ಗುಬ್ಬಿ : ಕೆ.ಎಂ.ಎಫ್. ಪಶು ಆಹಾರ ಘಟಕದಲ್ಲಿ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು!!

ತುಮಕೂರು:

      ಗುಬ್ಬಿಯ ಕೆ.ಎಂ.ಎಫ್. ಪಶು ಆಹಾರ ಘಟಕದಲ್ಲಿ ಕರ್ತವ್ಯದಲ್ಲಿದ್ದ ಗುತ್ತಿಗೆ ಕಾರ್ಮಿಕ ಮಹಿಳೆ ಯಂತ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

      ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಹಾಜರಾದ ಪಟ್ಟಣದ ಹೊರವಲಯದ ಕರೇಕಲ್ಲುಬಾರೆ ಬಡಾವಣೆಯ ಮಂಗಳಮ್ಮ(30) ಘಟಕದಲ್ಲಿನ ಹೊಸ ಯೂನಿಟ್‍ನಲ್ಲಿನ ಹೊಸ ಯಂತ್ರಗಳಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿನ ದೊಡ್ಡ ಗಾತ್ರದ ಮೋಟಾರ್ ಬೆಲ್ಟ್ ಗೆ ಸಿಲುಕಿದ ಮಂಗಳಮ್ಮ ತೀವ್ರ ಅಸ್ವಸ್ಥರಾದರು. ಗುಬ್ಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟ ತಕ್ಷಣ ಆತಂಕದಲ್ಲಿದ್ದ ಘಟಕದಲ್ಲಿದ್ದ ನೂರಾರು ಕಾರ್ಮಿಕರು ಹಾಗೂ ಮೃತ ಮಂಗಳಮ್ಮ ಅವರ ಸಂಬಂಧಿಕರು ಕಾರ್ಖಾನೆ ಮುಂಭಾಗ ಗೇಟ್ ಬಳಿ ಪ್ರತಿಭಟನೆಗೆ ಮುಂದಾದರು. ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಸಾಥ್ ನೀಡಿದ ಕಾರ್ಮಿಕರು ಮಂಗಳಮ್ಮ ಸಾವಿಗೆ ನ್ಯಾಯ ಕೊಡುವಂತೆ ಆಗ್ರಹಿಸಿದರು.

      ಮೃತ ಮಹಿಳೆ ಪತಿ ಗಾರೆ ಕೆಲಸ ಮಾಡುತ್ತಿದ್ದು, ಎಂಟು ವರ್ಷದ ಮಗಳಿದ್ದಾಳೆ. ಸ್ಥಳದಲ್ಲಿ ಮಂಗಳಮ್ಮ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. 

      ಕಾರ್ಮಿಕ ಮಂಗಳಮ್ಮ ಅವರ ಸಾವಿಗೆ ಅಲ್ಲಿನ ಮೇಲ್ವಿಚಾರಕರು ಹಾಗೂ ಘಟಕದ ಮುಖ್ಯ ವ್ಯವಸ್ಥಾಪಕರು ಕಾರಣ ಎಂದು ಆಕ್ರೋಶ ಹೊರಹಾಕಿದ ನೂರಾರು ಹೊರಗುತ್ತಿಗೆ ಕಾರ್ಮಿಕರು ದಿಢೀರ್ ಪ್ರತಿಭಟನೆ ನಡೆಸಿದರು.

