ತಿಪಟೂರು : ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದಿಂದ ಕಳೆದ ಆರು ದಶಕಗಳಿಂದ ಆ ಚರಣೆ ಮಾಡುತ್ತಾ ಬರುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವು ಈ ಬಾರಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜ.೨೪ ರಿಂದ ಫೆ.೧ರವರೆಗೆ ಒಂಬತ್ತು ದಿನಗಳ ಕಾಲ ನೆಡೆಯಲಿದೆ ಎಂದು ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಪಟ್ರೇಹಳ್ಳಿ ನಂಜುಡಪ್ಪ ತಿಳಿಸಿದ್ದಾರೆ.
ಒಂಬತ್ತು ದಿನಗಳ ಕಾಲ ಈ ಕಾರ್ಯಕ್ರಮದಲ್ಲಿ ನಾಡಿನ ರಾಜಕೀಯ ಮುತ್ಸದ್ಥಿಗಳು, ಮಠಾಧೀಶರು, ಸಾಹಿತಿಗಳು, ಭಾಗವಹಿಸಲಿದ್ದು, ಪ್ರತಿ ನಿತ್ಯ ಸಂಜೆ ವೇದಿಕೆ ಕಾರ್ಯಕ್ರಮವು ನಡೆಯಲಿದ್ದು ಇದರ ಸಾನಿಧ್ಯವನ್ನು ಸಿರಿಗೆರೆ ಪ್ರಸ್ತುತ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿ ವಹಿಸಿಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕದ ಬಯಲು ಸೀಮೆಯ ಅತಿದೊಡ್ಡ ಸಾಂಸ್ಕೃತಿಕ ಹಬ್ಬವೆಂದರೆ ಅದು ‘ತರಳಬಾಳು ಹುಣ್ಣಿಮೆ’. ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಆಶ್ರಯದಲ್ಲಿ ನಡೆಯುವ ಈ ಒಂಬತ್ತು ದಿನಗಳ ಉತ್ಸವವು ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ; ಅದು ವಿಚಾರ ಕ್ರಾಂತಿ, ರೈತ ಚೈತನ್ಯ ಮತ್ತು ಶರಣ ಸಂಸ್ಕೃತಿಯ ಜೀವಂತ ಪ್ರತಿಬಿಂಬ. ಈ ವರ್ಷ, ಕೈಗಾರಿಕಾ ನಗರಿ ಭದ್ರಾವತಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದು, ಭದ್ರಾ ನದಿಯ ತಟದಲ್ಲಿ ಅಧ್ಯಾತ್ಮ ಮತ್ತು ಸಾಮಾಜಿಕ ಚಿಂತನೆಗಳ ಮಹಾಸಂಗಮವೇ ಹರಿಯುತ್ತಿದೆ.
ಈ ಉತ್ಸವದ ಇತಿಹಾಸವು ೧೨ನೇ ಶತಮಾನದ ಶರಣ ಸಂಸ್ಕೃತಿಗೆ ಬೆಸೆದುಕೊಂಡಿದೆ. ಸಿರಿಗೆರೆ ಮಠದ ಪ್ರಥಮ ಗುರುಗಳಾದ ‘ವಿಶ್ವಬಂಧು ಮರುಳಸಿದ್ಧ ಶಿವಯೋಗಿಗಳು’ ಸಮಾಜದಲ್ಲಿನ ಅಸಮಾನತೆ ತೊಡೆದುಹಾಕಲು ನೀಡಿದ “ತರಳಬಾಳು” (ಮಗುವೇ ಬಾಳು) ಎಂಬ ಆಶೀರ್ವಚನವೇ ಈ ಮಠದ ಮಂತ್ರ ಮತ್ತು ಉತ್ಸವದ ಹೆಸರಾಗಿದೆ. ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳು ಈ ಹುಣ್ಣಿಮೆಯನ್ನು ಒಂದು ಶಿಸ್ತುಬದ್ಧ ಜನೋತ್ಸವವಾಗಿ ರೂಪಿಸಿದರೆ, ಪ್ರಸ್ತುತ ಜಗದ್ಗುರುಗಳಾದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಆಧುನಿಕ ಚಿಂತನೆ ಮತ್ತು ತಂತ್ರಜ್ಞಾನದ ಬಳಕೆಯ ಮೂಲಕ ಈ ಉತ್ಸವವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದಿದ್ದಾರೆ.
