ಮಧುಗಿರಿ:

      ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲೇ ಸೀಡ್‍ಬಾಲ್ ತಯಾರಿ ಹಾಗೂ ಬಿತ್ತನೆ ಕಾರ್ಯದ ತರಬೇತಿ ನೀಡುವುದು ಇಂದಿನ ದಿನಗಳಲ್ಲಿ ಮಹತ್ವದ್ದಾಗಿದೆ ಎಂದು ಬಿಇಓ ರಂಗಪ್ಪ ತಿಳಿಸಿದರು.

      ಮಧುಗಿರಿ ಪಟ್ಟಣದ ಮಾಲೀಮರಿಯಪ್ಪ ರಂಗ ಮಂದಿರದಲ್ಲಿ ಪುರಸಭೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸೀಡ್‍ಬಾಲ್ ತಯಾರಿ ಹಾಗೂ ಬಿತ್ತನೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಿಸರದಿಂದ ಮನುಷ್ಯನ ಬದುಕು ಸುಂದರವಾಗಿ ಹಾಗೂ ಆರೋಗ್ಯವಾಗಿದೆ. ಇದನ್ನು ಇಂದು ನಾವೆಲ್ಲ ಅವನತಿಯ ಅಂಚಿಗೆ ತಂದು ನಿಲ್ಲಿಸಿದ್ದೇವೆ. ಹೀಗೆ ಮುಂದುವರಿದಲ್ಲಿ ಪರಿಸರದಿಂದ ಮನುಕುಲಕ್ಕೆ ಅಪಾಯವಿದೆ. ಅದಕ್ಕಾಗಿ ಪರಿಸರವನ್ನು ಶುಚಿಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಪುರಸಭೆ ಸಿಬ್ಬಂದಿಗಳು ಮಧುಗಿರಿ ಸುತ್ತಲಿನ ಪ್ರಾಕೃತಿಯ ಬೆಟ್ಟ ಹಾಗೂ ನೆಡುತೋಪಿನಲ್ಲಿ ಈ ಸೀಡ್‍ಬಾಲ್‍ಗಳನ್ನು ಬಿತ್ತನೆ ಮಾಡುವುದರಿಂದ ಉತ್ತಮ ಮಳೆಯಾದರೆ ಪ್ರಕೃತಿ ಸುಂದರ ಹಾಗೂ ಆರೋಗ್ಯಕರವಾಗಿರುತ್ತದೆ. ಈ ಕೆಲಸಕ್ಕೆ ಕೈ ಹಾಕಿರುವ ಪುರಸಭೆಯ ಮುಖ್ಯಾಧಿಕಾರಿ ಲೋಹಿತ್‍ರವರ ಕಾರ್ಯ ಶ್ಲಾಘನೀಯ ಎಂದರು.

