ತುಮಕೂರು:

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗ್ರಾಮ ಪಂಚಾಯತಿ ನೌಕರರು ಜಿಲ್ಲಾ ಪಂಚಾಯತ್ ಕಚೇರಿಗೆ ಮನವಿ ಸಲ್ಲಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಮೇಶ್ (ಉಪ ಕಾರ್ಯದರ್ಶಿ-2) ಮನವಿ ಸಲ್ಲಿಸಿದರು.
ಸರ್ಕಾರ ಕಳೆದ 2 ವರ್ಷಗಳಿಂದ ಗ್ರಾ.ಪಂ. ನೌಕರರ ವೇತನ ಪಾವತಿಗೆ ಬೇಕಾಗಿರುವ ಹಣವನ್ನು ಸರ್ಕಾರವೇ ಭರಿಸುವ ತೀರ್ಮಾನ ಮಾಡಿರುವುದು ಸ್ವಾಗತಾರ್ಹ. ರಾಜ್ಯದ 6025 ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 6500 ಸಿಬ್ಬಂದಿಗಳಿಗೆ ರೂ. 900 ಕೋಟಿ ರೂ. ಬೇಕಾಗಿರುತ್ತದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 518 ಕೋಟಿ ರೂ. ಮಾತ್ರ ಮಂಜೂರಾತಿ ನೀಡಿದೆ.
ಕಳೆದ 2 ವರ್ಷಗಳಿಂದ ಸಿಬ್ಬಂದಿ ವೇತನ ಬಾಕಿ ಉಳಿದಿದೆ. 3 ತಿಂಗಳಿಗೊಮ್ಮೆ ಬಿಡುಗಡೆಯಾದ ಕಂತಿನ ಹಣದಲ್ಲಿ 2 ತಿಂಗಳು ವೇತನಕ್ಕಾಗಿ ಮಾತ್ರ ಹಣ ಸಾಕಾಗುತ್ತದೆ. 2 ವರ್ಷಗಳಿಂದ 8 ತಿಂಗಳವರೆಗೆ ಬಾಕಿ ಇದೆ. ಬಾಕಿ ಇರುವ ಹಣವನ್ನು ಶೀಘ್ರ ಬಿಡುಗಡೆಗೊಳಿಸುವಂತೆ ಮಾರ್ಗದರ್ಶನ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ವಿವಿಧ ಬೇಡಿಕೆಗಳಾದ ಎಲ್ಲಾ ಸಿಬ್ಬಂದಿಗಳ ವೇತನಕ್ಕಾಗಿ ಕೊರತೆ ಇರುವ 382 ಕೋಟಿ ರೂ ಹಣಕಾಸಿನ ಮಂಜೂರಾತಿ, ಕಂಪ್ಯೂಟರ್ ಆಪರೇಟರ್‍ಗಳಿಗೆ ಬಡ್ತಿ, ಕರವಸೂಲಿಗಾರರ ಮತ್ತು ಕಂಪ್ಯೂಟರ್ ಆಪರೇಟರ್ ಕೋಟ ಹುದ್ದೆಗೆ ಶೇ.70 ರಿಂದ 100 ಕೋಟಾ ಹೆಚ್ಚಳ, ಎಲ್ಲಾ ಸಿಬ್ಬಂದಿಗಳಿಗೆ ಪೆನ್ಷನ್ ಮಂಜೂರು, ವೈದ್ಯಕೀಯ ವೆಚ್ಚ, ಅನುಮೋದನೆ ಆಗದೆ ಉಳಿದ ಸ್ವಚ್ಛತಗಾರರಿಗೆ ಅನುಮೋದನೆ ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಶೀಘ್ರವೇ ಬಗೆಹರಿಸುವಂತೆ ಮನವಿಯಲ್ಲಿ ಕೋರಲಾಗಿದೆ. ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ (ಸಿಐಟಿಯು) ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಈ ಸಂದರ್ಭದಲ್ಲಿ ಮಾತನಾಡಿದರು.
ಕರ್ನಾಟಕ ರಾಜ್ಯ ಗ್ರಾ.ಪಂ. ನೌಕರರ ಸಂಘದ ಜಿಲ್ಲಾ ಸಮಿತಿಯ ಅಧ್ಯಕ್ಷ ಎನ್.ಕೆ.ಸುಬ್ರಹ್ಮಣ್ಯ, ಖಜಾಂಚಿ ರಂಗನಾಥ್, ಪ್ರಧಾನ ಕಾರ್ಯದರ್ಶಿ ಹೆಚ್.ಡಿ. ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.