       ಒಂದು ತಾಸು ಪ್ರತಿಭಟನೆ ನಡೆಸಿದ ಕಾರ್ಮಿಕರ ಬಳಿ ಪೊಲೀಸರು ಆಗಮಿಸಿದ ಬಳಿಕ ಘಟಕದಿಂದ ಹೊರ ಬಂದ ಘಟಕದ ಮುಖ್ಯ ವ್ಯವಸ್ಥಾಪಕರು ಘಟನೆಯ ಸಮಜಾಯಷಿ ನೀಡಲು ಮುಂದಾದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗ್ರಾಪಂ ಸದಸ್ಯ ಈರಣ್ಣ ದಲಿತ ಮಹಿಳಾ ಕಾರ್ಮಿಕ ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಇಡೀ ಕುಟುಂಬಕ್ಕೆ ಅಧಾರವಾಗಿದ್ದ ಮಂಗಳಮ್ಮ ಅವರ ಸಾವು ಅನ್ಯಾಯವಾಗಿದೆ. ತುಂಬಾ ಅಪಾಯಕಾರಿಯಾದ ಮೋಟಾರ್ ಬಳಿ ಜೋಳ ಸುರಿಯುವ ಕೆಲಸ ಮಹಿಳೆಯರು ಮಾಡುವಂತಿಲ್ಲ. ಅಂತಹ ಅಪಾಯ ಸ್ಥಳಕ್ಕೆ ಮಂಗಳಮ್ಮ ಅವರನ್ನು ಕಳುಹಿಸಿದ ಮೇಲ್ವಿಚಾರಕರ ವಿರುದ್ದ ಕ್ರಮವಹಿಸಬೇಕು. ಮಂಗಳಮ್ಮ ಕುಟುಂಬಕ್ಕೆ 20 ಲಕ್ಷ ರೂಗಳ ಪರಿಹಾರ ನೀಡಬೇಕು. ಜತೆಗೆ ಆಕೆಯ ಎಂಟು ವರ್ಷದ ಮಗಳಿಗೆ ಶಿಕ್ಷಣ ಒದಗಿಸಿ ಉದ್ಯೋಗ ಕಲ್ಪಿಸಬೇಕು ಎಂದು ಆಗ್ರಹಿಸಿದರು.

        145 ಮಂದಿ ಕಾರ್ಮಿಕರನ್ನು ದುಡಿಸಿಕೊಳ್ಳುವ ಕೆಎಂಎಫ್ ಮೂಲ ಸಂಸ್ಥೆ ಅಥವಾ ಗುತ್ತಿಗೆ ನಡೆಸುವ ಸಂಸ್ಥೆ ಗುತ್ತಿಗೆ ಕಾರ್ಮಿಕರಿಗೆ ಮೂಲ ವ್ಯವಸ್ಥೆ ಕಲ್ಪಿಸಿಲ್ಲ. ಆರೋಗ್ಯ ಕಾರ್ಡ್ ವಿತರಣೆ ಮಾಡಿಲ್ಲ. ಅವರ ವೇತನದಲ್ಲಿ ಕಡಿತಗೊಳ್ಳುವ ಪಿಎಫ್ ಹಾಗೂ ಇಎಸ್‍ಐ ಹಣದ ಮಾಹಿತಿ ತಿಳಿದಿಲ್ಲ. ಕೋವಿಡ್ 19 ತುರ್ತು ಸ್ಥಿತಿಯಲ್ಲಿ ಯಾವುದೇ ಸುರಕ್ಷತೆ ಕಾಪಾಡದೇ ಎಂದಿನಂತೆ ಎಲ್ಲಾ ಕಾರ್ಮಿಕರಿಂದ ದುಡಿಸಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಸಾವನ್ನಪ್ಪುವ ಕಾರ್ಮಿಕರಿಗೆ ವಿಶೇಷ ವಿಮೆ ನೀಡಬೇಕು. ಲಕ್ಷಾಂತರ ರೂಗಳು ದೊರೆಯಬೇಕು. ನೂರಾರು ಮಂದಿ ಮಹಿಳಾ ಸಿಬ್ಬಂದಿ ಇರುವಲ್ಲಿ ವಿಶೇಷ ಸಮಿತಿಗಳ ರಚನೆ ಮಾಡಿ ಸಂರಕ್ಷಣೆ ನೀಡಬೇಕು. ಆದರೆ ಯಾವುದೇ ನಿಯಮ ಪಾಲಿಸದೇ ಸರ್ಕಾರ ಸ್ವಾಮ್ಯದ ಈ ಘಟಕ ಈ ರೀತಿ ವರ್ತಿಸಿರುವುದು ಸರಿಯಲ್ಲ. ಮೃತ ಮಂಗಳಮ್ಮ ಅವರಿಗೆ ಸೂಕ್ತ ಪರಿಹಾರ ನೀಡುವ ಜತೆಗೆ ಇಲ್ಲಿನ ಕಾರ್ಮಿಕರ ಹಿತ ಕಾಯಲು ವಿಶೇಷ ಭತ್ಯೆ, ಸಮಿತಿ ರಚನೆ ಮಾಡಬೇಕು ಎಂದು ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳಾದ ಸುಬ್ರಹ್ಮಣ್ಯ, ಷಣ್ಮುಖ ಒತ್ತಾಯಿಸಿದರು.

