ಕುಣಿಗಲ್:

      ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ಮಹಾರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವ ಚಾಲನೆಗೂ ಮುನ್ನ ಮೊದಲ ಪೂಜೆಯ ಷಟಸ್ಥ್ಥ ಧ್ವಜ ಹರಾಜು ನಡೆಯಿತು. ಬೆಳಗಾವಿ ಹರೇಮಠ ಅಮರನಾಥ ಗುರುಕುಲದ ಚಂದ್ರಶೇಖರ್ ಶಾಸ್ತ್ರಿ 2.46 ಲಕ್ಷ ರೂಪಾಯಿಗೆ ಪಡೆದರು.

      ಮಧ್ಯಾಹ್ನ 12.30ಕ್ಕೆ ರಥದ ಗಾಲಿಗೆ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ತೆಂಗಿನಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಸುಡುವ ಬಿಸಿಲು ಲೆಕ್ಕಿಸದೆ ರಾಜ್ಯದ ನಾನಾ ಭಾಗದಿಂದ ಬಂದಿದ್ದ ಭಕ್ತರು ರಥಕ್ಕೆ ಹೂ, ಧವನ, ಬಾಳೆಹಣ್ಣು ಹಾಗೂ ಕರಿ ಮೆಣಸು ತೂರಿ ಹರಕೆ ಸಲ್ಲಿಸಿದರು. ಭಕ್ತರ ದಣಿವಾರಿಸಲು ದಾರಿಯುದ್ದಕ್ಕೂ ನೀರು, ಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ವಿತರಿಸಲಾಯಿತು.

      ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪತ್ನಿ ತ್ರಿಷಿಕಾ ಯದುವೀರ, ಆರ್ಎಲ್ ಸಮೂಹ ಸಂಸ್ಥೆ ಚೇರ್ಮನ್ ಡಾ.ವಿಜಯ ಸಂಕೇಶ್ವರ, ಬಾಳೆಹೊನ್ನೂರು ಶಾಖಾ ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಕುಪ್ಪೂರು ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಮಠದ ಡಾ.ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಬಿದನಗೆರೆ ಸತ್ಯಶನೇಶ್ವರ ಕ್ಷೇತ್ರದ ಧನಂಜಯ ಗುರೂಜಿ, ವಿಎಸಿ ಶಿವಕುಮಾರ್, ದೇವಸ್ಥಾನದ ಇಒ ಧನಲಕ್ಷ್ಮೀ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಶ್ರೀದೇವಿ ಶೆಟ್ಟರ್ ಇತರರಿದ್ದರು.

ದಾಸೋಹ ಮನೆಯಲ್ಲಿಯೂ ಪ್ರಸಾದ:

      ಭಕ್ತರಿಗೆ ದಾಸೋಹ ಮಹಾಮನೆಯಲ್ಲಿ ದಾಸೋಹ ಸಮಿತಿ ಅಧ್ಯಕ್ಷ ವಿಶ್ವನಾಥ್ ಬುಳ್ಳ ನೇತೃತ್ವದಲ್ಲಿ ಪ್ರಸಾದ ವಿತರಿಸಲಾಯಿತು. ಸುಮಾರು 50 ಸಾವಿರ ಮಂದಿ ಪ್ರಸಾದ ಸ್ವೀಕರಿಸಿದರು. ಉತ್ತರ ಕರ್ನಾಟಕದ ಗೋಧಿ ಪಾಯಸ, ಪಲ್ಯ, ಅನ್ನ, ಸಾರು, ಮಜ್ಜಿಗೆ ಹಾಗೂ ಬಾತ್ ಉಣಬಡಿಸಲಾಯಿತು.

(Visited 19 times, 1 visits today)