      ಪುರಸಭೆ ಮುಖ್ಯಾಧಿಕಾರಿ ಡಿ.ಲೋಹಿತ್ ಮಾತನಾಡಿ ಮೊದಲಿಗೆ 10 ಸಾವಿರ ಸೀಡ್‍ಬಾಲ್ ತಯಾರಿಸಲು ಉದ್ದೇಶಿಸಿದ್ದೇವೆ. ಅದರಲ್ಲಿ ಬಿದಿರು, ಹೊಂಗೆ, ಹಾಗೂ ಸೀತಾಫಲ ಬೀಜವನ್ನು ಮಣ್ಣಿನ ಉಂಡೆಯಲ್ಲಿ ಅಡಗಿಸಿ ಸಂರಕ್ಷಿಸಲಾಗುತ್ತದೆ. ಇದನ್ನು ಮಳೆಗಾಲದಲ್ಲಿ ಬೆಟ್ಟದ ಸಾಲುಗಳಲ್ಲಿ ಬಿತ್ತನೆ ಮಾಡಲಾಗುತ್ತದೆ. ಹಿಂದೆ ಇಲ್ಲೆಲ್ಲ ದಟ್ಟವಾದ ಕಾಡುಗಳಿದ್ದು, ಈಗ ಬರಿದಾಗಿದೆ. ಮರಗಳ ಎಲೆಗಳ ಉದುರಿದಾಗ ಅದರಿಂದ ನೀರನ್ನು ಹೀರಿಕೊಳ್ಳುವ ಮಣ್ಣಿನ ಶಕ್ತಿ ಹೆಚ್ಚಾಗಿ ಸಾರಾಂಶ ಹೆಚ್ಚಾಗುತ್ತದೆ. ಇದರಿಂದ ಅಂತರ್ಜಲವೂ ಸಹ ವೃದ್ಧಿಯಾಗಲಿದ್ದು ನೀರಿನ ಬವಣೆ ದೂರಾಗುತ್ತದೆ. ಮರಗಳ ಎಲೆಗಳ ಉದುರಿದಾಗ ಅದರಿಂದ ನೀರನ್ನು ಹೀರಿಕೊಳ್ಳುವ ಮಣ್ಣಿನ ಶಕ್ತಿ ಹೆಚ್ಚಾಗಿ ಸಾರಾಂಶ ಹೆಚ್ಚಾಗುತ್ತದೆ. ಇದರಿಂದ ಅಂತರ್ಜಲವೂ ಸಹ ವೃದ್ಧಿಯಾಗಲಿದ್ದು ನೀರಿನ ಬವಣೆ ದೂರಾಗುತ್ತದೆ. ಕಾಡುಪ್ರಾಣಿ-ಕಾಡುಗಳಿಂದ ಮನುಷ್ಯನ ಜೀವನ ಚಕ್ರ ಅಡಗಿದೆ. ಇದರ ಅರಿವಿಲ್ಲದೆ ಇಂದು ನಾವೆಲ್ಲ ಕಾಡನ್ನು ನಾಶ ಮಾಡುತ್ತಿದ್ದೇವೆ. ಅದಕ್ಕಾಗಿಯೇ ಕಾಡುಪ್ರಾಣಿಗಳು ನಾಡಿಗೆ ಬರುತ್ತಿವೆ. ವಿದ್ಯಾರ್ಥಿಗಳು ಈ ಜೀವನ ಕ್ರಮದ ಸುಗಮ ಹಾದಿಗೆ ಕಾಡು ಬೆಳೆಸಲು ಮುಂದಾಗಬೇಕು ಎಂದು ಮನವರಿಕೆ ಮಾಡಿಕೊಟ್ಟರು.

      ಸಾಮಾಜಿಕ ಅರಣ್ಯ ಇಲಾಖೆಯ ಆರ್.ಎಫ್.ಓ ನಾಗರಾಜು ಮಾತನಾಡಿ ಅರಣ್ಯವನ್ನು ರಕ್ಷಿಸಲು ಪುರಸಭೆ ಹಾಗೂ ಶಿಕ್ಷಣ ಇಲಾಖೆ ಮುಂದಾಗಿರುವುದು ಸಂತಸ ತಂದಿದೆ. ಇಂದು ಮರಗಳ ನಾಶ ಮಾಡುವ ಸ್ಥಿತಿಯಲ್ಲಿರುವುದು ಆತಂಕವಾಗಿದೆ. ಕಾಡು ಇಲ್ಲದೆ ನಾಡು ಉಳಿಯಲ್ಲ. ಈ ಸತ್ಯವನ್ನು ಅರಿತು ನಾವೆಲ್ಲ ಬಾಳಬೇಕು ಎಂದು ತಿಳಿಸಿದರು.

     ಕಾರ್ಯಕ್ರಮದಲ್ಲಿ ಪುರಸಭೆ ಪರಿಸರ ಅಭಿಯಂತರೆ ಸೌಮ್ಯ, ಬಿ.ಆರ್.ಸಿ. ಆನಂದ ಕುಮಾರ್, ಪತಾಂಜಲಿ ಯೋಗ ಶಿಕ್ಷಕ ಎಂ.ಎನ್.ನರಸಿಂಹಮೂರ್ತಿ, ಆರೋಗ್ಯ ನಿರೀಕ್ಷಕ ಬಾಲಾಜಿ, ಸರ್ಕಾರಿ ಫ್ರೌಢಶಾಲೆಯ ಮುಖ್ಯಶಿಕ್ಷಕಿ ನಾಯಕ್ ಕಮಲಾನಾರಾಯಣ್,  ಇದ್ದರು.

(Visited 48 times, 1 visits today)