      ನಂತರ ಸ್ಥಳಕ್ಕೆ ಧಾವಿಸಿದ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ತುಮಕೂರು ಹಾಲು ಒಕ್ಕೂಟ ಅಧ್ಯಕ್ಷ ಮಹಾಲಿಂಗಯ್ಯ, ನಿರ್ದೇಶಕ ಚಂದ್ರಶೇಖರ್, ಘಟಕದ ಮುಖ್ಯ ವ್ಯವಸ್ಥಾಪಕ ಚಂದ್ರಶೇಖರ್, ಗುತ್ತಿಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮೃತ ಮಂಗಳಮ್ಮ ಅವರ ಕುಟುಂಬಕ್ಕೆ ಘಟಕ ಹಾಗೂ ಗುತ್ತಿಗೆ ಸಂಸ್ಥೆಯಿಂದ ಒಟ್ಟು 18 ಲಕ್ಷ ರೂಗಳ ಪರಿಹಾರ ನೀಡುವ ಜತೆಗೆ ಆಕೆಯ ಮಗುವಿಗೆ ಶಿಕ್ಷಣ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಶಾಸಕರನ್ನು ಮುತ್ತಿಗೆ ಹಾಕಿದ ನೂರಾರು ಕಾರ್ಮಿಕರು ಅಲ್ಲಿನ ಖಾಯಂ ನೌಕರರಿಂದ ಆಗುವ ದೌರ್ಜನ್ಯವನ್ನು ಬಿಚ್ಚಿಟ್ಟರು. ವಾಸ್ತಾವಾಂಶ ಅರಿತ ಶಾಸಕರು ಮುಂದಿನ ಸೋಮವಾರ ಗುತ್ತಿಗೆದಾರರು ಹಾಗೂ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಇಲ್ಲಿನ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸಿ ಕಾರ್ಮಿಕರ ಸೌಕರ್ಯವನ್ನು ಸರ್ಕಾರದಿಂದ ಹಾಗೂ ಕೆಎಂಎಫ್‍ನಿಂದ ಒದಗಿಸುವ ಭರವಸೆ ನೀಡಿದ ಬಳಿಕ ಕಾರ್ಮಿಕರು ಧರಣಿ ಹಿಂಪಡೆದರು.

      ಈ ಸಂದರ್ಭದಲ್ಲಿ ಮುಖಂಡರಾದ ಎಚ್.ಟಿ.ಭೈರಪ್ಪ, ಪಪಂ ಸದಸ್ಯ ಜಿ.ಎನ್.ಅಣ್ಣಪ್ಪಸ್ವಾಮಿ, ಎಪಿಎಂಸಿ ಸದಸ್ಯ ಲಕ್ಷ್ಮೀರಂಗಯ್ಯ, ಸಿದ್ದರಾಜು, ಬಿಲ್ಲೇಪಾಳ್ಯ ನರಸಿಂಹಮೂರ್ತಿ, ದಸಂಸ ಸಂಚಾಲಕ ಜಿ.ಸಿ.ನರಸಿಂಹಮೂರ್ತಿ, ಶಿವಲಿಂಗಯ್ಯ ಇತರರು ಇದ್ದರು.

 

 

 

 

(Visited 25 times, 1 visits today)

Related posts