ತುಮಕೂರು:
ಸಿದ್ಧಗಂಗಾ ಶ್ರೀಗಳು ದೈಹಿಕವಾಗಿ ಕ್ಷೀಣಿಸಿದರೂ ದೈವಿ ಶಕ್ತಿಯಿಂದ ಆರೋಗ್ಯದಲ್ಲಿ ಪ್ರತಿ ಕ್ಷಣದಲ್ಲೂ ಚೇತರಿಕೆ ಕಾಣುತ್ತಿದ್ದಾರೆ ಸಿಎಂ ಹೆಚ್.ಡಿಕೆ ಕುಮಾರಸ್ವಾಮಿಯವರು ಹೇಳಿದ್ದಾರೆ.
ಶ್ರೀಗಳ ಆರೋಗ್ಯವನ್ನು ವಿಚಾರಿಸಲು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳ ಆರೋಗ್ಯದಲ್ಲಿ ಯಾವುದೇ ತೊಂದರೆಯಿಲ್ಲ. ಆರೋಗ್ಯದ ತೊಂದರೆಯಿಂದ ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿರುವ ಶ್ರೀಗಳ ಆರೋಗ್ಯದಲ್ಲಿ ಪವಾಡ ರೀತಿಯಲ್ಲಿ ಚೇತರಿಕೆ ಕಂಡು ಬಂದಿದೆ. ವೈದ್ಯರು ಅಂತಿಮ ತೀರ್ಮಾನ ತೆಗೆದುಕೊಂಡು ಶ್ರೀಗಳನ್ನು ಆಸ್ಪತ್ರೆಯಿಂದ ಮಠಕ್ಕೆ ಸ್ಥಳಾಂತರಿಸಿದ ನಂತರ ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ ಕಂಡು ಬಂದಿರುವುದು ಸಮಾಧಾನ ತಂದಿದೆ. ತಜ್ಞ ವೈದ್ಯರ ನೇತೃತ್ವದಲ್ಲಿ ಡಾ: ಪರಮೇಶ ಅವರು ಶ್ರೀಗಳಿಗೆ ಮಠದಲ್ಲಿಯೇ ಚಿಕಿತ್ಸೆ ಮುಂದುವರೆಸಿದ್ದಾರೆ. ವಿದೇಶದಲ್ಲಿ ದೊರೆಯುವಂತಹ ಚಿಕಿತ್ಸಾ ವಿಧಾನವನ್ನು ಶ್ರೀಗಳಿಗೆ ನೀಡಲಾಗುತ್ತಿದ್ದು, ಭಕ್ತರು ಆತಂಕಪಡುವಂತಿಲ್ಲ ಎಂದರು.
ಶ್ರೀಗಳ ಉಸಿರಾಟಕ್ಕಾಗಿ ಕಳೆದ 12-13 ದಿನಗಳಿಂದ ವೆಂಟಿಲೇಟರ್ ಅಳವಡಿಸಲಾಗಿತ್ತು. ಅವರನ್ನು ಪುಣ್ಯಕ್ಷೇತ್ರವಾದ ಸಿದ್ದಗಂಗಾ ಮಠಕ್ಕೆ ಸ್ಥಳಾಂತರಿಸಿದ ನಂತರ ವೆಂಟಿಲೇಟರ್ ಸಹಾಯವಿಲ್ಲದೇ ವೈದ್ಯರಿಗೆ ಅಚ್ಚರಿಯಾಗುವ ರೀತಿಯಲ್ಲಿ ಸ್ವಾಭಾವಿಕವಾಗಿ ಉಸಿರಾಡುತ್ತಿರುವುದು ನಮಗೆಲ್ಲಾ ಸಂತಸ ತಂದಿದೆ. ಪರಮಪೂಜ್ಯ ಶ್ರೀಗಳಿಗೆ ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಸೇವೆಗಾಗಿ “ಭಾರತರತ್ನ” ಪ್ರಶಸ್ತಿಗೆ ಪರಿಗಣಿಸಬೇಕೆಂದು ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ:ಕೆ.ರಾಕೇಶ್‍ಕುಮಾರ್. ಜಿಲ್ಲಾಪಂಚಾಯತ್ ಸಿಇಒ ಅನೀಸ್ ಕಣ್ಮಣಿ ಜಾಯ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಮತ್ತಿತರರು ಉಪಸ್ಥಿತರಿದ್ದರು.