ತರಳಬಾಳು ಹುಣ್ಣಿಮೆಯ ವಿಶೇಷತೆಯೆಂದರೆ ಇದು ಪ್ರತಿ ವರ್ಷ ಒಂದೇ ಕಡೆ ನಡೆಯುವುದಿಲ್ಲ. ನಾಡಿನ ವಿವಿಧ ಭಾಗಗಳಲ್ಲಿ ಸಂಚರಿಸುವ ಮೂಲಕ ಜನರ ಮನೆ ಬಾಗಿಲಿಗೇ ಜ್ಞಾನದ ಗಂಗೆಯನ್ನು ಹರಿಸಲಾಗುತ್ತದೆ.ಇಲ್ಲಿ ನಡೆಯುವ ಚರ್ಚೆಗಳು ಕೃಷಿ, ವಿಜ್ಞಾನ, ಸಾಹಿತ್ಯ ಮತ್ತು ಸ್ತ್ರೀ ಸಮಾನತೆಯ ಕುರಿತು ಅರ್ಥಪೂರ್ಣ ಸಂವಾದಗಳನ್ನು ಒಳಗೊಂಡಿರುತ್ತವೆ. ಮಠದ ‘ಸದ್ಧರ್ಮ ಪೀಠ’ವು ಭಕ್ತರ ನಡುವಿನ ವ್ಯಾಜ್ಯಗಳನ್ನು ನ್ಯಾಯಾಲಯದ ಹೊರಗೆ ಸೌಹಾರ್ದಯುತವಾಗಿ ಬಗೆಹರಿಸುವ ವಿಶಿಷ್ಟ ಸಂಪ್ರದಾಯವನ್ನು ಮುಂದುವರಿಸಿಕೊAಡು ಬಂದಿದೆ. ಪರಿಸರ ಮತ್ತು ದೇಶಪ್ರೇಮ ಈ ಬಾರಿಯ ಭದ್ರಾವತಿ ಹುಣ್ಣಿಮೆಯು ಸಮಾಜಕ್ಕೆ ಹೊಸ ಮಾದರಿಯನ್ನು ಹಾಕಿಕೊಟ್ಟಿದೆ.
ಪ್ಲೆಕ್ಸ್ ಮುಕ್ತ ಉತ್ಸವ: ಪರಿಸರ ರಕ್ಷಣೆಗಾಗಿ ಶ್ರೀಗಳವರ ಆದೇಶದಂತೆ ಯಾವುದೇ ಬ್ಯಾನರ್ ಅಥವಾ ಪ್ಲೆಕ್ಸ್ ಬಳಸುತ್ತಿಲ್ಲ. ಯೋಧರಿಗೆ ನಮನ: ಬ್ಯಾನರ್ ಪ್ರದರ್ಶನಕ್ಕೆ ವ್ಯಯಿಸುವ ಹಣವನ್ನು ದೇಶಕ್ಕಾಗಿ ಹೋರಾಡಿದ ಹುತಾತ್ಮ ಯೋಧರ ಕುಟುಂಬಗಳಿಗೆ ಸಹಾಯ ಧನವಾಗಿ ನೀಡುತ್ತಿರುವುದು ಶ್ಲಾಘನೀಯ. ಉಕ್ಕಿನ ನಗರಿಯ ಕಾರ್ಮಿಕರು ಮತ್ತು ರೈತರು ಒಂದಾಗಿ ‘ಕಾಯಕವೇ ಕೈಲಾಸ’ ತತ್ವಕ್ಕೆ ಹೊಸ ಮೆರುಗು ನೀಡುತ್ತಿದ್ದಾರೆ.
ಹುಣ್ಣಿಮೆಯ ಸಂಜೆಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಾಡಿನ ಜನಪದ ಕಲೆಗಳಿಗೆ ಆಸರೆಯಾಗಿವೆ. ಮಠವು ಹಮ್ಮಿಕೊಂಡಿರುವ “ಕೆರೆ ತುಂಬಿಸುವ ಯೋಜನೆ” ಗಳಂತಹ ಕ್ರಾಂತಿಕಾರಿ ಕೆಲಸಗಳಿಂದಾಗಿ, ಇಲ್ಲಿ ರೈತರ ಸಮಸ್ಯೆಗಳಿಗೆ ಮತ್ತು ನೀರಾವರಿ ಚಿಂತನೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಸಾವಿರಾರು ಭಕ್ತರು ಶಿಸ್ತಿನಿಂದ ಕುಳಿತು ಪ್ರವಚನಗಳನ್ನು ಆಸ್ವಾದಿಸುವುದು ಇಲ್ಲಿನ ಶಿಸ್ತಿಗೆ ಹಿಡಿದ ಕನ್ನಡಿಯಾಗಿದೆ.

(Visited 1 times, 1 visits today)