ತುಮಕೂರು:
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪಟಾಕಿಮುಕ್ತ ಪರಿಸರಸ್ನೇಹಿ ದೀಪಾವಳಿ ಹಬ್ಬ ಆಚರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಪಟಾಕಿ ಸುಡುವ ಹುಚ್ಚು ಜನರಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಪಟಾಕಿ ಸುಡುವುದರಿಂದ ಆರೋಗ್ಯದ ಮೇಲೆ, ಪರಿಸರದ ಮೇಲೆ ದುಷ್ಪರಿಣಾಮ ಬೀರುವುದಲ್ಲದೇ ವಾಯು, ಶಬ್ದ, ನೆಲ, ಜಲಮಾಲಿನ್ಯಗಳು ಒಟ್ಟಿಗೆ ಉಂಟಾಗುತ್ತದೆ. ಪಟಾಕಿ ತಯಾರಿಸಲು ಗಂಧಕ, ರಂಜಕ, ಸತು, ಲಿಥಿಯಂ, ಬೇರಿಯಂ ಸೇರಿದಂತೆ ಮೂವತ್ತಕ್ಕೂ ಹೆಚ್ಚು ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಈ ರಾಸಾಯನಿಕಗಳು ಅಸ್ತಮಾ, ಹೃದ್ರೋಗ, ಕಣ್ಣು ಉರಿ, ಚರ್ಮ ಖಾಯಿಲೆಗಳಿಗೆ ಕಾರಣವಾಗುತ್ತವೆ. ಅಲ್ಲದೇ ಪಟಾಕಿಯಿಂದ ಹೊಗೆ, ಸದ್ದು, ಅಗ್ನಿ ದುರಂತ, ರಸ್ತೆ ಅಪಘಾತ, ಬಾಲಕಾರ್ಮಿಕ ಶೋಷಣೆ, ಕಸ ಉತ್ಪಾದನೆ, ಮತ್ತಿತರ ಅನಾಹುತಗಳು ಸಂಭವಿಸುತ್ತವೆ.
ಪಟಾಕಿ ಬದಲು ಎಣ್ಣೆದೀಪ, ರಂಗೋಲಿ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಂದಿನ ಪೀಳಿಗೆಗೆ ಸುಂದರ ಪರಿಸರವನ್ನು ಉಳಿಸಬೇಕು. ಪಟಾಕಿ ಸಿಡಿಸುವುದು ಪರಿಸರ ವಿರೋಧಿ ಎಂದು ತಿಳಿದು ಪಟಾಕಿ ಖರೀದಿಸಲು ವಿನಿಯೋಗಿಸುವ ಹಣವನ್ನು ಮರಗಿಡ ಬೆಳೆಸಲು, ಪುಸ್ತಕ ಖರೀದಿ, ಮಕ್ಕಳ ಭವಿಷ್ಯ ನಿರ್ಮಿಸಲು ಉಪಯೋಗಿಸಬೇಕು.
ಬರುವ 27 ರಿಂದ 29ರವರೆಗೆ ಆಚರಿಸಲಾಗುವ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವವರು ರಾತ್ರಿ 8 ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಸಿಡಿಸಬೇಕು. ಜಿಲ್ಲೆಯ ಎಲ್ಲ ನಗರ, ಪಟ್ಟಣ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿ ಸಾಧ್ಯವಾದ ಮಟ್ಟಿಗೆ ಸಾಮೂಹಿಕವಾಗಿ ಪಟಾಕಿ ಸಿಡಿಸುವ ಪ್ರಯತ್ನ ಮಾಡಬೇಕು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿಗಳು ತಿಳಿಸಿದ್ದಾರೆ.