ಸಕಾಲ ಸೇವೆಯಲ್ಲಿ ವಿಳಂಬ ಮಾಡಿದರೆ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್

 ತುಮಕೂರು :

      ವಿವಿಧ ಸರ್ಕಾರಿ ಇಲಾಖೆಗಳು ಸಾರ್ವಜನಿಕರಿಗಾಗಿ ಒದಗಿಸುತ್ತಿರುವ 640 ನಾಗರಿಕ ಸೇವೆ ಹಾಗೂ 320 ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೇವೆ ಸೇರಿದಂತೆ ಒಟ್ಟು 960 ಸಕಾಲ ಸೇವೆಗಳ ವಿಲೇವಾರಿಯಲ್ಲಿ ವಿಳಂಬ ಮಾಡುವ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡಲು ಕ್ರಮ ಕೈಗೊಳ್ಳಲಾಗುವುದೆಂದು ಸಕಾಲ ಮಿಷನ್ ನಿರ್ದೇಶಕರು ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲ ಸೂಚನೆ ನೀಡಿದರು.

      ಜಿಲ್ಲಾಧಿಕಾರಿಗಳ ಕಛೇರಿ ಕೆಸ್ವಾನ್ ಸೆಂಟರ್‍ನಲ್ಲಿಂದು ಸಕಾಲ ಸೇವೆಗಳ ಅಧಿನಿಯಮದ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಕಾನ್ಫರೆನ್ಸ್‍ನಲ್ಲಿ ಅವರು ಈ ಸೂಚನೆ ನೀಡಿದರು. ಸಂಬಂಧಿಸಿದ ನೋಡಲ್ ಅಧಿಕಾರಿಗಳು ಸಕಾಲ ಅರ್ಜಿಗಳ ವಿಲೇವಾರಿ ವರದಿಯನ್ನು ಸಕಾಲ ಪೋರ್ಟಲ್‍ನಲ್ಲಿ ಪ್ರತೀದಿನ ಅಪ್‍ಡೇಟ್ ಮಾಡಬೇಕು. ಪ್ರತಿ 15 ದಿನಗಳಿಗೊಮ್ಮೆ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು. ಸಕಾಲ ಅರ್ಜಿ ವಿಲೇವಾರಿ ಮಾಡುವಲ್ಲಿ ತಡ ಮಾಡುವ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡಲಾಗುವುದು. ಅದೇ ರೀತಿ ಸಕಾಲ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳದೆ ಸಮರ್ಪಕವಾಗಿ ವಿಲೇವಾರಿ ಮಾಡುವ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ನೀಡಲಾಗುವುದೆಂದು ತಿಳಿಸಿದರು.

      ಎಲ್ಲಾ ಅಧಿಕಾರಿಗಳು ಸಕಾಲ ವೆಬ್‍ಪೋರ್ಟಲ್‍ನಲ್ಲಿ ತಮ್ಮ ಕೆಜಿಐಡಿ ಸಂಖ್ಯೆ, ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು. ಸ್ವೀಕೃತವಾದ ಸಕಾಲ ಅರ್ಜಿಗಳ ವಿವರ, ವಿಲೇವಾರಿಯಾಗದೆ ಬಾಕಿ ಉಳಿದಿರುವ ಅರ್ಜಿಗಳ ವಿವರ, ಅರ್ಜಿ ಬಾಕಿ ಉಳಿಯಲು ಕಾರಣ, ಮತ್ತಿತರ ವಿವರಗಳನ್ನು ಪ್ರತಿದಿನ ಅಪ್‍ಡೇಟ್ ಮಾಡಬೇಕು. ಕೆಲವು ಜಿಲ್ಲೆಗಳಲ್ಲಿ 1 ವರ್ಷಕ್ಕಿಂತ ಹೆಚ್ಚು ಕಾಲ ಅರ್ಜಿಗಳನ್ನು ವಿಲೇ ಮಾಡದೆ ಬಾಕಿ ಉಳಿಸಿಕೊಂಡಿರುವುದು ತಮ್ಮ ಗಮನಕ್ಕೆ ಬಂದಿದೆ.

      ಸಾರ್ವಜನಿಕರಿಗೆ ನಿಗಧಿತ ಅವಧಿಯೊಳಗೆ ಸೇವೆ ಒದಗಿಸುವ ಸಲುವಾಗಿ ಈ ಅಧಿನಿಯಮವನ್ನು ಜಾರಿಗೆ ತರಲಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಸೇವೆ ಒದಗಿಸುವ ಕಾರ್ಯನಿರ್ವಹಿಸಬೇಕು. ಮುಂದಿನ 3 ದಿನದೊಳಗೆ ಮಾನ್ಯ ಮುಖ್ಯಮಂತ್ರಿಗಳು ಸಕಾಲ ಪ್ರಗತಿ ಪರಿಶೀಲನಾ ಸಭೆ ತೆಗೆದುಕೊಳ್ಳುವ ನಿರೀಕ್ಷೆಯಿದ್ದು, ಎಲ್ಲಾ ನೋಡಲ್ ಅಧಿಕಾರಿಗಳು ಈ ದಿನವೇ ನಿಖರ ಮಾಹಿತಿಯನ್ನು ಪೋರ್ಟಲ್‍ಗೆ ಅಪ್‍ಲೋಡ್ ಮಾಡಬೇಕು ಎಂದು ನಿರ್ದೇಶನ ನೀಡಿದರು.

      ವಿಡಿಯೋ ಕಾನ್ಫರೆನ್ಸ್ ನಂತರ ಮಾತನಾಡಿದ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಜಿಲ್ಲೆಯ ನೋಡಲ್ ಅಧಿಕಾರಿಗಳು ಎಲ್ಲಾ ಸರ್ಕಾರಿ ಕಛೇರಿಗಳ ಸೂಚನಾ ಫಲಕದಲ್ಲಿ ಸಕಾಲ ಅಧಿನಿಯಮದ ಫಲಕವನ್ನು ಪ್ರದರ್ಶಿಸಬೇಕು. ಪ್ರತಿ ತಿಂಗಳು ಸಭೆ ನಡೆಸಿ, ಮಾಹಿತಿ ಕೊರತೆಯಾದ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು. ಸಕಾಲ ನಿಯಮದಡಿ ಸೇವೆ ಬಯಸಿ ಬರುವವರಿಂದ ಕೈಬರಹದ ಅರ್ಜಿಯನ್ನು ಸ್ವೀಕರಿಸದೇ ನಿಗಧಿತ ನಮೂನೆಯಲ್ಲಿಯೇ ಅರ್ಜಿ ಸ್ವೀಕರಿಸಿ, ಅರ್ಜಿದಾರರಿಗೆ ಗಣಕೀಕೃತ ಸ್ವೀಕೃತಿಯನ್ನೇ ನೀಡಬೇಕೆಂದರಲ್ಲದೆ ಸಕಾಲ ಸಂಖ್ಯೆ ನಮೂದಿಸದೇ ಇರುವ ಪ್ರಮಾಣ ಪತ್ರಗಳಿಗೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂಬುದನ್ನು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ತಿರಸ್ಕøತವಾದ ಸಕಾಲ ಅರ್ಜಿಗಳಿಗೆ ಸ್ಪಷ್ಟಕಾರಣ ನೀಡಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಕುಲಸಚಿವ ಕೆ.ಎನ್.ಗಂಗಾನಾಯ್ಕ, ಎಲ್ಲಾ ನೋಡಲ್ ಅಧಿಕಾರಿಗಳು ಹಾಜರಿದ್ದರು.

(Visited 6 times, 1 visits today)

Related posts

Leave a Comment