ನಾಮಪತ್ರ ಹಿಂಪಡೆದ ಮುದ್ದಹನುಮೇಗೌಡರ ವಿರುದ್ಧ ಆಕ್ರೋಶ

ತುಮಕೂರು:

      ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರ ಸ್ಪರ್ಧೆಯಿಂದ ರಾಷ್ಟ್ರ ರಾಜಕಾರಣದ ಕೆಂಗಣ್ಣಿಗೆ ಗುರಿಯಾಗಿತ್ತು. ತಮ್ಮ ಇಳಿ ವಯಸ್ಸಿನಲ್ಲಿ ಮೊಮ್ಮಕ್ಕಳಿಬ್ಬರನ್ನು ಕಣಕ್ಕಿಳಿಸಿ, ತನ್ನ ಸ್ಪರ್ಧೆ ಬಯಸಿ ತುಮಕೂರಿಗೆ ಅಡಿಯಿಟ್ಟ ದೇವೇಗೌಡರು ತನ್ನ ಕೊನೆಯ ಚುನಾವಣೆ ಎಂದಿದ್ದರಾದರೂ ಹಾಲಿ ಸಂಸದ ಮುದ್ದಹನುಮೇಗೌಡರ ಬೆಂಬಲಿಗರ ಆಕ್ರೋಷ ದೇವೇಗೌಡರ ನಿದ್ದೆ ಕೆಡಿಸಿತ್ತು. ದೇವೇಗೌಡರು ಜಾತ್ಯಾತೀತ ಜನತಾದಳದ ಪರಮೋಚ್ಚ ನಾಯಕರಾಗಿದ್ದರೂ ತುಮಕೂರು ಜಿಲ್ಲೆಯ ರಾಜಕಾರಣದ ವ್ಯಾಪ್ತಿಗೆ ಗೌಡರ ಪಾದಾರ್ಪಣೆಯನ್ನ ವ್ಯಾಪಕವಾಗಿ ವಿರೋಧಿಸಿದ್ದ ಇಲ್ಲಿನ ಒಕ್ಕಲಿಗ ಸಮುದಾಯವು ಸೇರಿದಂತೆ ಇತರರು ಯಾರೂ ಒಪ್ಪಿಕೊಂಡಿರಲಿಲ್ಲ. ಹಾಗಾಗಿ ಟಿಕೆಟ್ ವಂಚಿತ ಹಾಲಿ ಸಂಸದ ಮುದ್ದಹನುಮೇಗೌಡರ ಪರವಾಗಿ ದೇವೇಗೌಡರ ವಿರೋಧಿ ಬಣ ತೊಡೆತಟ್ಟಿ ನಿಂತಿತ್ತು. ಮುದ್ದಹನುಮೇಗೌಡರಿಗೆ ಬೆಂಬಲವಾಗಿ ನಿಂತಿತ್ತು. ಮುದ್ದಹನುಮೇಗೌqರ ಬಂಡಾಯ ಸ್ಪರ್ಧೆ ಗೌಡರ ಕುಟುಂಬವಲ್ಲದೇ ಇಡೀ ಜೆಡಿಎಸ್ ಪಕ್ಷದ ನಾಯಕರ ನಿದ್ದೆಗೆಡಿಸಿತ್ತು. ಒಕ್ಕಲಿಗರ ಮತಗಳು ಇಬ್ಭಾಗವಾಗಿ ದೇವೇಗೌಡರ ವಿರೋಧಿ ಮತಗಳು ಮುದ್ದಹನುಮೇಗೌಡರ ಕಡೆ ವಾಲುತ್ತವೆ ಎಂ¨ ಭೀತಿಯಿಂದ ಮುದ್ದಹನುಮೇಗೌಡರ ಉಮೇದುವಾರಿಕೆಯನ್ನು ಹಿಂಪಡೆಯುವಂತೆ ರಾಜಿ-ಸಂಧಾನಗಳು ನಡೆಯುತ್ತಲೇ ಇದ್ದವು.

      ಆರಂಭದಲ್ಲಿ ದೊಡ್ಡ ಗೌಡರ ವಿರುದ್ಧ ಗುಡುಗಿದ ಮಂದಿಯೆಲ್ಲ ದೊಡ್ಡ ಗೌಡರಿಗೆ ತಲೆಬಾಗಿ ಹಿಂಪಡೆದದ್ದು ಯಾವ ಕಾರಣಕ್ಕೆ..? ದ್ವೇಷದ ರಾಜಕಾರಣವನ್ನೇ ಮರೆತು ಹಸ್ತಲಾಘವ ಮಾಡಿರುವುದನ್ನು ಗಮನಿಸಿದರೆ, ಮಾತುಕತೆಯ ಸಮಯದಲ್ಲಿ ಚೆಕ್ಕುಗಳ ಸಪ್ಪಳ, ಹಣದ ಝಳಪಳ ಯಾವ ರೀತಿ ಸದ್ದು ಮಾಡುತ್ತಿದೆ ಎಂದು ಸಾಮಾನ್ಯರು ಊಹಿಸಬಹುದಾಗಿದೆ.

      ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿ ಪಕ್ಷದ ವಿರುದ್ಧವೇ ಬಂಡಾಯ ಎದ್ದು ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಹಾಲಿ ಸಂಸದ ಎಸ್.ಪಿ. ಮುದ್ದಹನುಮೇಗೌಡರ ಮನವೊಲಿಸುವ ಸಂಬಂಧ ಕಾಂಗ್ರೆಸ್ ನಾಯಕರು ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ತಮ್ಮ ನಾಯಕರ ಒತ್ತಡಕ್ಕೆ ಮಣಿದಿರುವ ಮುದ್ದಹನುಮೇಗೌಡ ಅವರು ಇಂದು ಮಧ್ಯಾಹ್ನ ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ.

      ಸಂಸದ ಮುದ್ದಹನುಮೇಗೌಡರ ಬೆಂಗಳೂರಿನ ಸಂಜಯನಗರದಲ್ಲಿರುವ ನಿವಾಸದಲ್ಲಿಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ ನಾಯಕರು ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ಜೊತೆಗೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು, ಎಸ್‍ಪಿಎಂ ಹಿತೈಷಿಗಳ ಸಭೆಯನ್ನು ಸಹ ನಡೆಸಿ ಮುದ್ದಹನುಮೇಗೌಡರ ನಾಮಪತ್ರ ವಾಪಸ್ ತೆಗೆಸುವ ಸಂಬಂಧ ಮುದ್ದಹನುಮೇಗೌಡರ ಮನವೊಲಿಸುವಲ್ಲಿ ಸಫಲರಾಗಿದ್ದಾರೆ ಎನ್ನಲಾಗಿದೆ.

      ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿರ್ಧಾರದಿಂದ ಬೇಸತ್ತಿರುವ ಜಿಲ್ಲೆಯ ಕೈ ಕಾರ್ಯಕರ್ತರುಗಳು ರಾಜ್ಯ ನಾಯಕರ ಮನವೊಲಿಕೆಗೆ ಒಂದು ಹಂತದ ವರೆಗೂ ಸೊಪ್ಪು ಹಾಕಲಿಲ್ಲ. ಆದರೂ ಕೈ ನಾಯಕರು ಕಂಗೆಡದೆ ತುಮಕೂರು ಜಿಲ್ಲೆಯ ಕಾರ್ಯಕರ್ತರು ಮತ್ತು ಎಸ್‍ಪಿಎಂ ಬೆಂಬಲಿಗರ ಮನವೊಲಿಸಿ, ಮುಂದಿನ ದಿನಗಳಲ್ಲಿ ಮುದ್ದಹನುಮೇಗೌಡರಿಗೆ ಸೂಕ್ತ ಸ್ಥಾನಮಾನವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

      ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾತ್ರಿ ಮುದ್ದಹನುಮೇಗೌಡರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿ ನಾಮಪತ್ರ ವಾಪಸ್ ಪಡೆಯುವಂತೆ ಪರಿಪರಿಯಾಗಿ ಮನವಿ ಮಾಡಿದ್ದರು. ಮಾಜಿ ಪ್ರಧಾನಿ ದೇವೇಗೌಡರೇ ಕ್ಷೇತ್ರಕ್ಕೆ ಬಂದಿರುವುದರಿಂದ ಬಂಡಾಯವಾಗಿ ಸ್ಪರ್ಧಿಸುವುದು ಸರಿಯಲ್ಲ. ಅವರ ಗೆಲುವಿಗೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ, ನಾಮಪತ್ರವನ್ನು ವಾಪಸ್ ಪಡೆಯುವಂತೆ ಕೋರಿದ್ದ ಹಿನ್ನಲೆಯಲ್ಲಿ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ.  ಇದರೊಂದಿಗೆ ಮೈತ್ರಿಕೂಟದ ಅಭ್ಯರ್ಥಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸ್ವಲ್ಪ ಮಟ್ಟಿಗೆ ನಿರಾಳರಾಗಲಿದ್ದಾರೆ.

     ಲೋಕಸಭಾ ಚುನಾವಣೆ ಘೋಷಣೆಯಾಗುವ ಮೊದಲಿನಿಂದಲೂ ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟು ಕೊಡುವುದಾದರೆ ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಬಹಿರಂಗವಾಗಿಯೇ ಘೋಷಿಸಿದ್ದ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರು ತಮ್ಮ ಹೇಳಿಕೆಯಂತೆಯೇ ಚುನಾವಣೆಗೆ ಪಕ್ಷೇತರವಾಗಿ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದರು. ಆದರೆ ಪಕ್ಷದ ನಾಯಕರ ಒತ್ತಡಕ್ಕೆ ಮಣಿದು ಅವರೊಂದಿಗೆ ಮಾತುಕತೆ ಫಲಪ್ರದವಾಗಿರುವ ಹಿನ್ನೆಲೆಯಲ್ಲಿ ಇಂದು ತಾವು ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ.

      ಈ ಎಲ್ಲವನ್ನೂ ಗಮನಿಸಿದರೆ, ರಾಜಾಕಾರಣದಲ್ಲಿ ದ್ವೇಷ, ಅಸೂಯೆ, ಸ್ನೇಹ, ಸ್ವಾಭಿಮಾನ ಯಾವುದೂ ಶಾಶ್ವತವಲ್ಲ, ಕೇವಲ ತಮ್ಮ ಸ್ವ-ಹಿತಾಸಕ್ತಿಯೊಂದೇ ಶಾಶ್ವತ ಎನ್ನುವುದನ್ನ ಸಾರುವಂತಾಗಿದೆ.

(Visited 14 times, 1 visits today)

Related posts

Leave a Comment