
ತುಮಕೂರು: ತುರುವೇಕೆರೆ ತಾಲೂಕಿನಲ್ಲಿ ಹೊಸ ಪಡಿತರ ಚೀಟಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಅರ್ಹ ಫಲಾನುಭವಿಗಳಿಗೆ ಮುಂದಿನ ಒಂದು ತಿಂಗಳೊಳಗೆ ಪಡಿತರ ಚೀಟಿ ವಿತರಿಸಲಾಗುವುದು ಎಂದು ಶಾಸಕ ಎಂ.ಟಿ. ಕೃಷ್ಣಪ್ಪ ತಿಳಿಸಿದರು.
ಸೋಮವಾರ ಪಟ್ಟಣದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಆಹಾರ ಅದಾಲತ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ಹೊಸ ಪಡಿತರ ಚೀಟಿಗಾಗಿ ಒಟ್ಟು ೨,೦೯೪ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ೧೬೫೪ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಬಾಕಿಯಿರುವ ೪೪೨ ಅರ್ಜಿಗಳನ್ನು ಪರಿಶೀಲಿಸಿ ಹೊಸ ಪಡಿತರ ಚೀಟಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಅನ್ನ ಸುವಿಧ ಯೋಜನೆ ಯಡಿ ೭೫ ವರ್ಷ ಮೇಲ್ಪಟ್ಟ ಏಕ ಸದಸ್ಯರಾಗಿರುವ ವಯೋವೃದ್ಧರ ಮನೆ ಬಾಗಿಲಿಗೆ ಪಡಿತರ ತಲುಪಿಸುವ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಇದರಿಂದ ವಯೋವೃದ್ಧರು ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ತಪ್ಪುತ್ತದೆ. ಆಹಾರ ಅದಾಲತ್ ಕಾರ್ಯಕ್ರಮವು ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಆಲಿಸಿ ಪರಿಹರಿಸಲು ಪೂರಕವಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ ತಾಲೂಕು ಮಟ್ಟದ ಕುಂದುಕೊರತೆಗಳ ಪರಿಶೀಲನೆಯಲ್ಲಿ ಅತಿ ಹೆಚ್ಚು ಪಡಿತರ ಚೀಟಿ ಸಮಸ್ಯೆಗಳು ಕಂಡು ಬಂದ ಹಿನ್ನೆಲೆಯಲ್ಲಿ, ಜಿಲ್ಲೆಯ ಎಲ್ಲಾ ಹೋಬಳಿಗಳಲ್ಲಿ ಆಹಾರ ಅದಾಲತ್ ಕಾರ್ಯಕ್ರಮ ಹಮ್ಮಿಕೊ ಳ್ಳಲಾಗುತ್ತಿದೆ ಎಂದು ಹೇಳಿದರು. ಆಹಾರ ಅದಾಲತ್ ಮೂಲಕ ಪಡಿತರ ಚೀಟಿಗೆ ಸಂಬ0ಧಿಸಿದ ಸಮಸ್ಯೆಗಳನ್ನು ಆಲಿಸಿ, ಒಂದು ವಾರದೊಳಗೆ ಬಗೆಹರಿಸಿ ಫಲಾನುಭವಿಗಳಿಗೆ ಪಡಿತರ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸುಮಾರು ೭ಲಕ್ಷ ಪಡಿತರ ಚೀಟಿಗಳಿದ್ದು, ಇವುಗಳ ಮೂಲಕ ಸುಮಾರು ೨೧ ಲಕ್ಷ ಜನರು ಪಡಿತರವನ್ನು ಪಡೆಯುತ್ತಿದ್ದಾರೆ. ೭೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಎದುರಾಗುತ್ತಿರುವ ಬಯೋಮೆಟ್ರಿಕ್ ಸಮಸ್ಯೆಗಳನ್ನು ನಿವಾರಿಸಲು ಜಿಲ್ಲೆಯ ೧,೧೨೯ ನ್ಯಾಯಬೆಲೆ ಅಂಗಡಿಗಳಲ್ಲಿ ಐರಿಸ್ ಉಪಕರಣವನ್ನು ಅಳವ ಡಿಸಿ ಕಣ್ಣಿನ ಸ್ಕ್ಯಾನ್ ಮಾಡಿ ಪಡಿತರ ನೀಡಲು ಕ್ರಮ ಕೈಗೊಳ್ಳಲಾಗಿದೆ
ಬಯೋಮೆಟ್ರಿಕ್ ನೀಡಲು ಸಾಧ್ಯವಾಗದ ಶೇ. ೨ರಷ್ಟು ಅರ್ಹ ಫಲಾನುಭವಿಗಳಿಗೆ ಪರಿಶೀಲನೆ ನಡೆಸಿ ವಿನಾಯಿತಿ ನೀಡಬಹುದಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ೪,೦೦೦ ಜನರಿಗೆ ವಿನಾಯಿತಿ ನೀಡಲಾಗಿದ್ದು, ಇನ್ನೂ ಸುಮಾರು ೧೦,೦೦೦ ಅರ್ಹ ಫಲಾನುಭವಿಗಳಿಗೆ ವಿನಾಯಿತಿ ನೀಡಲು ಅವಕಾಶವಿದ್ದು, ಇದನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಚೌಡೇನಹಳ್ಳಿಯ ಗಂಗಮ್ಮ, ಹುಲಿಕೆರೆಯ ಕೆಂಪಮ್ಮ, ಹೊರಪೇಟೆಯ ವಂಸತಕುಮಾರಿ, ಕೆಬ್ಬೇಪಾಳ್ಯದ ಲಕ್ಷಿö್ಮದೇವಮ್ಮ, ನಾಯಕನ ಘಟ್ಟದ ರೇಣುಕಮ್ಮ ಹಾಗೂ ರಾಮಕೃಷ್ಣಯ್ಯ ಅವರಿಗೆ ಹೊಸ ಪಡಿತರ ಚೀಟಿ ವಿತರಿಸಲಾಯಿತು.
ನಂತರ ತುರುವೇಕೆರೆ ಪಟ್ಟಣದ ಮುನಿಯಮ್ಮ ಹಾಗೂ ಶಾಂತಮ್ಮ ಎಂಬುವರ ಮನೆಗೆ ತೆರಳಿ ಅನ್ನ ಸುವಿಧ ಯೋಜನೆಯಡಿ ಪಡಿತರಧಾನ್ಯವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಲಕ್ಷ್ಮೀಕಾಂತ್, ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಸೌಮ್ಯ, ತಹಶೀಲ್ದಾರ್ ಕುಂಞ ಅಹಮದ್ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.





