ತುಮಕೂರು:
ಶಿಕ್ಷಣ ಕ್ಷೇತ್ರಕ್ಕೆ ಸರಕಾರಿ ಸಂಸ್ಥೆಗಳಷ್ಟೇ ಸೇವೆಯನ್ನು ಖಾಸಗಿ ಸಂಸ್ಥೆಗಳು ನೀಡುತ್ತಿವೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.
ನಗರದ ಬಾಲಭವನದಲ್ಲಿ ಎಸ್.ಹೆಚ್.ವಿ ಶಾಲೆ ವತಿಯಿಂದ ಆಯೋಜಿಸಿದ್ದ ಸ್ಪೂರ್ತಿ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು , ಎಲ್ಲಾ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕೆಂದರೆ ಸರಕಾರಿ ಶಾಲೆಗಳಿಂದ ಅದು ಸಾಧ್ಯವಾಗದು. ಈ ನಿಟ್ಟಿನಲ್ಲಿ ಖಾಸಗಿ ಶಾಲೆಗಳು ಸಹ ತಮ್ಮ ಕೈಲಾದ ಸೇವೆಯನ್ನು ಸಲ್ಲಿಸುತ್ತಿವೆ. ಎಲ್ಲಾ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುತ್ತಿವೆ ಎಂದರು.
ನಾನು ಇಂಜಿನಿಯರ್ ಕಲಿಯುವಾಗ ಇದ್ದ 25 ಇಂಜಿನಿಯರಿಂಗ್ ಕಾಲೇಜುಗಳಲ್ಲಿ 4-5 ಸರಕಾರಿ ಕಾಲೇಜುಗಳನ್ನು ಹೊರತುಪಡಿಸಿದರೆ ಉಳಿದವು ಖಾಸಗಿ ಶಾಲೆಗಳು,ಇವುಗಳು ಇಲ್ಲದಿದ್ದರೆ ಇನ್‍ಪೋಸಿಸ್ ನಾರಾಯಣಮೂರ್ತಿ ಅಂತಹವರು ಕಲಿಯಲು ಸಾಧ್ಯವಾಗು ತ್ತಿರಲಿಲ್ಲ. ಸಾಮಾನ್ಯ ವರ್ಗದ ಜನರು ಶಿಕ್ಷಣ ಪಡೆಯುವಲ್ಲಿ ಖಾಸಗಿ ಸಂಸ್ಥೆಗಳ ಪಾತ್ರ ಹಿರಿದು ಎಂದು ಜಿ.ಬಿ.ಜೋತಿ ಗಣೇಶ್ ನುಡಿದರು.
ಇಂದು ನಮ್ಮ ಮಕ್ಕಳು ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ,ಗೆಲುವು ಪಡೆಯಬೇಕಿದೆ.ಆದ್ದರಿಂದ ಇಂಗ್ಲಿಷ್ ಕಲಿಕೆ ಅನಿವಾರ್ಯ. ಹಾಗೆಂದ ಮಾತ್ರ ಕನ್ನಡ ಬೇಡವೆಂದಲ್ಲ.ಸರಿಯಾಗಿ ಕನ್ನಡ ಕಲಿತರೇ ಮಾತ್ರ ಇಂಗ್ಲಿಷ್ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ.ಇದನ್ನು ಪ್ರತಿಯೊಬ್ಬರು ಅರಿಯಬೇಕು. ಇಂದು ದೊಡ್ಡ ಸಾಧನೆ ಮಾಡಿರುವ ಅನೇಕ ಮಹನೀಯರಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರ ಸಂಖ್ಯೆಯೇ ಹೆಚ್ಚು.ಅಧುನಿಕ ತಂತ್ರಜ್ಞಾನದಿಂದ ಜಗತ್ತೇ ಒಂದು ಗ್ರಾಮವಾಗಿರುವ ಇಂದಿನ ದಿನಗಳಲ್ಲಿ ಇಂಗ್ಲಿಷ್ ಸಹ ಅಗತ್ಯವೆಂದರು.
ಪೊಷಕರು ತಮ್ಮ ಆಸೆ, ಅಮೀಷಗಳನ್ನು ಮಕ್ಕಳ ಮೇಲೆ ಹೆರಬಾರದು.ಅವರ ಇಚ್ಚೆಯಂತೆ,ಅವರಿಗೆ ಇಷ್ಟವಿರುವ ಕ್ಷೇತ್ರಗಳಲ್ಲಿ ಮುಂದುವರೆ ಯಲು ಅವಕಾಶ ನೀಡಬೇಕು.ನಾನು ಒಂದು ಇಂಜಿನಿಯರಿಂಗ್ ಕಾಲೇಜು ನಡೆಸುತ್ತಿದ್ದು, ಇಷ್ಟವಿಲ್ಲದಿದ್ದರೂ ತಂದೆ, ತಾಯಿಗಳ ಒತ್ತಾಯಕ್ಕೆ ಇಂಜಿನಿಯರಿಂಗ್ ಸೇರುವ ಮಕ್ಕಳು,ಮೊದಲ ವರ್ಷ ಪೂರೈಸದೇ ಒದ್ದಾಡುವುದನ್ನು ನೋಡಿದ್ದೇನೆ.ಆದ್ದರಿಂದ ಮಕ್ಕಳು ಅವರ ಇಚ್ಚೆಯಂತೆ ಮುಂದುವರೆಯಲು ಅವಕಾಶ ನೀಡಿ ಎಂದು ಸಲಹೆ ನೀಡಿದ ಅವರು, ಇಂದು ಭಾರತದಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಇದಕ್ಕೆ ಕಾರಣ ಕೌಶಲ್ಯರಹಿತ ವಿದ್ಯೆ.ಇಂದಿನ ಜಾಗತಿಕ ವಿದ್ಯಮಾನಗಳಿಗೆ ಅಗತ್ಯವಿರುವ ಕೌಶಲ್ಯವನ್ನು ರೂಢಿಸಿಕೊಂಡರೆ ಯಾರು ನಿರುದ್ಯೋಗಿಯಾಗಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದ ಸಾಹಿತಿ ಡಾ.ಕವಿತಾಕೃಷ್ಣ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಡಾ.ಮಲ್ಲಿನಾಥ ಪ್ರಭು, ಕನ್ನಡ ಸೇನೆಯ ದನಿಯಕುಮಾರ್, ಎಸ್.ಹೆಚ್.ವಿ. ಶಾಲೆಯ ಮುಖ್ಯೋಪಾಧ್ಯಾಯರಾದ ನಳಿನಿ ಪ್ರಸಾದ್ ಉಪಸ್ಥಿತರಿದ್ದರು. ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

 
									 
					



