ತುಮಕೂರು:

      ತುಮಕೂರು ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯನ್ನು ವಜಾ(ಸೂಪರ್‍ಸೀಡ್)ಗೊಳಿಸಿ ತಮ್ಮನ್ನು ಒಂದು ವರ್ಷದ ಅವಧಿಗೆ ಬ್ಯಾಂಕಿನ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ಬೆಂಗಳೂರು ವಿಭಾಗದ ಸಹಕಾರ ಸಂಘಗಳ ಜಂಟಿ ನಿಬಂಧಕರು ಜುಲೈ 19ರಂದು ಹೊರಡಿಸಿರುವ ಆದೇಶದನ್ವಯ ಜುಲೈ 20ರ ಸಂಜೆ ಆಡಳಿತಾಧಿಕಾರಿಯ ಸ್ವಯಂ ಪ್ರಭಾರವನ್ನು ವಹಿಸಿಕೊಂಡಿದ್ದೇನೆ ಎಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್‍ಕುಮಾರ್ ಅವರು ತಿಳಿಸಿದರು.

         ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಆಗಿರುವ ಹಿನ್ನೆಲೆಯಲ್ಲಿ ಬ್ಯಾಂಕಿನ ಮುಂದಿನ ಕಾರ್ಯಚಟುವಟಿಕೆಗಳನ್ನು ರೂಪಿಸುವ ಬಗ್ಗೆ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

       ಸೂಪರ್ ಸೀಡ್ ಮಾಡಲು ಕಾರಣವೇನೆಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು 6 ಪುಟಗಳನ್ನೊಳಗೊಂಡ ಜಂಟಿ ನಿಬಂಧಕರ ಆದೇಶದಲ್ಲಿ ಪ್ರತ್ಯೇಕವಾಗಿ ಕಾರಣವೇನೆಂದು ತಿಳಿಸಿಲ್ಲ. ಆದರೆ ಬ್ಯಾಂಕಿನ ಹಣಕಾಸು ವ್ಯವಹಾರದಲ್ಲಿ ಲೋಪವಾಗಿರುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಈ ವಿಷಯದ ಬಗ್ಗೆ ವಿವರವಾದ ಮಾಹಿತಿ ನನಗೆ ಗೊತ್ತಿಲ್ಲ. ಜಂಟಿ ನಿಬಂಧಕರು ತನಿಖೆ ನಡೆಸಿದ್ದು, ಹಣಕಾಸು ವ್ಯವಹಾರದಲ್ಲಿ ಲೋಪವಾಗಿರುವದು ದೃಢಪಟ್ಟ ಹಿನ್ನೆಲೆಯಲ್ಲಿ ತಮ್ಮ ಅಧಿಕಾರ ಉಪಯೋಗಿಸಿಕೊಂಡು ಸಹಕಾರ ಸಂಘಗಳ ಕಾಯ್ದೆ ಕಲಂ 30ರನ್ವಯ ತಮ್ಮನ್ನು ನೇಮಕ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಡಿಸಿಸಿ ಬ್ಯಾಂಕಿನ ಅವ್ಯವಹಾರದ ಬಗ್ಗೆ ಮುಂದಿನ ಹಂತದ ತನಿಖೆ ನಡೆಸಲು ತಮಗೆ ಅಥವಾ ಇನ್ನೂ ಮೇಲಿನ ಹಂತದ ಅಧಿಕಾರಿಗಳನ್ನು ನಿಯೋಜಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.

      ಬ್ಯಾಂಕಿನ ಎಲ್ಲ ವಹಿವಾಟುಗಳು ಎಂದಿನಂತೆ ಸಾಮಾನ್ಯವಾಗಿ ನಡೆಯಲಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ. ಸದ್ಯದ ಬ್ಯಾಂಕಿನ ನಡಾವಳಿ ಹಾಗೂ ಪರಿಸ್ಥಿತಿ ಬಗ್ಗೆ ಪರಿಶೀಲಿಸಿದ ನಂತರ ನಿಯಮಾನುಸಾರ ನಡಾವಳಿಗಳನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ಮುಂದಿನ ವಾರದೊಳಗೆ ಬ್ಯಾಂಕಿನ ಹಿಂದಿನ ನಡಾವಳಿಗಳನ್ನು ಅವಲೋಕಿಸಿ ಮುಂದಿನ ನಡಾವಳಿಗಳನ್ನು ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

(Visited 28 times, 1 visits today)