚ್.ಎಸ್.ಹರೀಶ್, ಈ ಮುಂಜಾನೆ ಸಂಪಾದಕ ಮೊಹಮದ್ ಯೂನಿಸ್, ಸೂರ್ಯಾಸ್ಥ ಸಂಜೆ ಪತ್ರಿಕೆ ಸಂಪಾದಕ ವಿಜಯಕುಮಾರ್ ಪಾಟೀಲ್, ಸತ್ಯದರ್ಶಿನಿ ಪತ್ರಿಕೆ ಸಹ ಸಂಪಾದಕ ಹೆಚ್.ಕೆ.ರವೀಂದ್ರನಾಥ್ ಹೊನ್ನೂರು, ದತ್ತಿ ಪ್ರಶಸ್ತಿ ದಾನಿ ಹೆಚ್.ಹನುಮಂತಯ್ಯ, ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನು ಶಾಂತರಾಜು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಆರ್ ಲಕ್ಷಿö್ಮನಾರಾಯಣ ಶೆಟ್ಟಿ, ಜಯಣ್ಣ ಬೆಳಗೆರೆ, ಸಿ.ಟಿ.ಎಸ್.ಗೋವಿಂದಪ್ಪ, ನಾಗರಾಜು, ನರಸಿಂಹಯ್ಯ, ಪತ್ರಿಕಾ ವಿತರಕ ನಾಗರಾಜು, ಗೂಳೂರು ಸುರೇಶ್, ಅಕ್ಷಯ್ ಚೌದರಿ ಸೇರಿದಂತೆ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಜಿಲ್ಲಾ ಉಪಾಧ್ಯಕ್ಷ ಪಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಕೃಷ್ಣಮೂರ್ತಿ, ರಾಜ್ಯ ಜಂಟಿ ಕಾರ್ಯದರ್ಶಿ ಸಿ.ರಂಗನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮಂಜುನಾಥ ಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹೇಶ್ ಕುಮಾರ್ ಸಿ.ಎನ್., ಖಜಾಂಚಿ ಕಂಬಣ್ಣ, ಬಸವರಾಜು, ಅಭಿಷೇಕ್, ಅಂಜಲಿ ಸೇರಿದಂತೆ ಜಿಲ್ಲೆ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಹಲವಾರು ಪತ್ರಿಕಾ ಸಂಪಾದಕರು ಹಾಗೂ ವರದಿಗಾರರು ಉಪಸ್ಥಿತರಿದ್ದರು.





